ಮೈಸೂರು: ದಸರಾಗಾಗಿ ಕಾಡಿನಿಂದ ನಾಡಿಗೆ ಬಂದಿರುವ ಗಜಪಡೆಯನ್ನು ಅಚ್ಚುಕಟ್ಟಾಗಿ ನೋಡಿಕೊಳ್ಳಲಾಗುತ್ತಿದೆ. ಗಜಪಡೆ ತಾಲೀಮು ನಡೆಸುವ ಹಾದಿಯಲ್ಲಿ ಅವುಗಳ ಪಾದಕ್ಕೆ ಅಪಾಯ ಉಂಟು ಮಾಡುವ ಯಾವ ವಸ್ತುಗಳು ಇರದಂತೆ ಮಾಡಲಾಗುತ್ತಿದೆ. ಇದಕ್ಕಾಗಿ ಮ್ಯಾಗ್ನೆಟಿಕ್ ರೋಲರ್ ಬಳಕೆಯಾಗುತ್ತಿದೆ.
ಕ್ಯಾಪ್ಟನ್ ಅರ್ಜುನ ನೇತೃತ್ವದ ಗಜಪಡೆಯೂ ಪ್ರತಿ ದಿನ ಅರಮನೆಯಿಂದ ಬನ್ನಿಮಂಟಪದವರೆಗೂ ತಾಲೀಮು ಮಾಡುತ್ತವೆ. ಈ ಹಾದಿಯಲ್ಲಿ ಸಾಮಾನ್ಯವಾಗಿ ಕಬ್ಬಿಣದ ಚೂರು, ಲೋಹದ ತುಣಕುಗಳು, ಗ್ಲಾಸ್ ಚೂರುಗಳು ಬಿದ್ದಿರುತ್ತವೆ. ಆನೆಗಳ ಪಾದಕ್ಕೆ ಇವು ಚುಚ್ಚಿದರೆ ಅವುಗಳ ಪಾದಕ್ಕೆ ಅಪಾಯ ಖಚಿತ.
ರಸ್ತೆಯ ಕಸ ಗುಡಿಸಿದರೂ ಈ ಲೋಹದ ಚೂರುಗಳು ರಸ್ತೆಯಲ್ಲೇ ಇರುತ್ತವೆ. ಹೀಗಾಗಿ ಲೋಹದ ಚೂರುಗಳು ಇರದಂತೆ ಮಾಡಲು ಮ್ಯಾಗ್ನೆಟಿಕ್ ರೋಲರ್ ಬಳಸಲಾಗುತ್ತಿದೆ. ಗಜಪಡೆಯ ಮುಂದೆ ಸಾರಥಿಯಂತೆ ಮಾಗ್ನೆಟಿಕ್ ರೋಲರ್ ಸಾಗುತ್ತದೆ. ಆನೆಗಳು ಸಾಗುವ ಮುನ್ನ ಅವುಗಳ ಮುಂಭಾಗದಲ್ಲಿ ಈ ರೋಲರ್ ಸಾಗುತ್ತದೆ. ಈ ಮ್ಯಾಗ್ನೆಟಿಕ್ ರೋಲರ್ ಕಬ್ಬಿಣದ ಚೂರು, ಗ್ಲಾಸ್ ಚೂರು, ಲೋಹದ ತುಣಕುಗಳನ್ನು ಸೆಳೆದು ಕೊಳ್ಳತ್ತದೆ. ಆಗ ಆನೆಗಳು ಸಾಗುವ ಹಾದಿ ಲೋಹದ ತುಂಡುಗಳಿಂದ ಮುಕ್ತವಾಗುತ್ತೆ. ಇದರಿಂದ ಆನೆಗಳ ಪಾದಕ್ಕೆ ತೊಂದರೆ ಆಗುವುದು ತಪ್ಪಿದಂತಾಗುತ್ತಿದೆ. ದಿನದ ಎರಡು ಬಾರಿಯ ತಾಲೀಮಿನಲ್ಲೂ ಈ ಮ್ಯಾಗ್ನೆಟಿಕ್ ರೋಲರ್ ಬಳಸಲಾಗುತ್ತಿದೆ. ಮೊದಲು ಜಂಬೂ ಸವಾರಿ ದಿನ ಮಾತ್ರ ಕೈಗಳಿಂದ ಲೋಹದ ಚೂರುಗಳನ್ನು ಸ್ವಚ್ಚ ಮಾಡಲಾಗುತ್ತಿತ್ತು. ಈಗ ಮೈಸೂರು ಭಾಗದ ಸಂತೋಷ್ ಮತ್ತು ವಿಜಯ್ ಈ ಮ್ಯಾಗ್ನೆಟಿಕ್ ರೋಲರ್ ತಯಾರಿಸಿ ಅರಣ್ಯ ಇಲಾಖೆಗೆ ನೀಡಿದ್ದಾರೆ.
ಈ ರೋಲರ್ ನಲ್ಲಿ ಹೆಚ್ಚಿನ ವಿದ್ಯುತ್ ಕಾಂತೀಯ ಮ್ಯಾಗ್ನೆಟಿಕ್ ಬಳಕೆ ಮಾಡಲಾಗಿದೆ. ಇದರಿಂದ ರಸ್ತೆಯಲ್ಲಿ ಬಂದಿರುವ ಎಲ್ಲಾ ರೂಪದ ಲೋಹದ ತುಂಡುಗಳನ್ನು ಅದು ಸೆಳೆದುಕೊಳ್ಳುತ್ತದೆ. ಈ ರೋಲರ್ ನಿಜಕ್ಕೂ ಆನೆಗಳ ಪಾದದ ಸುರಕ್ಷತೆ ಹೆಚ್ಚಿನ ಸಹಕಾರಿಯಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv