ಮಂಡ್ಯ: ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಜಾಮೀಯಾ ಮಸೀದಿ (Srirangapatna Jama Masjid) ಹಲವು ವರ್ಷಗಳಿಂದ ವಿವಾದದ ಕೇಂದ್ರ ಬಿಂದು ಆಗಿದೆ. ಇದು ಮಸೀದಿಯಲ್ಲ ಮೂಡಲ ಬಾಗಿಲ ಆಂಜನೇಯಸ್ವಾಮಿ ದೇವಸ್ಥಾನ ಎಂಬ ವಿವಾದದಿಂದ ಜಾಮೀಯಾ ಮಸೀದಿ ಸದ್ದು ಮಾಡುತ್ತಿದೆ. ಇದೀಗ ಈ ಜಾಮೀಯಾ ಮಸೀದಿಯಲ್ಲಿ ನಡೆಯುತ್ತಿರುವ ಚಟುವಟಿಕೆಗಳು ಮತ್ತೊಂದು ವಿವಾದ ಸೃಷ್ಟಿ ಮಾಡುತ್ತಿದೆ.

ಜಾಮೀಯಾ ಮಸೀದಿ ಪುರಾತತ್ವ ಇಲಾಖೆಗೆ ಸೇರಿದ್ದಾಗಿದ್ದು, ಪುರಾತತ್ವ ಇಲಾಖೆಯ ಪ್ರಕಾರ ಅವರ ಸ್ವತ್ತಿನಲ್ಲಿ ಯಾವುದೇ ಕಾರ್ಯಚಟುವಟಿಕೆಗಳನ್ನ ಮಾಡುವಂತಿಲ್ಲ. ಆದರೆ ಜಾಮೀಯಾ ಮಸೀದಿಯಲ್ಲಿ ಮದರಸ (Madrasa) ನಡೆಸಲಾಗುತ್ತಿದೆ. ಈ ಮೂಲಕ ಪುರಾತತ್ವ ಇಲಾಖೆಯ ನಿಯಮಗಳನ್ನ ಗಾಳಿಗೆ ತೂರಲಾಗಿದೆ. ಇಲ್ಲಿಯೇ ಹಲವು ಮಕ್ಕಳಿಗೆ ಇಸ್ಲಾಂ ಬೋಧನೆ ಮಾಡುತ್ತಾ, ಅವರುಗಳನ್ನು ಇಲ್ಲಿಯೇ ವಾಸ್ತವ್ಯ ಸಹ ಇರಿಸಲಾಗಿದೆ.
ಸದ್ಯ ರಾಜ್ಯ ಸರ್ಕಾರ ಆರ್‌ಎಸ್‌ಎಸ್ (RSS) ಸಂಘಟನೆಗೆ ಸರ್ಕಾರಿ ಜಾಗಗಳಲ್ಲಿ ಕಾರ್ಯಚಟುವಟಿಕೆ ಮಾಡಲು ಹಲವು ನಿಯಮಗಳನ್ನು ವಿಧಿಸಿದೆ. ಆದರೆ ಪುರಾತತ್ವ ಇಲಾಖೆಗೆ ಒಳಪಡುವ ಜಾಮೀಯಾ ಮಸೀದಿಯಲ್ಲಿ ಮದರಸ ನಡೆಸಲು ಹೇಗೆ ಬಿಡಲಾಗಿದೆ. ಹಿಂದೂ ಸಂಘಟನೆಗೆ ಒಂದು ನ್ಯಾಯ, ಮುಸ್ಲಿಮರಿಗೆ ಇನ್ನೊಂದು ನ್ಯಾಯನಾ ಎಂದು ಪ್ರಶ್ನಿಸಲಾಗುತ್ತಿದೆ. ಈ ಬಗ್ಗೆ ಬಜರಂಗದಳ (Bajrang Dal) ಮಂಡ್ಯ ಜಿಲ್ಲಾಧಿಕಾರಿಗೆ ಪತ್ರ ಬರೆದು ಕ್ರಮಕ್ಕೆ ಆಗ್ರಹಿಸಿದೆ.

ಒಟ್ಟಾರೆ ಆರ್‌ಎಸ್‌ಎಸ್ ಸಂಘಟನೆಗೆ ನಿಯಮ ವಿಧಿಸುವ ರಾಜ್ಯ ಸರ್ಕಾರ ಪುರಾತತ್ವ ಇಲಾಖೆಯ ಜಾಮೀಯಾ ಮಸೀದಿಯಲ್ಲಿ ಮದರಸಕ್ಕೆ ಅನುಮತಿ ನೀಡಿರುವುದು ಎಷ್ಟರಮಟ್ಟಿಗೆ ಸರಿ ಎಂಬ ಆಕ್ರೋಶ ವ್ಯಕ್ತವಾಗಿದೆ. ಈಗ ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತೆ ಎನ್ನೋದನ್ನು ಕಾದು ನೋಡಬೇಕಿದೆ.
