ಪ್ರಯಾಗ್‌ರಾಜ್: ಬಾಹ್ಯಾಕಾಶದಿಂದ ಕಾಣಿಸುವ ಮಹಾ ಕುಂಭಮೇಳದ (Maha Kumbhmela) ಸ್ಥಳದ ಫೋಟೋಗಳನ್ನು ಇಸ್ರೋ (ISRO) ಬಿಡುಗಡೆ ಮಾಡಿದೆ.
ಭಾರತದ ಅತ್ಯಾಧುನಿಕ ಆಪ್ಟಿಕಲ್ ಉಪಗ್ರಹಗಳು ಮತ್ತು ಹಗಲು ರಾತ್ರಿ ವೀಕ್ಷಿಸುವ ಸಾಮರ್ಥ್ಯವಿರುವ ರಾಡಾರ್‌ಸ್ಯಾಟ್ ಬಳಸಿ ಈ ಫೋಟೋಗಳನ್ನು ತೆಗೆಯಲಾಗಿದೆ. ಹೈದರಾಬಾದ್‌ನಲ್ಲಿರುವ ರಾಷ್ಟ್ರೀಯ ದೂರಸಂವೇದಿ ಕೇಂದ್ರವು ಮಹಾ ಕುಂಭಮೇಳದ ಚಿತ್ರಗಳ ಸರಣಿಯನ್ನು ಉಪಗ್ರಹದಿಂದ ರಿಸೀವ್ ಮಾಡಿಕೊಂಡಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ NRSC ನಿರ್ದೇಶಕ ಡಾ. ಪ್ರಕಾಶ್ ಚೌಹಾಣ್, ಪ್ರಯಾಗ್‌ರಾಜ್ (Prayagraj) ಮೇಲೆ ಆವರಿಸಿರುವ ಕ್ಲೌಡ್ ಬ್ಯಾಂಡ್ ಮೂಲಕ ಪ್ರದೇಶವನ್ನು ಚಿತ್ರಿಸಲು ಸಾಧ್ಯವಾಗುವಂತೆ ರಾಡಾರ್‌ಸ್ಯಾಟ್‌ನ್ನು ಬಳಸಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
ಉತ್ತರ ಪ್ರದೇಶ ಸರ್ಕಾರ ಮೇಳದಲ್ಲಿ ವಿಪತ್ತು ಮತ್ತು ಕಾಲ್ತುಳಿತಗಳನ್ನು ತಗ್ಗಿಸಲು ಈ ಚಿತ್ರಗಳನ್ನು ಬಳಸುತ್ತಿದೆ.
ಈ ಬಾರಿ ಉಪಗ್ರಹ ತೆಗೆದ ಚಿತ್ರಗಳಲ್ಲಿ ಹೊಸ ಶಿವಾಲಯ, ಉದ್ಯಾನವನ ಸೆರೆಯಾಗಿದೆ. ಇನ್ನೂ 2024ರ ಏ.6ರ ಚಿತ್ರವು ಸ್ಪಷ್ಟವಾದ ಮೈದಾನವನ್ನು ತೋರಿಸುತ್ತದೆ. ಈ ವರ್ಷ ಡಿಸೆಂಬರ್‌ನಲ್ಲಿ ತೆಗೆದ ಚಿತ್ರದಲ್ಲಿ ಮಹಾ ಕುಂಭಮೇಳದ ಸಿದ್ಧತೆಗಳನ್ನು ನೋಡಬಹುದಾಗಿದೆ.
ಮಹಾ ಕುಂಭಮೇಳ 2025
ಒಂದು ತಿಂಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಲಕ್ಷಾಂತರ ಯಾತ್ರಿಕರು ಗಂಗಾ, ಯಮುನಾ ಮತ್ತು ಸರಸ್ವತಿ ಸಂಗಮದಲ್ಲಿ ಸ್ನಾನ ಮಾಡುತ್ತಾರೆ. ಅಮೃತ ಸ್ನಾನ ಎಂದು ಕರೆಯಲ್ಪಡುವ ಈ ಪವಿತ್ರ ಸ್ನಾನ ಭಕ್ತರ ಆತ್ಮವನ್ನು ಶುದ್ಧೀಕರಿಸುತ್ತದೆ. ಅವರ ಪಾಪಗಳನ್ನು ತೊಳೆಯುತ್ತವೆ ಎಂದು ನಂಬಲಾಗಿದೆ.
ಈ ವರ್ಷ ಪ್ರಯಾಗ್ರಾಜ್‌ನಲ್ಲಿ (Prayagraj) ಜ.13 ರಿಂದ ಫೆ.26 ರವರೆಗೆ ಈ ಮಹಾ ಕುಂಭಮೇಳ ನಡೆಯಲಿದೆ. ಸಂಗಮದಲ್ಲಿ ಇದುವರೆಗೆ ಎಂಟು ಕೋಟಿಗೂ ಹೆಚ್ಚು ಜನ ಭಕ್ತರು ಸ್ನಾನ ಮಾಡಿದ್ದಾರೆ.