ವಾರಾಣಾಸಿ: ಪ್ರಯಾಗ್‌ರಾಜ್‌ನಲ್ಲಿ (Prayagraj) ನಡೆದ ಮಹಾ ಕುಂಭಮೇಳ (Maha Kumbhamela) ಪರಿಣಾಮ ವಾರಣಾಸಿಯ (Varanasi) ಕಾಶಿ ವಿಶ್ವನಾಥನ ದೇವಸ್ಥಾನಕ್ಕೆ (Kashi Vishwanath Temple) ದಾಖಲೆಯ ಪ್ರಮಾಣದಲ್ಲಿ ಭಕ್ತರು ಭೇಟಿ ನೀಡಿದ್ದಾರೆ. ಕಳೆದ 45 ದಿನಗಳಲ್ಲಿ ಮೂರು ಕೋಟಿ ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ ಎಂದು ಶ್ರೀ ಕಾಶಿ ವಿಶ್ವನಾಥ ದೇವಾಲಯ ಟ್ರಸ್ಟ್ ಹೇಳಿದೆ.
ಶ್ರೀ ಕಾಶಿ ವಿಶ್ವನಾಥ ದೇವಾಲಯ ಟ್ರಸ್ಟ್ ಬಿಡುಗಡೆ ಮಾಡಿದ ಮಾಹಿತಿಗಳ ಪ್ರಕಾರ, ಪ್ರತಿದಿನ ಸರಾಸರಿ ಆರೂವರೆ ಲಕ್ಷಕ್ಕೂ ಹೆಚ್ಚು ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಇದು ದೇವಾಲಯದ ಇತಿಹಾಸದಲ್ಲಿ ಅತಿ ಹೆಚ್ಚು ದರ್ಶನ ಪಡೆದ ಭಕ್ತರ ಸಂಖ್ಯೆಯಾಗಿದೆ. ಶ್ರಾವಣಕ್ಕಿಂತ ಮಾಘ ಮತ್ತು ಫಾಲ್ಗುಣದಲ್ಲಿ ಹೆಚ್ಚಿನ ಭಕ್ತರು ದರ್ಶನ ಪಡೆದಿದ್ದಾರೆ.ಇದನ್ನೂ ಓದಿ: ಉಡುಪಿಯಲ್ಲಿ ದುಬೈ ಕಾರುಗಳ ಕರ್ಕಶ ಶಬ್ದ – ಮಣಿಪಾಲ ಪೊಲೀಸರಿಂದ ದಂಡ
ಮಹಾಶಿವರಾತ್ರಿ ಮತ್ತು ಮೌನಿ ಅಮಾವಾಸ್ಯೆಯಂದು ಭಕ್ತರ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಮೌನಿ ಅಮಾವಾಸ್ಯೆಯಂದು 11 ಲಕ್ಷಕ್ಕೂ ಹೆಚ್ಚು ಭಕ್ತರು ಬಂದಿದ್ದರೆ, ಮಹಾಶಿವರಾತ್ರಿಯಂದು 46 ಗಂಟೆಗಳಲ್ಲಿ 17 ಲಕ್ಷಕ್ಕೂ ಹೆಚ್ಚು ಭಕ್ತರು ವಿಶ್ವನಾಥನ ದರ್ಶನ ಪಡೆದಿದ್ದಾರೆ.
ಜನವರಿ 13ರಿಂದ ಫೆಬ್ರವರಿ 19ರ ನಡುವೆ, ಭಕ್ತರ ಸಂಖ್ಯೆ ಎರಡು ಕೋಟಿ ಗಡಿ ದಾಟಿದೆ. ಫೆಬ್ರವರಿ 27ರಂದು ಬಿಡುಗಡೆಯಾದ ಮಾಹಿತಿಯ ಪ್ರಕಾರ, ಈ ಸಂಖ್ಯೆ ಮೂರು ಕೋಟಿ ತಲುಪಿದೆ. ಅಂದರೆ ಕೇವಲ ಎಂಟು ದಿನಗಳಲ್ಲಿ (ಫೆಬ್ರವರಿ 20ರಿಂದ 27ರವರೆಗೆ) ಒಂದು ಕೋಟಿಗೂ ಹೆಚ್ಚು ಭಕ್ತರು ದರ್ಶನ ಪಡೆದಿದ್ದಾರೆ.
2022ರ ಶ್ರಾವಣ ಮಾಸದಲ್ಲಿ, ಒಂದು ಕೋಟಿಗೂ ಹೆಚ್ಚು ಭಕ್ತರು ವಿಶ್ವನಾಥನ ಜಲಾಭಿಷೇಕವನ್ನು ನೆರವೇರಿಸಿದ್ದರು. 2023ರಲ್ಲಿ ಭಕ್ತರ ಸಂಖ್ಯೆ ಹೊಸ ದಾಖಲೆಯನ್ನು ಸೃಷ್ಟಿಸಿತ್ತು. ಜುಲೈ 4 ರಿಂದ ಪ್ರಾರಂಭವಾದ 60 ದಿನಗಳ ಶ್ರಾವಣದಲ್ಲಿ 1.63 ಕೋಟಿ ಭಕ್ತರು ದರ್ಶನ ಪಡೆದಿದ್ದರು. 2024ರ ಶ್ರಾವಣ ಮಾಸದಲ್ಲಿ 53.84 ಲಕ್ಷ ಭಕ್ತರು ವಿಶ್ವನಾಥನ ಜಲಾಭಿಷೇಕ ನೆರವೇರಿಸಿದ್ದರು. ಇದೇ ಮೊದಲ ಬಾರಿಗೆ ಮೂರು ಕೋಟಿ ಭಕ್ತರು ಭೇಟಿ ನೀಡಿದ್ದಾರೆ.ಇದನ್ನೂ ಓದಿ: ಬಿಜೆಪಿ-ಜೆಡಿಎಸ್ ಶಾಸಕರು ಸಂಪರ್ಕದಲ್ಲಿದ್ದರೆ ಕರ್ಕೊಂಡು ಹೋಗಲಿ ನೋಡೋಣ – ಜಮೀರ್‌ಗೆ ಅಶ್ವಥ್ ನಾರಾಯಣ್ ಸವಾಲು