ಮಂಗಳೂರು: ವಿಪರೀತ ಮಳೆ ಹಾಗೂ ಕ್ಯಾರ್ ಚಂಡಮಾರುತದಿಂದ ಕಂಗೆಟ್ಟಿದ್ದ ಕರಾವಳಿ ಭಾಗದ ಜನತೆಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ.
ಕರಾವಳಿಗೆ ಮತ್ತೆ ಚಂಡಮಾರುತ ಅಪ್ಪಳಿಸುತ್ತಿದ್ದು, ಅರಬ್ಬಿ ಸಮುದ್ರದಲ್ಲಿ ಮತ್ತೆ ಚಂಡಮಾರುತದ ಮುನ್ಸೂಚನೆ ಸಿಕ್ಕಿದೆ. ಎರಡು ದಿನಗಳಲ್ಲಿ ‘ಮಹಾ’ ಹೆಸರಿನ ಚಂಡಮಾರುತ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Advertisement
Advertisement
ಕ್ಯಾರ್ ಚಂಡಮಾರುತದ ಬಳಿಕ ಚೇತರಿಕೆ ಕಂಡಿದ್ದ ಕರಾವಳಿ ಭಾಗದಲ್ಲಿ ಇದೀಗ ಮತ್ತೆ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಭಾರೀ ಮಳೆ ಹಾಗೂ ಚಂಡಮಾರುತದಿಂದ ಕೃಷಿಕರು ಈಗಾಗಲೇ ತತ್ತರಿಸಿದ್ದು, ಇದೀಗ ಮತ್ತೆ ಮಹಾ ಚಂಡಮಾರುತದ ಭಯ ಕಾಡುತ್ತಿದೆ. ಈ ಕುರಿತು ಇನ್ನೂ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ, ಇಂದು ರಾತ್ರಿ ವೇಳೆಗೆ ಚಂಡಮಾರುತದ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
Advertisement
ಕ್ಯಾರ್ ಚಂಡಮಾರುತದ ಅಬ್ಬರಕ್ಕೆ ಕರಾವಳಿ ಭಾಗದ ಜನರು ತತ್ತರಿಸಿ ಹೋಗಿದ್ದರು. ಅರಬ್ಬಿ ಸಮುದ್ರದಲ್ಲಿನ ವಾಯುಭಾರ ಕುಸಿತದಿಂದ ಉಂಟಾದ ಕ್ಯಾರ್ ಚಂಡಮಾರುತದಿಂದ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ತೀರದಲ್ಲಿ ಸಾಕಷ್ಟು ಹಾನಿ ಸಂಭವಿಸಿತ್ತು. ಕಡಲ ತೀರ ಪ್ರದೇಶದಲ್ಲಿ ಬೃಹತ್ ಗಾತ್ರದ ಅಲೆಗಳು ನುಗ್ಗಿ ಬಂದಿದ್ದರಿಂದ ಹಲವು ಮನೆಗಳಿಗೆ ನೀರು ನುಗ್ಗಿ ಜನರು ಒಂದೆಡೆ ಪರದಾಡಿದ್ದರು. ಅಲ್ಲದೆ ಅಲೆಗಳ ಅಬ್ಬರಕ್ಕೆ ಮೀನುಗಾರರು ಸಂಕಷ್ಟಕ್ಕೆ ಸಿಲುಕಿದ್ದರು. ವಿಪರೀತ ಮಳೆಗೆ ಉಡುಪಿಯ ಕುಂಜಾರುಗಿರಿ ಶಂಖತೀರ್ಥದಲ್ಲಿ ಸುಲೋಚನಾ(42) ಸಾವನ್ನಪ್ಪಿದ್ದರು.
Advertisement
ಕ್ಯಾರ್ ಚಂಡಮಾರುತ ಉತ್ತರ ಭಾಗಕ್ಕೆ ಚಲಿಸಿದ್ದ ಕಾರಣ ಅದರ ದೊಡ್ಡ ಪರಿಣಾಮ ದಕ್ಷಿಣ ಕನ್ನಡ ಜಿಲ್ಲೆಯ ಭಾಗಕ್ಕೆ ತಟ್ಟಿರಲಿಲ್ಲ. ಮಹಾರಾಷ್ಟ್ರ, ಗೋವಾ ಭಾಗದ ಕರಾವಳಿಗೆ ಹೆಚ್ಚು ಪರಿಣಾಮ ಬೀರಿತ್ತು.
ಕ್ಯಾರ್ ಚಂಡಮಾರುತ ಕೇಂದ್ರ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಿಂದ 240 ಕಿ.ಮೀ. ದೂರದಲ್ಲಿ ಕೇಂದ್ರೀಕೃತವಾಗಿತ್ತು. ನಂತರ ಉತ್ತರ ಭಾಗದತ್ತ ಚಲಿಸಿ, ಆಫ್ರಿಕಾ ಖಂಡದ ಒಮಾನ್ ದೇಶದತ್ತ ಚಲಿಸಿತ್ತು. ಹೀಗಾಗಿ ಸೈಕ್ಲೋನ್ ಎಫೆಕ್ಟ್ ಕರ್ನಾಟಕದ ಕರಾವಳಿಗೆ ಹೆಚ್ಚು ತಟ್ಟಿರಲಿಲ್ಲ. ಹೀಗಿದ್ದರೂ, ಮಂಗಳೂರಿನ ಆಸುಪಾಸಿನಲ್ಲಿ ಸಮುದ್ರ ಅಬ್ಬರಿಸಿತ್ತು. ಉಳ್ಳಾಲದ ಸೋಮೇಶ್ವರ, ಮುಕ್ಕಚ್ಚೇರಿ, ಸುರತ್ಕಲ್ ಬಳಿಯಲ್ಲಿ ಕಡಲು ಭೋರ್ಗರೆದಿತ್ತು. ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.
ಕೇವಲ ಕಾರವಾರ ಮಾತ್ರವಲ್ಲದೇ ಜಿಲ್ಲೆಯ ಅಂಕೋಲಾ ತಾಲೂಕಿನ ಬೆಳಂಬಾರ, ಕೇಣಿ, ಗಾಂವಕರ್ ವಾಡ, ಬೇಲೆಕೇರಿ, ಹಾರವಾಡ, ಕುಮಟಾ ತಾಲೂಕಿನ ಗೋಕರ್ಣ, ತದಡಿ, ಕುಡ್ಲೆ ಕಡಲ ತೀರ, ಮುರಡೇಶ್ವರದ ಕಡಲ ತೀರ ಹೊನ್ನಾವರ ಹಾಗೂ ಭಟ್ಕಳ ತಾಲೂಕಿನ ಬಹುತೇಕ ತೀರ ಪ್ರದೇಶದಲ್ಲಿ ಜನರು ಪರದಾಡಿದ್ದರು. ಹಲವೆಡೆ ಮನೆಗಳಿಗೆ ನೀರು ನುಗ್ಗಿತ್ತು. ಅಪಾರ ಪ್ರಮಾಣದ ಹಾನಿ ಸಹ ಸಂಭವಿಸಿತ್ತು. ಉತ್ತರ ಕನ್ನಡ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ದೊಡ್ಡ ಪ್ರಮಾಣದಲ್ಲಿ ಚಂಡಮಾರುತ ಕರಾವಳಿ ಪ್ರದೇಶಕ್ಕೆ ಅಪ್ಪಳಿಸಿದ್ದರಿಂದ ಕಡಲ ಮಕ್ಕಳು ಆತಂಕ್ಕೆ ಒಳಗಾಗಿದ್ದರು. ಈ ವರ್ಷ ಜೂನ್ ತಿಂಗಳಿನಿಂದಲೂ ಹವಾಮಾನ ವೈಪರಿತ್ಯದಿಂದ ಮೀನುಗಾರರು ಸರಿಯಾಗಿ ಮೀನುಗಾರಿಕೆಯೇ ಮಾಡದಂತಾಗಿದೆ.