ಚೆನ್ನೈ: ಚೀನಾ ಮೂಲದ ಬೈಟ್ ಡಾನ್ಸ್ ಕಂಪನಿಯ ಖ್ಯಾತ ವಿಡಿಯೋ ಆ್ಯಪ್ ಟಿಕ್ ಟಾಕ್ ಮೇಲೆ ಈ ಹಿಂದೆ ವಿಧಿಸಿದ್ದ ನಿಷೇಧವನ್ನು ಮದ್ರಾಸ್ ಹೈಕೋರ್ಟ್ ತೆರವುಗೊಳಿಸಿದೆ.
ಕಳೆದ ಏಪ್ರಿಲ್ 18 ರಿಂದ ಗೂಗಲ್ ಪ್ಲೇ ಸ್ಟೋರ್ ಹಾಗೂ ಆ್ಯಪ್ ಸ್ಟೋರ್ ನಲ್ಲಿ ಟಿಕ್ ಟಾಕನ್ನು ತೆಗೆದು ಹಾಕಲಾಗಿತ್ತು. ಸುಪ್ರೀಂ ಕೋರ್ಟ್ ಸೋಮವಾರ ನೀಡಿದ ಸೂಚನೆ ಮೇರೆಗೆ ಇಂದು ಮದ್ರಾಸ್ ಹೈಕೋರ್ಟ್ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿತ್ತು. ನ್ಯಾ.ಎಸ್‍ಎಸ್ ಸುಂದರ್ ಹಾಗೂ ನ್ಯಾ. ಎನ್ ಕಿರುಬಕರನ್ ನೇತೃತ್ವದ ದ್ವಿಸದಸ್ಯ ಪೀಠ ಅರ್ಜಿಯ ವಿಚಾರಣೆಯನ್ನು ನಡೆಸಿತು.
Advertisement
Advertisement
ಟಿಕ್‍ಟಾಕ್ ಪರವಾಗಿ ಹಿರಿಯ ವಕೀಲ ಐಸಾಕ್ ಮೋಹನ್‍ಲಾಲ್ ವಿಚಾರಣೆಗೆ ಹಾಜರಾಗಿ, ಅಶ್ಲೀಲ/ ನಗ್ನ ವಿಡಿಯೋಗಳನ್ನು ಅಪ್ಲೋಡ್ ಮಾಡದಂತೆ ಆಪ್‍ನಲ್ಲಿ ಟೆಕ್ನಾಲಜಿಯನ್ನು ಅಭಿವೃದ್ಧಿ ಪಡಿಸಿದ್ದೇವೆ. ಈ ಹಿಂದಿನ ವಿಚಾರಣೆಯ ಸಮಯದಲ್ಲಿ ಕೋರ್ಟ್ ಎತ್ತಿದ ಆಕ್ಷೇಪಗಳಿಗೆ ಸಂಬಂಧಿಸಿದಂತೆ ನಾವು ವಿವಿಧ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಂಡಿದ್ದೇವೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
Advertisement
ಪ್ರಕರಣದಲ್ಲಿ ಅಮಿಕಸ್ ಕ್ಯೂರಿಯಾಗಿದ್ದ ಅರವಿಂದ್ ದತಾರ್ ಅವರು, ಮಾಹಿತಿ ತಂತ್ರಜ್ಞಾನ ಕಾಯ್ದೆಯ ಅಡಿ ಆನ್‍ಲೈನ್ ಭಾಷಣಕ್ಕೆ ನಿರ್ಬಂಧ ಹೇರಲು ಸಾಧ್ಯವಿಲ್ಲ. ಸಂವಿಧಾನ ವಾಕ್ ಸ್ವಾತಂತ್ರ್ಯಕ್ಕೆ ಅನುಮತಿ ನೀಡಿದೆ. ನ್ಯಾಯಾಂಗದ ಮೂಲಕ ಬಳಕೆದಾರರ ಸ್ವಾತಂತ್ರ್ಯದ ಮೇಲೆ ನಿರ್ಬಂಧ ಹೇರಲು ಸಾಧ್ಯವಿಲ್ಲ. ಅಪ್ಲಿಕೇಶನ್ ನಿಷೇಧ ಮಾಡದೇ ಬಳಕೆದಾರರ ಸುರಕ್ಷತೆಯ ಬಗ್ಗೆ ಗಮನ ಹರಿಸುವುದು ಉತ್ತಮ ಎಂದು ತನ್ನ ಅಭಿಪ್ರಾಯವನ್ನು ಮಂಡಿಸಿದರು.
Advertisement
ಈ ವೇಳೆ ಅರ್ಜಿದಾರರು ಚೀನಾ ದೇಶದ ಅಪ್ಲಿಕೇಶನ್ ಇದಾಗಿದ್ದು, ಇದರಿಂದಾಗಿ ದೇಶದ ಭದ್ರತೆಗೆ ಅಪಾಯವಿದೆ ಎಂದು ಮತ್ತೊಂದು ಅಂಶವನ್ನು ಉಲ್ಲೇಖಿಸಿ ನಿಷೇಧವನ್ನು ತೆರವುಗೊಳಿಸಬಾರದು ಎಂದು ಮನವಿ ಮಾಡಿದರು.
ಎರಡು ಕಡೆಯ ವಾದಗಳನ್ನು ಅಲಿಸಿದ ಕೋರ್ಟ್ ಗ್ರಾಹಕರಿಗೆ ರಕ್ಷಣೆ ನೀಡಬೇಕೆಂದು ಟಿಕ್ ಟಾಕ್ ಕಂಪನಿಗೆ ಸೂಚಿಸಿತು. ಅದರಲ್ಲೂ ಮಕ್ಕಳ ರಕ್ಷಣೆಗೆ ವಿಶೇಷ ಗಮನಹರಿಸಬೇಕೆಂದು ಹೇಳಿ ಈ ಹಿಂದೆ ನೀಡಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸಿತು. ಇದನ್ನು ಓದಿ: ಟಿಕ್ ಟಾಕ್ ಬ್ಯಾನ್‍ನಿಂದ ಕಂಪನಿಗೆ ದಿನಕ್ಕೆ 4.5 ಕೋಟಿ ನಷ್ಟ!
ಏನಿದು ಪ್ರಕರಣ?
ಟಿಕ್ ಟಾಕ್ ಆ್ಯಪ್ ಪೊರ್ನೋಗ್ರಫಿಗೆ ಕಾರಣವಾಗುತ್ತಿದೆ, ಮಕ್ಕಳನ್ನು ದುರುಪಯೋಗ ಪಡಿಸಿ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿದೆ ಎಂದು ಆರೋಪಿಸಿ ಅರ್ಜಿದಾರರು ಆ್ಯಪ್ ನಿಷೇಧಿಸಬೇಕು ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಆಪ್ ನಿಷೇಧಿಸುವಂತೆ ಮಧ್ಯಂತರ ಆದೇಶ ಹೊರಡಿಸಿತ್ತು.
ಈ ಆದೇಶಕ್ಕೆ ತಡೆ ನೀಡಬೇಕೆಂದು ಟಿಕ್‍ಟಾಕ್ ಕಂಪನಿ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಸುಪ್ರೀಂ ಕೋರ್ಟ್ ಈ ಆದೇಶಕ್ಕೆ ತಡೆ ನೀಡದ ಕಾರಣ ಸರ್ಕಾರ ಈ ಆಪ್ ನಿಷೇಧಿಸುವಂತೆ ಗೂಗಲ್ ಮತ್ತು ಆಪಲ್ ಕಂಪನಿಗಳಿಗೆ ಸೂಚಿಸಿತ್ತು.
ಏ.22ರಂದು ಸುಪ್ರೀಂ ಕೋರ್ಟ್ ಈ ಅರ್ಜಿಯ ವಿಚಾರಣೆಯನ್ನು ಮದ್ರಾಸ್ ಹೈಕೋರ್ಟಿಗೆ ಒಪ್ಪಿಸಿತ್ತು. ಈ ವೇಳೆ ಟಿಕ್ ಟಾಕ್ ಆ್ಯಪ್ ನಿಷೇಧ ಮಾಡುವಂತೆ ಸಲ್ಲಿಸಲಾಗಿರುವ ಅರ್ಜಿಯಲ್ಲಿರುವ ತಕಾರಾರುಗಳಿಗೆ ಆಕ್ಷೇಪ ವ್ಯಕ್ತಪಡಿಸಿ ಬೈಟ್ ಡ್ಯಾನ್ಸ್ ಸಂಸ್ಥೆ ಕೂಡ ಕೋರ್ಟ್ ನಲ್ಲಿ ಪ್ರಶ್ನಿಸಬಹುದು. ಒಂದು ವೇಳೆ ಏ.24ರಂದು ಈ ಕುರಿತು ನಿರ್ಧಾರ ಕೈಗೊಳ್ಳಲು ಮದ್ರಾಸ್ ಹೈಕೋರ್ಟ್ ವಿಫಲವಾದರೆ, ಆಗ ಆ್ಯಪ್ ಬ್ಯಾನ್ ಕುರಿತಂತೆ ನೀಡಿದ್ದ ಆದೇಶ ರದ್ದುಗೊಳ್ಳುತ್ತದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿತ್ತು.