ಕೋಲ್ಕತ್ತಾ: ಮಹಾ ಕುಂಭವು ಮೃತ್ಯು ಕುಂಭವಾಗಿ ಮಾರ್ಪಟ್ಟಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟೀಕಿಸಿದ್ದಾರೆ. ಕೇಂದ್ರ ಸರ್ಕಾರ ಹಾಗೂ ಯೋಗಿ ಆದಿತ್ಯನಾಥ್ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಮಂಗಳವಾರ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಮಾತನಾಡಿದ ಬ್ಯಾನರ್ಜಿ, ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಕೇಂದ್ರ ಸರ್ಕಾರ ಮತ್ತು ಬಿಜೆಪಿ ನೇತೃತ್ವದ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ದುರುಪಯೋಗದ ಆರೋಪಗಳನ್ನು ಹೊರಿಸಿದ್ದಾರೆ.
Advertisement
ನಾನು ಮಹಾ ಕುಂಭಮೇಳವನ್ನು ಗೌರವಿಸುತ್ತೇನೆ. ಪವಿತ್ರ ಗಂಗಾ ಮಾತೆಯನ್ನು ಗೌರವಿಸುತ್ತೇನೆ. ಆದರೆ, ಸರಿಯಾದ ನಿರ್ವಹಣೆ ಇಲ್ಲ. ಶ್ರೀಮಂತರು, ವಿಐಪಿಗಳಿಗೆ 1 ಲಕ್ಷಕ್ಕೂ ಹೆಚ್ಚಿನ ಬೆಲೆಯಲ್ಲಿ ಶಿಬಿರಗಳನ್ನು [ಟೆಂಟ್‌ಗಳನ್ನು] ಪಡೆಯಲು ವ್ಯವಸ್ಥೆಗಳು ಲಭ್ಯವಿದೆ. ಬಡವರಿಗೆ ಕುಂಭಮೇಳದಲ್ಲಿ ಯಾವುದೇ ವ್ಯವಸ್ಥೆಗಳಿಲ್ಲ. ಹೆಚ್ಚು ಜನರು ಸೇರುವ ಕಡೆ ಕಾಲ್ತುಳಿತ ಸಾಮಾನ್ಯ. ಆದರೆ, ವ್ಯವಸ್ಥೆಗಳನ್ನು ಮಾಡುವುದು ಮುಖ್ಯ ಎಂದು ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
Advertisement
ಬಾಂಗ್ಲಾದೇಶದ ಮೂಲಭೂತವಾದಿಗಳೊಂದಿಗೆ ಸಂಪರ್ಕ ಹೊಂದಿದ್ದೇವೆ ಎಂಬ ಆರೋಪಗಳನ್ನು ಬಿಜೆಪಿ ಸಾಬೀತುಪಡಿಸಲಿ. ಒಂದು ವೇಳೆ ಸಾಬೀತುಪಡಿಸಿದರೆ, ನಾನು ರಾಜೀನಾಮೆ ನೀಡುತ್ತೇನೆ ಎಂದು ಬ್ಯಾನರ್ಜಿ ಸವಾಲು ಹಾಕಿದ್ದಾರೆ.