ದೇವಸ್ಥಾನದ ಆವರಣದ ಒಳಗಡೆ ಮೊಬೈಲ್‌, ಕ್ಯಾಮೆರಾಕ್ಕೆ ನಿರ್ಬಂಧ ವಿಧಿಸಿ: ತಮಿಳುನಾಡು ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

Public TV
2 Min Read
madras high court Madurai bench

ಚೆನ್ನೈ: ಶುದ್ಧತೆ ಮತ್ತು ಪಾವಿತ್ರ್ಯತೆ ಕಾಪಾಡಲು ರಾಜ್ಯದ ಎಲ್ಲ ದೇವಸ್ಥಾನದ(Temple) ಆವರಣದ ಒಳಗಡೆ ಮೊಬೈಲ್‌ ಫೋನ್‌(Mobile Phone) ಮತ್ತು ಕ್ಯಾಮೆರಾವನ್ನು(Camera) ನಿಷೇಧಿಸುವಂತೆ ಮದ್ರಾಸ್‌ ಹೈಕೋರ್ಟ್‌(Madras High Court) ತಮಿಳುನಾಡು ಸರ್ಕಾರಕ್ಕೆ(Tamilnadu Government) ನಿರ್ದೇಶನ ನೀಡಿದೆ.

ಮಧುರೈ ಪೀಠದ ನ್ಯಾಯಮೂರ್ತಿಗಳಾದ ಆರ್ ಮಹದೇವನ್ ಮತ್ತು ಜೆ ಸತ್ಯನಾರಾಯಣ ಅವರಿದ್ದ ದ್ವಿಸದಸ್ಯ ಪೀಠವು ಭಕ್ತರು ಮತ್ತು ದೇವಾಲಯಗಳಿಗೆ ಭೇಟಿ ನೀಡುವವರು ಯೋಗ್ಯವಾದ ವಸ್ತ್ರ ಸಂಹಿತೆಯನ್ನು ಪಾಲಿಸುವಂತೆ ಸೂಚಿಸಿ ಎಂದು ರಾಜ್ಯಕ್ಕೆ ನಿರ್ದೇಶನ ನೀಡಿದೆ.

ತೂತುಕುಡಿ ಜಿಲ್ಲೆಯ ಪುರಾತನ ಅರುಲ್ಮಿಗು ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಕಾರ್ಯನಿರ್ವಾಹಕರೊಬ್ಬರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ವಿಚಾರಣೆ ವೇಳೆ ಕೋರ್ಟ್‌ ಈ ಆದೇಶ ಪ್ರಕಟಿಸಿದೆ. ಇದನ್ನೂ ಓದಿ: HDK ಪ್ರಧಾನಿಯಾದ್ರೆ ಜೆಡಿಎಸ್‍ನಲ್ಲಿ ದಲಿತ, ಮುಸ್ಲಿಂ CM: ಸಿಎಂ ಇಬ್ರಾಹಿಂ

Mobile Ban

ದೇವಾಲಯಗಳ ಒಳಗೆ ಇರುವ ಮೊಬೈಲ್ ಫೋನ್‌ಗಳು ಮತ್ತು ಕ್ಯಾಮೆರಾಗಳು ಭಕ್ತರ ಗಮನವನ್ನು ಬೇರೆಡೆಗೆ ತಿರುಗಿಸುತ್ತವೆ. ಆದ್ದರಿಂದ ದೇವಾಲಯದ ಆವರಣದಲ್ಲಿ ಅವುಗಳ ಬಳಕೆಯನ್ನು ದೇವಾಲಯದ ಅಧಿಕಾರಿಗಳು ನಿಯಂತ್ರಿಸಬೇಕು ಎಂದು ಪೀಠ ಹೇಳಿದೆ.

ಸಂವಿಧಾನದ 25 ನೇ ವಿಧಿಯ ಅಡಿಯಲ್ಲಿ ಎಲ್ಲಾ ವ್ಯಕ್ತಿಗಳು ಮುಕ್ತವಾಗಿ ಧರ್ಮವನ್ನು ಪ್ರತಿಪಾದಿಸಲು, ಆಚರಿಸಲು ಮತ್ತು ಪ್ರಚಾರ ಮಾಡಲು ಅರ್ಹರಾಗಿದ್ದಾರೆ ಎಂಬುದಕ್ಕೆ ಯಾವುದೇ ಆಕ್ಷೇಪವಿಲ್ಲ. ಆದರೆ ದೇವಾಲಯದ ಆವರಣದೊಳಗೆ ಕಾರ್ಯನಿರ್ವಹಿಸಲು ಮತ್ತು ಆಚರಣೆಗೆ ಅಂತಹ ಸ್ವಾತಂತ್ರ್ಯವು ನಿಯಮಗಳಿಗೆ ಒಳಪಟ್ಟಿರುತ್ತದೆ. ದೇವಸ್ಥಾನದಲ್ಲಿ ನಡೆಯುವ ಪೂಜಾ ವಿಧಿವಿಧಾನಗಳ ನಿಯಮಾವಳಿಗಳನ್ನು ಸೂಚಿಸಿ  ಅಧಿಕಾರಿಗಳು ದೇವಾಲಯದ ಪಾವಿತ್ರ್ಯತೆ ಕಾಪಾಡುವಂತೆ ನೋಡಿಕೊಳ್ಳಬೇಕು ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ.

court order law

ದೇವಸ್ಥಾನಕ್ಕೆ ಪ್ರತಿದಿನ ಸಾವಿರಾರು ಭಕ್ತರು ಆಗಮಿಸುತ್ತಾರೆ. ಆದ್ದರಿಂದ ದೇವಾಲಯದ ಅಧಿಕಾರಿಗಳು ಸಾಕಷ್ಟು ಸುರಕ್ಷತಾ ವ್ಯವಸ್ಥೆಗಳನ್ನು ಮಾಡಬೇಕಾಗುತ್ತದೆ. ಹೆಚ್ಚಿನ ಭಕ್ತರು ದೇವಾಲಯದ ಆವರಣದ ಒಳಗಿನಿಂದ ಚಿತ್ರಗಳನ್ನು ತೆಗೆಯುತ್ತಾರೆ ಮತ್ತು ವೀಡಿಯೊಗಳನ್ನು ಮಾಡುತ್ತಾರೆ. ದೇವಾಲಯದಲ್ಲಿ ಇರಿಸಲಾಗಿರುವ ವಿಗ್ರಹಗಳು ಮತ್ತು ಇತರ ಬೆಲೆಬಾಳುವ ವಸ್ತುಗಳ ಫೋಟೋಗಳನ್ನು ತೆಗೆಯುತ್ತಾರೆ. ಭದ್ರತಾ ದೃಷ್ಟಿಯಿಂದ ಇವುಗಳಿಗೆ ನಿರ್ಬಂಧ ಹೇರಬೇಕೆಂದು ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು.

ಮಧುರೈನ ಪ್ರಸಿದ್ಧ ಮೀನಾಕ್ಷಿ ದೇವಸ್ಥಾನ ಸೇರಿದಂತೆ ರಾಜ್ಯದ ಇತರ ಹಲವಾರು ದೇವಾಲಯಗಳ ಒಳಗಡೆ ಭಕ್ತರು ತಮ್ಮ ಫೋನ್ ಅಥವಾ ಕ್ಯಾಮೆರಾಗಳನ್ನು ದೇವಾಲಯದ ಆವರಣದೊಳಗೆ ಕೊಂಡೊಯ್ಯಲು ಅನುಮತಿ ನೀಡುವುದಿಲ್ಲ ಎಂಬ ವಿಚಾರವನ್ನು ಅರ್ಜಿದಾರರು ಅರ್ಜಿಯಲ್ಲಿ ಉಲ್ಲೇಖಿಸಿದ್ದರು.

temple dress code

ಮೀನಾಕ್ಷಿ ದೇವಸ್ಥಾನದಲ್ಲಿ ಭಕ್ತರು ದೇವಸ್ಥಾನಕ್ಕೆ ಪ್ರವೇಶಿಸುವ ಮೊದಲು ತಮ್ಮ ಫೋನ್‌ಗಳನ್ನು ಲಾಕರ್‌ನಲ್ಲಿ ಇಡಬೇಕಾಗುತ್ತದೆ. ಭಕ್ತರು ಹೊರಗೆ ಬಂದ ನಂತರ ಫೋನ್‌ಗಳನ್ನು ಹಿಂಪಡೆಯಲು ಅವಕಾಶ ನೀಡಲಾಗುತ್ತದೆ ಎಂದು ಅರ್ಜಿದಾರರು ತಿಳಿಸಿದ್ದರು.

ತೂತುಕುಡಿಯ ದೇವಸ್ಥಾನದ ಒಳಗೆ ಫೋನ್ ಮತ್ತು ಕ್ಯಾಮೆರಾಗಳನ್ನು ಬಳಸುವುದನ್ನು ನಿಷೇಧಿಸುವ ಅಧಿಸೂಚನೆಯನ್ನು ಈಗಾಗಲೇ ಹೊರಡಿಸಲಾಗಿದೆ. ಭಕ್ತರು ಮತ್ತು ದೇವಾಲಯಕ್ಕೆ ಭೇಟಿ ನೀಡುವವರು ಸಭ್ಯ ಡ್ರೆಸ್ ಕೋಡ್ ಅನುಸರಿಸಬೇಕು ಎಂದು ಸೂಚಿಸಲಾಗಿದೆ ಎಂಬುದನ್ನು ತೂತುಕುಡಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಕೋರ್ಟ್‌ ಗಮನಕ್ಕೆ ತಂದಿದ್ದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *