– ರಾತ್ರಿಯೇ ಏಕೆ ಶಿವನಿಗೆ ಪೂಜೆ?
ಜಡೆಯಲ್ಲಿ ಗಂಡೆ, ಮೈಯೆಲ್ಲ ವಿಭೂತಿ, ಕೊರಳು-ತೋಳಿನಲ್ಲಿ ರುದ್ರಾಕ್ಷಿ ಮಾಲೆ, ಹುಲಿ ಚರ್ಮದ ಉಡುಗೆ.. ಇದು ಶಿವದೇವರ (Shiva) ಸ್ವರೂಪ. ಶಿವನೆಂದರೆ ಪ್ರಕೃತಿ.. ಆಡಂಬರವಿಲ್ಲದ ಪ್ರಜ್ಞೆ.. ಅಧ್ಯಾತ್ಮದ ಸಂಕೇತ.. ಸರಳತೆಯ ಸಾಕಾರ ಮೂರ್ತಿ. ಹಿಂದೂ ಧರ್ಮದ ಪ್ರಮುಖ ದೇವರು ಶಿವ. ಸೃಷ್ಟಿ-ಸ್ಥಿತಿ-ಲಯದ ಕಾರಣಕರ್ತ. ನಿಶ್ಕಲ್ಮಷ, ಪ್ರಾಮಾಣಿಕ ಭಕ್ತಿಗೆ ಬೆಣ್ಣೆಯಂತೆ ಕರಗುವ ಮನಸ್ಸು. ದುಷ್ಟರಿಗೆ ರುದ್ರ, ರಣಭೈರವ.
ಭಕ್ತಿಯ ಸಾಕಾರ ಮೂರ್ತಿಯಾಗಿರುವ ಶಿವನನ್ನು ಪೂಜಿಸುವುದಕ್ಕೂ ಒಂದು ದಿನವಿದೆ. ಅದೇ ‘ಶಿವರಾತ್ರಿ’ (Shivratri). ಭಾರತೀಯರು ಆಚರಿಸುವ ವಿಶೇಷ ಹಬ್ಬಗಳ ಸಾಲಿನಲ್ಲಿ ಶಿವರಾತ್ರಿಯೂ ಒಂದು. ಇಡೀ ದಿನ ಉಪವಾಸ, ಜಾಗರಣೆ ಮಾಡಿ, ಶಿವ ಪೂಜೆಯನ್ನು ಮಾಡುವ ಮೂಲಕ ಶಿವರಾತ್ರಿ ಆಚರಿಸಲಾಗುತ್ತದೆ. ತನ್ನ ನಂಬಿ ಬಂದ ಭಕ್ತರ ಇಷ್ಟಾರ್ಥಗಳಿಗೆ ಎಂದಿಗೂ ನಿರಾಸೆ ಮಾಡದ ದಯಾಮಯಿ ಶಿವನಿಗೆ ಶಿವರಾತ್ರಿಯಂದು ದೇಶಾದ್ಯಂತ ವಿಶೇಷ ಪೂಜೆಗಳು ನೆರವೇರುತ್ತವೆ. ಶಿಶಿರ ಋತುವಿನ ಮಾಘ ಮಾಸದ ಕೃಷ್ಣ ಪಕ್ಷ ಬಹುಳ ಚತುರ್ದಶಿಯಂದು ಬರುವ ಶಿವರಾತ್ರಿಯ ದಿನ ಭಕ್ತಾಧಿಗಳು ಶಂಕರನನ್ನು ನೆನೆದು ಪುನೀತರಾಗುತ್ತಾರೆ. ಇದನ್ನೂ ಓದಿ: ಮಹಾ ಶಿವರಾತ್ರಿಯಂದು ಭೇಟಿ ನೀಡಬಹುದಾದ ದಕ್ಷಿಣ ಕರ್ನಾಟಕದ ಪುರಾಣ ಪ್ರಸಿದ್ಧ ದೇವಾಲಯಗಳು
ರಾತ್ರಿಯೇ ಏಕೆ ಶಿವನಿಗೆ ಪೂಜೆ?
ಸಾಮಾನ್ಯವಾಗಿ ಎಲ್ಲಾ ಹಬ್ಬಗಳಲ್ಲೂ ದೇವರಿಗೆ ಹಗಲು ಪೂಜೆ ನಡೆಯುತ್ತದೆ. ಆದರೆ, ಶಿವರಾತ್ರಿಯ ದಿನ ರಾತ್ರಿಯ ವೇಳೆ ಪೂಜೆ, ಭಜನೆಗಳು ನಡೆಯುತ್ತವೆ. ರಾತ್ರಿ ಎಂದರೆ ಕತ್ತಲು. ಕತ್ತಲೆಂದರೆ ಅಜ್ಞಾನ. ಈ ಅಜ್ಞಾನವನ್ನು ಕಳೆದು ಸುಜ್ಞಾನ ಬೆಳಗಿಸು ಎಂದು ಆ ಶಿವನನ್ನು ಬೇಡುವ ಶುಭ ದಿನವೇ ಶಿವರಾತ್ರಿ. ಅಜ್ಞಾನ ತುಂಬಿರುವಲ್ಲಿ ಶಿವ ಸಂಚರಿಸಿ ಜ್ಞಾನ ದೀವಿಗೆ ಬೆಳಗುತ್ತಾನೆ ಎಂಬುದು ನಂಬಿಕೆ.
ಶಿವರಾತ್ರಿ ಆಚರಣೆ ಹಿಂದೆ ಹಲವು ನಂಬಿಕೆಗಳಿವೆ. ಮಹಾಶಿವರಾತ್ರಿ ಸುದಿನವೇ ಮಧ್ಯರಾತ್ರಿಯ ಸಮಯದಲ್ಲಿ ಶಿವಪರಮಾತ್ಮನಿಗೂ ಪಾರ್ವತಿ ದೇವಿಗೂ ಕಲ್ಯಾಣವಾಯಿತು. ಈ ವಿವಾಹ ಮಹೋತ್ಸವದಲ್ಲಿ ಭಾಗಿಯಾಗಲು ಮೂರು ಲೋಕಗಳಲ್ಲಿಯೂ ಜಾಗರಣೆ ಮಾಡಲಾಯಿತು. ಇದೇ ಕಾರಣಕ್ಕೆ ಶಿವರಾತ್ರಿಯಂದು ಜಾಗರಣೆ ಮಾಡಬೇಕು ಎಂದು ಹೇಳಲಾಗುತ್ತದೆ. ಇದನ್ನೂ ಓದಿ: ಮಹಾಶಿವರಾತ್ರಿಯ ಮಹತ್ವ ಏನು? ಆಚರಣೆ ಹೇಗಿರಬೇಕು?
ಶಿವರಾತ್ರಿ ಆಚರಣೆ ಬಗ್ಗೆ ಶಿವಪುರಾಣ ಏನು ಹೇಳುತ್ತೆ?
ಶಿವಪುರಾಣದಲ್ಲಿ ಶಿವಾರಾತ್ರಿಯ ಆಚರಣೆ ಬಂದಿರುವ ಬಗ್ಗೆ ಒಂದು ಸಣ್ಣ ಕಥೆ ಇದೆ. ದೇವಲೋಕದಲ್ಲಿ ಒಮ್ಮೆ ಬ್ರಹ್ಮ ಹಾಗೂ ವಿಷ್ಣುವಿನ ನಡುವೆ ಯಾರು ಶ್ರೇಷ್ಠರು ಎಂಬ ವಿಷಯಕ್ಕೆ ವಾಗ್ವಾದ ನಡೆಯುತ್ತದೆ. ಮಹಾ ದೇವತೆಗಳಿಬ್ಬರನ್ನೂ ಸಮಾಧಾನ ಮಾಡುವುದು ದುರ್ಲಭ ಎನಿಸಿದಾಗ, ದೇವತೆಗಳೆಲ್ಲ ಹೋಗಿ ಪರಶಿವನನ್ನು ಬೇಡಿಕೊಳ್ಳುತ್ತಾರೆ. ವಿಷ್ಣು ಹಾಗೂ ಬ್ರಹ್ಮರ ಜಗಳವನ್ನು ಶಮನ ಮಾಡುವಂತೆ ಕೋರಿಕೊಳ್ಳುತ್ತಾರೆ. ಆಗ ವಿಷ್ಣು ಮತ್ತು ಬ್ರಹ್ಮರ ನಡುವೆ ಶಿವ, ಅಗ್ನಿಕಂಭದ ರೂಪದಲ್ಲಿ ಬಂದು ನಿಂತು ತನ್ನ ಮೂಲವನ್ನು ಕಂಡುಹಿಡಿಯಲು ಸೂಚಿಸುತ್ತಾನೆ.
ಆಗ ಹಂಸದ ರೂಪ ತಾಳಿದ ಬ್ರಹ್ಮ ಅಗ್ನಿಕಂಭದ ಶಿರವನ್ನು ಹುಡುಕಲು ಮೇಲ್ಮುಖವಾಗಿ ಹೊರಡುತ್ತಾನೆ. ವಿಷ್ಣು ವರಾಹವತಾರ ತಾಳಿ ಕಂಭದ ತಳವನ್ನು ನೋಡುವುದಕ್ಕಾಗಿ ಪಾತಾಳಕ್ಕೆ ಇಳಿಯುತ್ತಾನೆ. ಎಷ್ಟು ಮುಂದೆ ಸಾಗಿದರೂ ಬ್ರಹ್ಮ ಹಾಗೂ ವಿಷ್ಣು ಇಬ್ಬರಿಗೂ ಕಂಭದ ಅಂತ್ಯವೇ ಕಾಣುವುದಿಲ್ಲ. ಶಿವನ ಶಕ್ತಿಯನ್ನು ನೋಡಿದ ವಿಷ್ಣು ಹಾಗೂ ಬ್ರಹ್ಮರಿಗೆ ಸತ್ಯದ ಅರಿವಾಗುತ್ತದೆ. ಆದರೆ ಶಿವನ ಜಡೆಯಿಂದ ಕೆಳಗೆ ಬೀಳುತ್ತಿದ್ದ ಕೇತಕಿ ಪುಷ್ಪದ ಬಳಿ ಬ್ರಹ್ಮ, ‘ನೀನು ಎಲ್ಲಿಂದ ಬೀಳುತ್ತಿದ್ದೀಯ’ ಎಂದು ಪ್ರಶ್ನಿಸುತ್ತಾನೆ. ಆಗ ಆ ಪುಷ್ಪವು, ‘ನಾನು ಅಗ್ನಿಕಂಭದ ಶಿರದಿಂದ ಬೀಳುತ್ತಿದ್ದೇನೆ’ ಎಂಬ ಉತ್ತರ ನೀಡುತ್ತದೆ. ಆಗ ಬ್ರಹ್ಮ ಶಿವನಲ್ಲಿಗೆ ಬಂದು ಕೇತಕಿ ಪುಪ್ಪವನ್ನು ತೋರಿಸಿ, ತಾನು ಅಗ್ನಿಕಂಭದ ಶಿರಭಾಗವನ್ನು ನೋಡಿರುವುದಾಗಿಯೂ ಅಲ್ಲಿಂದಲೇ ಕೇತಕಿ ಪುಷ್ಪವನ್ನು ತಂದಿರುವುದಾಗಿಯೂ ಹೇಳುತ್ತಾನೆ. ಇವರಿಬ್ಬರ ಮೋಸವನ್ನು ಅರಿತ ಶಿವ, ಬ್ರಹ್ಮನನ್ನು ಯಾರೂ ಪೂಜಿಸಕೂಡದು ಎಂದು ಶಾಪ ನೀಡಿ ಲಿಂಗರೂಪ ತಾಳುತ್ತಾನೆ. ಅಂದು ಮಾಘ ಮಾಸದ ಬಹುಳ ಚತುರ್ದಶಿಯಾಗಿರುತ್ತದೆ. ಹೀಗಾಗಿ, ಶಿವ ಲಿಂಗರೂಪ ತಾಳಿದ ಮಾಘ ಮಾಸದ ಬಹುಳ ಚತುರ್ದಶಿಯಂದು ಶಿವರಾತ್ರಿಯನ್ನು ಆಚರಿಸಲಾಗುತ್ತದೆ. ಇದನ್ನೂ ಓದಿ: ಮಹಾ ಶಿವರಾತ್ರಿ| ಕೋಟಿ ಲಿಂಗಗಳ ಆಲಯವಾಗಿರುವ ಕೋಟಿಲಿಂಗೇಶ್ವರ ದೇವಾಲಯಕ್ಕೆ ನೀವೂ ಭೇಟಿ ನೀಡಿ
ಶಿವ ಆಭರಣ, ಅಲಂಕಾರ ಪ್ರಿಯನಲ್ಲ. ಆಡಂಬರಗಳಿಂದ ಮುಕ್ತ. ಸ್ಮಶಾನದಲ್ಲಿರುವ ಸರಳ, ಅಮೋಘ ಶಕ್ತಿ. ಶಿವನಿಗೆ ಪ್ರಿಯವಾದ ಆಹಾರ ತಂಬಿಟ್ಟು. ಶಿವನಿಗೆ ಅತಿ ಶ್ರೇಷ್ಠವಾದ ಬಿಲ್ವ ಪತ್ರೆಯನ್ನು ಅರ್ಪಿಸಿ, ತಲಗಿ ಪುಷ್ಪ, ತುಳಸಿಯಿಂದ ಶಿವಲಿಂಗವನ್ನು ಅಲಂಕಾರ ಮಾಡಿ ಶಿವನನ್ನು ಭಜಿಸಿದರೆ ಪಾಪಗಳು ಪರಿಹಾರವಾಗುತ್ತವೆ ಎಂದು ನಂಬಲಾಗಿದೆ. ಶಿವ ಭಕ್ತರಿಂದ ಬಯಸುವುದು ನಿಶ್ಕಲ್ಮಶ ಮತ್ತು ಪ್ರಮಾಣಿಕ ಭಕ್ತಿ ಮಾತ್ರ. ತೋರಿಕೆಯ, ಆಡಂಬರದ ಪೂಜೆಯನ್ನು ಬಯಸದ ಕೈಲಾಸವಾಸಿಯನ್ನು ಇಂದ್ರಿಯ ನಿಗ್ರಹ, ಧ್ಯಾನ, ಸಂಯಮ ಮತ್ತು ವಿಶ್ವಾಸಭರಿತರಾಗಿ ಶಿವರಾತ್ರಿಯಂದು ಧ್ಯಾನಿಸಿದರೆ ಆತ ಪ್ರಸನ್ನಗೊಳ್ಳುತ್ತಾನೆ.