ಪ್ರಯಾಗ್‌ರಾಜ್: ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ (Mahakumbh 2025) 11ನೇ ದಿನವೂ ಭಕ್ತಸಾಗರ ತುಂಬಿ ತುಳುಕಿದೆ.
ಗಂಗಾ, ಯಮುನಾ, ಸರಸ್ವತಿ ನದಿಗಳ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ (Holy Pilgrims) ಮಾಡಿದವರ ಸಂಖ್ಯೆ ಇದೀಗ 10 ಕೋಟಿ ಮೈಲುಗಲ್ಲು ದಾಟಿದೆ. ಜನವರಿ 13ರಂದು ಪ್ರಾರಂಭವಾದ ಮಹಾ ಕುಂಭಮೇಳವು ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಈ ಮೈಲುಗಲ್ಲು ತಲುಪಿದೆ ಎಂದು ಉತ್ತರ ಪ್ರದೇಶದ ಸರ್ಕಾರ ಇಂದು (ಜ.23) ತಿಳಿಸಿದೆ. ಇದನ್ನೂ ಓದಿ: ಹಿಂದೂ ದೇವಾಲಯಕ್ಕೆ ಮುಸ್ಲಿಂ ವ್ಯಕ್ತಿ ಉಸ್ತುವಾರಿ – ದೇವಿ ಕನಸಲ್ಲಿ ಬಂದು ಮೊಹಮ್ಮದ್ ಅಲಿಗೆ ಹೇಳಿದ್ದೇನು?
ಜನವರಿ 13ರಂದು ಶಾಹಿ ಸ್ನಾನದ ಮೂಲಕ ಉದ್ಘಾಟನೆಯಾದ ಕುಂಭಮೇಳದಲ್ಲಿ ವಿವಿಧ ಬಗೆಯ ಪುಣ್ಯಸ್ನಾನದಲ್ಲಿ ಭಕ್ತರು ಪಾಲ್ಗೊಳ್ಳುತ್ತಾರೆ. ಹಾಗೆಯೇ ಜ.15ರಂದು ಮಕರ ಸಂಕ್ರಾಂತಿ ಸ್ನಾನ ನಡೆಯಿತು. ಮುಂದೆ ಜನವರಿ 29 ರಂದು ಮೌನಿ ಅಮಾವಾಸ್ಯೆ ಸ್ನಾನ, ಫೆಬ್ರವರಿ 3ರಂದು ವಸಂತ ಪಂಚಮಿ ಸ್ನಾನ, ಫೆಬ್ರವರಿ 12 ರಂದು ಮಾಘಿ ಪೂರ್ಣಿಮಾ ಸ್ನಾನ, ಫೆಬ್ರವರಿ 26ರಂದು ಮಹಾ ಶಿವರಾತ್ರಿ ಸ್ನಾನ ನೆರವೇರಲಿದೆ. ಸದ್ಯ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
45 ಕೋಟಿ ಜನ ಭಾಗಿಯಾಗುವ ನಿರೀಕ್ಷೆ:
45 ದಿನಗಳ ಕಾಲ ನಡೆಯಲಿರುವ ಕುಂಭಮೇಳದಲ್ಲಿ ಬರೋಬ್ಬರಿ 45 ಕೋಟಿ ಜನ ಬಂದು ಹೋಗುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗಿದೆ. ಅದಕ್ಕೆ ತಕ್ಕಂತೆ ರಾಜ್ಯ ಸರ್ಕಾರ ತಯಾರಿ ಮಾಡಿಕೊಂಡಿದೆ. ಗಂಗಾ, ಯಮುನ, ಸರಸ್ವತಿ ನದಿಗಳ ತ್ರಿವೇಣಿ ಸಂಗಮದಲ್ಲಿ ʻಸಂಗಮನಗರಿʼ ಎಂಬ ನಗರವನ್ನೇ ಸೃಷ್ಟಿಸಿದೆ. ಇದನ್ನೂ ಓದಿ: ಯುಪಿ ಕಾಲುವೆಯೊಂದರಲ್ಲಿ ವ್ಯಕ್ತಿಯ ಶವ ಪತ್ತೆ – ಆತ್ಮಹತ್ಯೆಗೆ ಒಳ್ಳೆಯ ಜಾಗ ಯಾವ್ದು ಅಂತ ಸರ್ಚ್ ಮಾಡಿದ್ದ ಭೂಪ!
12 ಗಂಟೆ ವೇಳೆಗೆ 30 ಲಕ್ಷ ಜನರಿಂದ ಪುಣ್ಯಸ್ನಾನ:
ಗುರುವಾರ (ಇಂದು) ಮಧ್ಯಾಹ್ನ 12 ಗಂಟೆ ಸುಮಾರಿಗೆ ಕಲ್ಪವಾಸಿಗಳು ಹಾಗೂ ಇತರ ಭಕ್ತರು ಸೇರಿದಂತೆ ಸುಮಾರು 30 ಲಕ್ಷ ಮಂದಿ ಪುಣ್ಯಸ್ನಾನ ಮಾಡಿದ್ದಾರೆ. ದಿನದ ಅಂತ್ಯಕ್ಕೆ ಇದರ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದೂ ಉತ್ತರ ಪ್ರದೇಶ ಸರ್ಕಾರ ತನ್ನ ಪ್ರಕಟಣೆಯಲ್ಲಿ ಉಲ್ಲೇಖಿಸಿದೆ. ಇದನ್ನೂ ಓದಿ: ಇಂದಿನಿಂದ ಮಹಾ ಕುಂಭಮೇಳ – ನಾಗಸಾಧುಗಳು, ಅಘೋರಿಗಳ ಸಮಾಗಮ, ಏನೆಲ್ಲಾ ವಿಶೇಷತೆಗಳಿವೆ?