Maha Shivaratri| ಶಿವ ತಾಂಡವ ನೃತ್ಯ ಮಾಡಿದ್ದು ಯಾಕೆ?

Public TV
3 Min Read
Maha Shivaratri Why did Lord Shiva perform Tandava Nritya

ಶಿವನು ನಾಟ್ಯ ಮತ್ತು ಸಂಗೀತ ಪ್ರಿಯ. ಈ ಕಾರಣಕ್ಕೆ ಆತನಿಗೆ ನಟರಾಜ (Nataraj) ಎಂಬ ಹೆಸರು ಬಂದಿದೆ. ಅಜ್ಞಾನವನ್ನು ಜ್ಞಾನ ನೃತ್ಯ ಮತ್ತು ಸಂಗೀತದಿಂದ ತೊಡೆದು ಹಾಕಬಹುದು ಎಂಬುದನ್ನು ತೋರಿಸಿಕೊಟ್ಟವನು ಶಿವ. ಆದರಲ್ಲೂ ಆತನ ತಾಂಡವ ನೃತ್ಯ (Tandav Nritya) ಬಹಳ ಪ್ರಸಿದ್ಧ. ಶಿವ ತಾಂಡವ ನೃತ್ಯ ಮಾಡಿದ್ದಕ್ಕೂ ಒಂದು ಕಥೆಯಿದೆ.

ದೇವಲೋಕದಲ್ಲಿ ದೇವೇಂದ್ರ ದೊಡ್ಡ ಯಜ್ಞವನ್ನು ಆಯೋಜಿಸಿದ್ದ. ಈ ಯಜ್ಞಕ್ಕೆ ಬ್ರಹ್ಮನ ಮಾನಸ ಪುತ್ರರಲ್ಲಿ ಒಬ್ಬನಾದ ದಕ್ಷ (Daksha) ಆಗಮಿಸುತ್ತಾನೆ. ದಕ್ಷ ಬಂದಾಗ ಋಷಿಗಳು, ದೇವತೆಗಳು ಎದ್ದು ನಿಂತು ಗೌರವಿಸುತ್ತಾರೆ. ಎಲ್ಲರೂ ಎದ್ದು ನಿಂತು ಗೌರವಿಸಿದರೂ ಅಲ್ಲಿದ್ದ ಶಿವ (Shiva) ಮಾತ್ರ ಎದ್ದು ನಿಂತು ಗೌರವಿಸುವುದಿಲ್ಲ. ಹಾಗೆ ನೋಡಿದರೆ ದಕ್ಷನಿಗೆ ಶಿವ ಅಳಿಯನಾಗಬೇಕು. ದಕ್ಷ ತನ್ನ ಮಗಳಾದ ಸತಿ ದೇವಿಯನ್ನು ಶಿವನಿಗೆ ಕೊಟ್ಟು ಮದುವೆ ಮಾಡಿಸಿದ್ದ. ಹೀಗಾಗಿ ಮಾವನಾದ ನನಗೆ ಶಿವ ಗೌರವ ನೀಡದೇ ಅವಮಾನ ಮಾಡಿದ್ದಾನೆ ಎಂದು ಮನಸ್ಸಿನಲ್ಲೇ ದಕ್ಷ ಭಾವಿಸಿ ಸಿಟ್ಟುಮಾಡಿಕೊಳ್ಳುತ್ತಾನೆ.

ಸರಿಯಾಗಿ ನೆಲೆ ಇಲ್ಲದ ಈತನಿಗೆ ಬ್ರಹ್ಮನ ಮಾತು ಕೇಳಿ ಮಗಳನ್ನು ಕೊಟ್ಟು ಮದುವೆ ಮಾಡಿಸಿದ್ದೆ. ನನ್ನ ಮಗಳನ್ನು ಮದುವೆಯಾದ ಈತ ನನಗೆ ಶಿಷ್ಯನಾಗಬೇಕು. ಆದರೆ ಈಗ ನನಗೆ ಎಲ್ಲರ ಮುಂದೆ ಅವಮಾನ ಮಾಡಿದ್ದಾನೆ. ನನಗೆ ಅವಮಾನ ಮಾಡಿದ ಈತ ದೇವತೆಗಳೊಂದಿಗೆ ಹವಿರ್ಭಾಗವನ್ನು ಹೊಂದಲು ಯೋಗ್ಯನಲ್ಲ ಎಂದು ಹೇಳಿದ. ಅಷ್ಟೇ ಅಲ್ಲದೇ ನನಗೆ ಅವಮಾನ ಮಾಡಿದ ಈತನಿಗೆ ಅವಮಾನ ಮಾಡುತ್ತೇನೆ ಎಂದು ಪ್ರತಿಜ್ಞೆ ತೊಡುತ್ತಾನೆ. ಇದನ್ನೂ ಓದಿ: ಭಕ್ತಿ ಪ್ರಿಯ ಶಿವ.. ಪರಮೇಶ್ವರನ ಅಚ್ಚುಮೆಚ್ಚಿನ ಭಕ್ತರಿವರು

Maha Shivaratri 1 1

ಮನೆಗೆ ಬಂದ ಬಳಿಕ ಕೆಲ ದಿನಗಳಲ್ಲಿ ನಿರೀಶ್ವರಯಾಗವನ್ನು ಕೈಗೊಳ್ಳುತ್ತಾನೆ. ಯಾವುದೇ ಕಾರಣಕ್ಕೂ ಶಿವನಿಗೆ ಇಲ್ಲಿ ಪೂಜೆ ಮಾಡಕೂಡದು ಎಂದು ಕಟ್ಟಪ್ಪಣೆ ಹೊರಡಿಸುತ್ತಾನೆ. ಅಂತರಿಕ್ಷದಲ್ಲಿ ಗುಂಪು ಗುಂಪಾಗಿ ದೇವತೆಗಳನ್ನು ಹೋಗುವುದನ್ನು ನೋಡಿದ ಸತಿ ವಿಚಾರ ತಿಳಿದು ನಾನು ತಂದೆ ಮಾಡುತ್ತಿರುವ ಯಾಗಕ್ಕೆ ಹೋಗಬೇಕು ಎಂದು ಹಂಬಲಿಸುತ್ತಾಳೆ. ಅದರಂತೆ ಪತಿ ಶಿವನ ಬಳಿ ತೆರಳಿ ದಂಪತಿಯಾದ ನಾವು ಈ ಯಾಗಕ್ಕೆ ಹೋಗೋಣ ಎನ್ನುತ್ತಾಳೆ. ಅದಕ್ಕೆ ಶಿವ, ನಮಗೆ ಯಾವುದೇ ಆಹ್ವಾನ ಇಲ್ಲ. ಆಹ್ವಾನ ಇಲ್ಲದ ಕಾರ್ಯಕ್ರಮಕ್ಕೆ ಹೋಗುವುದು ಸರಿಯಲ್ಲ ಎಂದು ಹೇಳುತ್ತಾನೆ. ಶಿವ ಎಷ್ಟೇ ಹೇಳಿದರೂ ಸತಿದೇವಿ ಹೋಗಲೇಬೇಕು ಎಂದು ಹಠ ಹಿಡಿಯುತ್ತಾಳೆ. ಕೊನೆಗೆ ನೀವು ಬಾರದೇ ಇದ್ದರೆ ನಾನು ಹೋಗುತ್ತೇನೆ ಎಂದು ಹೇಳಿ ಹೋಗುತ್ತಾಳೆ. ನಂದಿ ಸೇರಿದಂತೆ ಸಾವಿರಾರು ಶಿವಗಳು ಸತಿಯನ್ನು ಹಿಂಬಾಲಿಸುತ್ತಾ ದಕ್ಷನ ಯಾಗ ಶಾಲೆಗೆ ಬರುತ್ತವೆ.

ದಕ್ಷನ ಸೂಚನೆಯ ಕಾರಣ ಯಾರೂ ಸತಿಯನ್ನು ಮಾತನಾಡಿಸಲಿಲ್ಲ ಗೌರವ ಸಿಗಲಿಲ್ಲ. ನಂತರ ಶಿವನಿಗೆ ಹವಿರ್ಭಾಗವನ್ನೇ ಕೊಡಬಾರದು ಎಂಬ ಭಾವನೆಯಿಂದಲೇ ನಡೆಯುತ್ತಿರುವ ಯಜ್ಞವನ್ನು ಕಂಡು ಸತಿ ದೇವಿ ಸಿಟ್ಟಾಗುತ್ತಾಳೆ. ತನ್ನ ಪತಿಗೆ ಅವಮಾನ ಮಾಡಿದ ಯಜ್ಞ ಯಜ್ಞವೇ ಅಲ್ಲ ಎಂದು ಭಾವಿಸಿ, ಮುಂದಿನ ಜನ್ಮದಲ್ಲಿ ಪರಶಿವನೇ ಪತಿಯಾಗಬೇಕೆಂದು ಪ್ರಾರ್ಥನೆ ಮಾಡಿ ಆ ಯಜ್ಞಕ್ಕೆ ಹಾರಿ ತನ್ನ ದೇಹತ್ಯಾಗ ಮಾಡುತ್ತಾಳೆ.

Maha Shivaratri

ತನ್ನ ಗಣಗಳಿಂದ ಸತಿ ದೇಹತ್ಯಾಗ ಮಾಡಿದ ವಿಚಾರ ತಿಳಿದು ಶಿವ ಸಿಟ್ಟಾಗುತ್ತಾನೆ. ಕೈಲಾಸದಲ್ಲಿ ಕೋಪಗೊಂಡು ಭಯಂಕರವಾಗಿ ಕಣ್ಣು ಕೆಂಪಾಗಿ ಮಾಡಿ ಮಾಡಿ ವೀರವೇಷದ ನೃತ್ಯ ಮಾಡುತ್ತಾನೆ. ತನ್ನ ಎಲ್ಲಾ ಶಕ್ತಿ ಬಳಸಿ ಮಾಡಿದ ಈ ವೀರವೇಷದ ನೃತ್ಯವೇ ತಾಂಡವ ನೃತ್ಯ. ಈ ತಾಂಡವ ನೃತ್ಯದ ವೇಳೆ ಕ್ರೋಧದಲ್ಲಿ ಸ್ವಲ್ಪ ಕೂದಲನ್ನು ಪರ್ವತಕ್ಕೆ ಎಸೆಯುತ್ತಾನೆ. ಈ ವೇಳೆ ಅತ್ಯಂತ ಭಯಾನಕವಾದ ಶಿವನ ಉಗ್ರ ರೂಪವಾದ ಮೊದಲ ರುದ್ರ ಅವತಾರ ವೀರಭದ್ರ ಹುಟ್ಟುತ್ತಾನೆ. ನಂತರ ಶಿವನು ತನ್ನ ಇನ್ನೊಂದು ಕೂದಲನ್ನು ಪರ್ವತದ ಮೇಲೆ ಎಸೆಯುತ್ತಾನೆ. ಎರಡನೇ ಬಾರಿ ಕೂದಲು ಬಿದ್ದ ಜಾಗದಲ್ಲಿ ಭದ್ರಕಾಳಿ ಕಾಣಿಸಿಕೊಳ್ಳುತ್ತಾಳೆ.

ಶಿವನು ಅವರಿಬ್ಬರಿಗೂ ಯಜ್ಞವನ್ನು ನಾಶಮಾಡಿ ದಕ್ಷನ ತಲೆಯನ್ನು ತರಲು ಆಜ್ಞಾಪಿಸುತ್ತಾನೆ. ಯಾವುದೇ ಗಂಧರ್ವ, ದೇವತೆ ಅಥವಾ ದೇವರು ತಡೆದರೆ ನೀವು ಅವರನ್ನು ನಾಶಮಾಡಿ ಎಂದು ಸೂಚಿಸುತ್ತಾನೆ. ಇವರಿಬ್ಬರ ಜೊತೆ ಶಿವನು ಒಂದು ಕೋಟಿ ಶಿವ ಗಣಗಳನ್ನು ಯುದ್ಧಕ್ಕೆ ಕಳುಹಿಸುತ್ತಾನೆ. ಭಯಂಕರ ಯುದ್ಧ ನಡೆದು ವೀರಭದ್ರ ದಕ್ಷನ ತಲೆಯನ್ನು ಕತ್ತರಿಸುತ್ತಾನೆ. ಆರಂಭ ಮಾಡಿದ ಯಜ್ಞ ನಿಲ್ಲಬಾರದು ಎನ್ನುವ ಕಾರಣಕ್ಕೆ ದೇವತೆಗಳು ಶಿವನ ಬಳಿ ತೆರಳಿ ಮರಳಿ ದಕ್ಷನಿಗೆ ಜೀವ ಕೊಡುವಂತೆ ಕೇಳಿಕೊಳ್ಳುತ್ತಾರೆ. ದಯಾಳುವಾಗಿದ್ದ ಶಿವ ದಕ್ಷನಿಗೆ ಮತ್ತೆ ಜೀವ ನೀಡುತ್ತಾನೆ. ದಕ್ಷ ತನ್ನ ಅಪರಾಧಗಳಿಗೆ ಕ್ಷಮೆಯಾಚಿಸುತ್ತಾನೆ. ಶಿವನು ಕ್ಷಮಿಸಿದ ಬಳಿಕ ಈ ಯಜ್ಞ ಪೂರ್ಣಗೊಳ್ಳುತ್ತದೆ.

Share This Article