‘ನಾಗ’ ಎಂಬ ಪದವು ಪ್ರಾಚೀನ ಕಾಲದಲ್ಲಿ ಭಾರತದ ಕಾಡುಗಳು ಮತ್ತು ಬೆಟ್ಟಗಳಲ್ಲಿ ಅಲೆದಾಡುತ್ತಿದ್ದ ಹಾವಿನ ಆರಾಧಕರ ಪ್ರಾಚೀನ ಬುಡಕಟ್ಟು ಜನಾಂಗವನ್ನು ಸೂಚಿಸುತ್ತದೆ. ನಾಗ ಸಾಧುಗಳು (Naga sadhu) ಶಿವನೇ (Shiva) ದೇವರೆಂದು ನಂಬುತ್ತಾರೆ. ಶಿವನು ಆಧ್ಯಾತ್ಮಿಕ ನಿರ್ಲಿಪ್ತತೆಯ ಸಾಕಾರ ಮತ್ತು ಹಿಂದೂ ಧರ್ಮದ ಪ್ರಬಲ ರಕ್ಷಕ ಎಂದು ನಾಗ ಜನರು ಭಾವಿಸುತ್ತಾರೆ.
ನಾಗ ಜನರು ಶಿವನನ್ನು ಯಾಕೆ ಆರಾಧಿಸುತ್ತಾರೆ ಎನ್ನುವುದಕ್ಕೂ ಕಥೆಯಿದೆ. ದುರ್ವಾಸರ ಶಾಪದಿಂದ ಸ್ವರ್ಗದ ಸುವಸ್ತಗಳು ಸಮುದ್ರದಲ್ಲಿ ಮುಳುಗಿಹೋದವು. ಅದನ್ನೆಲ್ಲ ಹೊರ ತೆಗೆಯಲು ಸಮುದ್ರ ಮಥನ ಮಾಡಬೇಕಾಯಿತು. ಆಗ ತ್ರಿಮೂರ್ತಿಗಳ ಸೂಚನೆಯಂತೆ ಮಂದರಪರ್ವತವನ್ನೇ ಕಡೆಗೋಲನ್ನಾಗಿಸಿ ಕಡೆಯಲು ಉದ್ದೇಶಿಸಲಾಯಿತು. ಅದಕ್ಕೆ ಸುತ್ತು ಬರುವಷ್ಟು ಉದ್ದದ ಹಗ್ಗಕ್ಕೆ ಏನು ಮಾಡಬೇಕು ಎಂದು ಯೋಚನೆ ಮಾಡುತ್ತಿದ್ದಾಗ ಸರ್ಪರಾಜ ವಾಸುಕಿ ತಾನೇ ಹಗ್ಗವಾಗುತ್ತೇನೆ ಎಂದು ಒಪ್ಪಿಕೊಳ್ಳುತ್ತಾನೆ. ಆತನನ್ನು ಮಂದರ ಪರ್ವತಕ್ಕೆ ಸುತ್ತಿ ಮಥಿಸಲಾಯಿತು. ಆಗ ಮೊದಲಿಗೆ ಹಾಲಾಹಲ ವಿಷ ಉಕ್ಕಿಬಂತು. ಅದು ದೇವತೆಗಳನ್ನು ಸುಡಲಾರಂಭಿಸಿದಾಗ ಕೋಲಾಹಲ ಉಂಟಾಯಿತು.
Advertisement
Advertisement
ದೇವತೆಗಳನ್ನು ಕಾಪಾಡಲು ಶಿವನೇ ಅದನ್ನು ಹೀರಿ ಗಂಟಲಲ್ಲಿ ಇಟ್ಟುಕೊಂಡ. ಹಾಗೆ ನೀಲಕಂಠನಾದ. ಆದರೆ ಇನ್ನೂ ಸಾಕಷ್ಟು ವಿಷ ಉಳಿಯಿತು. ಆಗ ವಾಸುಕಿ ಮತ್ತು ಆತನ ಸಹಚರ ಸರ್ಪಗಳು ಸೇರಿ ಸೇವಿಸಿ ಹಲ್ಲುಗಳಲ್ಲಿ ಇಟ್ಟುಕೊಂಡು ದೇವತೆಗಳನ್ನು ಕಾಪಾಡಿದವು. ವಾಸುಕಿಯ ಈ ಸೇವೆಯಿಂದ ಪುನೀತನಾದ ಶಿವ ಆತನನ್ನು ತನ್ನ ಕೊರಳ ಸುತ್ತ ಕಂಠಾಭರಣವಾಗಿ ಧರಿಸಿ ಶಾಶ್ವತ ಸ್ಥಾನ ನೀಡಿದ. ನಾಗಗಳ ರಾಜನಾದ ವಾಸುಕಿಗೆ ತನ್ನ ಕೊರಳಿನಲ್ಲಿ ಸ್ಥಾನ ನೀಡಿದ್ದಕ್ಕೆ ನಾಗಗಳು ಈಗಲೂ ಶಿವನನ್ನೇ ದೇವರೆಂದು ಭಾವಿಸಿ ಪೂಜೆ ಮಾಡುತ್ತಾರೆ.
Advertisement
ಶೈವ ಸಂಪ್ರದಾಯದ ಕಟ್ಟಾ ಅನುಯಾಯಿಗಳಾಗಿರುವ ಇವರು ಶಿವಲಿಂಗಕ್ಕೆ ಬಿಲ್ವ ಪತ್ರೆ, ಬೂದಿ ಮತ್ತು ನೀರನ್ನು ಅರ್ಪಿಸುವ ಮೂಲಕ ಪೂಜಿಸುತ್ತಾರೆ. ನಾಗಾ ಸಾಧುಗಳ ಸಂಪ್ರದಾಯದಲ್ಲಿ ಬೆಂಕಿ ಮತ್ತು ಬೂದಿ ಪ್ರಮುಖ ಪಾತ್ರ ವಹಿಸುತ್ತದೆ. ಶಿವನನ್ನು ಒಲಿಸಿಕೊಳ್ಳಲು ಯೋಗ, ಧ್ಯಾನ ಮಾಡುತ್ತಾರೆ. ಇದನ್ನೂ ಓದಿ: ಮಹಾ ಶಿವರಾತ್ರಿಯಂದು ಭೇಟಿ ನೀಡಬಹುದಾದ ದಕ್ಷಿಣ ಕರ್ನಾಟಕದ ಪುರಾಣ ಪ್ರಸಿದ್ಧ ದೇವಾಲಯಗಳು
Advertisement
ಒಂದು ಬಾರಿ ಮಾತ್ರ ಊಟ ಸೇವಿಸುವ ಇವರು ಭಿಕ್ಷೆ ಬೇಡುವ ಮೂಲಕ ತಮ್ಮ ಆಹಾರವನ್ನು ಪಡೆಯುತ್ತಾರೆ. ಒಂದು ದಿನದಲ್ಲಿ ಅವರು ಕೇವಲ ಏಳು ಮನೆಗಳಿಂದಷ್ಟೇ ಭಿಕ್ಷೆ ಸಂಗ್ರಹಿಸುವ ಕಠಿಣ ನಿಯಮ ಪಾಲಿಸುತ್ತಾರೆ. ಒಂದು ವೇಳೆ ಏಳು ಮನೆಯಲ್ಲಿ ಆಹಾರ ಸಿಗದೇ ಇದ್ದರೆ ಆ ದಿನ ಅವರು ಉಪವಾಸ ಇರುತ್ತಾರೆ. ಯಾವುದೇ ಕುಂಭ ಮೇಳ ಇರಲಿ ಮೊದಲು ಸ್ನಾನ ಮಾಡುವವರು ಈ ನಾಗ ಸಾಧುಗಳು. ಕುಂಭ ಹಬ್ಬದ ಸಮಯದಲ್ಲಿಯೂ ಸಹ ಹಲವಾರು ಜನರು ನಾಗಾ ಸಾಧುಗಳ ಆಶೀರ್ವಾದ ಪಡೆಯಲು ಅವರ ಅಖಾಡಗಳಿಗೆ ಭೇಟಿ ನೀಡುತ್ತಾರೆ.
ನಾಗಾ ಸಾಧು ಆಗಲು ಬಹಳ ಕಷ್ಟಕರವಾದ ಪರೀಕ್ಷೆಗಳಿಗೆ ಒಳಗಾಗಬೇಕು ಮತ್ತು ಕಷ್ಟಕರವಾದ ತಪಸ್ಸನ್ನು ಅಭ್ಯಾಸ ಮಾಡಬೇಕಾಗುತ್ತದೆ. ನಾಗಾ ಸಾಧು ಆಗಲು ಸುಮಾರು 12 ವರ್ಷ ಅಖಾಡಗಳಲ್ಲಿಯೇ ಇರುತ್ತಾರೆ ಮತ್ತು ಸನ್ಯಾಸಿಯಾಗಲು ಅಖಾಡಗಳ ಕಠಿಣ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕಾಗುತ್ತದೆ. ಗುರುಗಳ ಬೋಧನೆಗಳನ್ನು ಸರಿಯಾದ ರೀತಿಯಲ್ಲಿ ಪಡೆದಾಗ ನಾಗ ಸಾಧುವಾಗುವ ಪ್ರಕ್ರಿಯೆಯು ಪೂರ್ಣಗೊಳ್ಳುತ್ತದೆ. ನಾಗ ಸಾಧುವಾದ ಬಳಿಕ ಅಖಾಡದ ಯಾವುದಾದರೂ ವಿಭಾಗದ ಮುಖ್ಯಸ್ಥರಾಗುತ್ತಾರೆ ಅಥವಾ ಅಖಾಡದಲ್ಲಿಯೇ ಯಾವುದೇ ದೊಡ್ಡ ವಿದ್ವಾಂಸರಾಗುತ್ತಾರೆ.
ನಾಗಾ ಸಾಧುಗಳು ಸಾಮಾನ್ಯವಾಗಿ ಬೆತ್ತಲೆಯಾಗಿ ಸುತ್ತಾಡುತ್ತಾರೆ. ಕುಂಭಮೇಳದಲ್ಲಿ (Kumbh Mela) ಭಾಗವಹಿಸಿದ ನಂತರ ಹಿಮಾಲಯಕ್ಕೆ ತೆರಳುತ್ತಾರೆ. ಭಾರತದಲ್ಲಿ ಮಹಾಕುಂಭ ಹಬ್ಬದ ಸಮಯದಲ್ಲಿ ಪವಿತ್ರ ಸ್ನಾನದಲ್ಲಿ ಭಾಗವಹಿಸಲು ನಾಗ ಸಾಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಾರೆ.