Connect with us

Latest

ಶಾಲಾ-ಕಾಲೇಜು, ಕಚೇರಿಗಳಲ್ಲಿ ವಂದೇ ಮಾತರಂ ಕಡ್ಡಾಯ: ಮದ್ರಾಸ್ ಹೈಕೋರ್ಟ್

Published

on

ಚೆನ್ನೈ: ತಮಿಳುನಾಡಿನ ಎಲ್ಲಾ ಶಾಲಾ ಕಾಲೇಜುಗಳು, ವಿಶ್ವವಿದ್ಯಾಲಯಗಳು ಹಾಗೂ ಇತರೆ ಶೈಕ್ಷಣಿಕ ಸಂಸ್ಥೆಗಳಲ್ಲಿ ವಾರಕ್ಕೆ ಕನಿಷ್ಠ ಒಂದು ಬಾರಿ ವಂದೇ ಮಾತರಂ ಹಾಡುವುದು ಕಡ್ಡಾಯ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ.

ಪ್ರಕರಣವೊಂದರ ಇತ್ಯರ್ಥದ ವೇಳೆ ಮದ್ರಾಸ್ ಹೈಕೋರ್ಟ್ ಈ ಆದೇಶ ನೀಡಿದೆ. ವೀರಮಣಿ ಎಂಬವರು ರಾಜ್ಯ ನೇಮಕಾತಿ ಮಂಡಳಿ ಪರೀಕ್ಷೆಯಲ್ಲಿ ವಂದೇ ಮಾತರಂ ಯಾವ ಭಾಷೆಯಲ್ಲಿದೆ ಎಂಬ ಪ್ರಶ್ನೆಗೆ ಬೆಂಗಾಲಿ ಎಂದು ಉತ್ತರಿಸಿದ್ದರು. ಆದ್ರೆ ಆನ್ಸರ್ ಕೀನಲ್ಲಿ ಸಂಸ್ಕೃತ ಎಂಬ ಉತ್ತರ ನೀಡಲಾಗಿತ್ತು. ಇದನ್ನ ಪ್ರಶ್ನಿಸಿ ವೀರಮಣಿ ಕೋರ್ಟ್ ಮೆಟ್ಟಿಲೇರಿದ್ದರು. ವಂದೇ ಮಾತರಂ ಸಂಸ್ಕೃತದಲ್ಲಿದೆಯೋ ಬೆಂಗಾಲಿ ಭಾಷೆಯಲ್ಲಿದೆಯೋ ಎಂಬ ಬಗ್ಗೆ ಸ್ಪಷ್ಟೀಕರಣ ನೀಡಬೇಕೆಂದು ಕೋರಿದ್ದರು.

ಜೂನ್ 13ರಂದು ಅಡ್ವೋಕೇಟ್ ಜನರಲ್ ಆರ್ ಮುತ್ತುಕುಮಾರಸ್ವಾಮಿ ಅವರು ಇದಕ್ಕೆ ಸ್ಪಷ್ಟೀಕರಣ ನೀಡಿ, ವಂದೇ ಮಾತರಂನ ಮೂಲ ಭಾಷೆ ಸಂಸ್ಕೃತ ಆದ್ರೆ ಬೆಂಗಲಿಯಲ್ಲಿ ಬರೆಯಲಾಗಿದೆ ಎಂದು ಹೇಳಿದ್ದರು.

 

ಈ ಹಿನ್ನೆಲೆಯಲ್ಲಿ ವೀರಮಣಿ ಅವರು ಪರೀಕ್ಷೆಯಲ್ಲಿ ಕಳೆದುಕೊಂಡಿದ್ದ 1 ಅಂಕವನ್ನು ನೀಡಬೇಕೆಂದು ಕೋರ್ಟ್ ನಿರ್ಧರಿಸಿದೆ. ಅಲ್ಲದೆ ಎಲ್ಲಾ ಶಾಲಾ ಕಾಲೇಜುಗಳು, ವಿಶ್ವವಿದ್ಯಾಲಯಗಳು ಹಾಗೂ ಇತರೆ ಶೈಕ್ಷಣಿಕ ಸಂಸ್ಥೆಗಳಲ್ಲಿ ವಾರಕ್ಕೆ ಕನಿಷ್ಠ ಒಂದು ಬಾರಿ (ಪ್ರಮುಖವಾಗಿ ಸೋಮವಾರ ಅಥವಾ ಶುಕ್ರವಾರ) ವಂದೇ ಮಾತರಂ ಕಡ್ಡಾಯವಾಗಿ ಹಾಡಬೇಕು. ಸರ್ಕಾರಿ ಕಚೇರಿ, ಖಾಸಗಿ ಸಂಸ್ಥೆಗಳು ಹಾಗೂ ಫ್ಯಾಕ್ಟರಿಗಳಲ್ಲಿ ತಿಂಗಳಿಗೆ ಕನಿಷ್ಠ ಒಂದು ಬಾರಿ ವಂದೇ ಮಾತರಂ ಹಾಡುವುದು ಕಡ್ಡಾಯ ಎಂದು ಕೋರ್ಟ್ ಹೇಳಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸರ್ಕಾರಿ ವೆಬ್‍ಸೈಟ್‍ಗಳಲ್ಲಿ ಲಭ್ಯವಿರುವಂತೆ ಮಾಡಲು ತಮಿಳು ಹಾಗೂ ಇಂಗ್ಲಿಷ್‍ನಲ್ಲಿ ವಂದೇ ಮಾತರಂನ ಭಾಷಾಂತರಿತ ಆವೃತ್ತಿಯನ್ನು ಅಪ್‍ಲೋಡ್ ಮಾಡಿ ಹಂಚಿಕೊಳ್ಳಬೇಕು ಎಂದು ಸಾರ್ವಜನಿಕ ಮಾಹಿತಿ ನಿರ್ದೇಶಕರಿಗೆ ಸೂಚಿಸಲಾಗಿದೆ.

ಒಂದು ವೇಳೆ ಯಾವುದಾದ್ರೂ ಸಂಸ್ಥೆಗೆ ಅಥವಾ ವ್ಯಕ್ತಿಗೆ ವಂದೇ ಮಾತರಂ ಹಾಡುವುದಕ್ಕೆ ಕಷ್ಟವಾದ್ರೆ ಅವನು/ಅವಳಿಗೆ ಹಾಡಲು ಬಲವಂತ ಮಾಡುವಂತಿಲ್ಲ ಎಂದು ಕೋರ್ಟ್ ಆದೇಶದಲ್ಲಿ ಹೇಳಿದೆ. ಇಂದಿನ ಯುವಕರೇ ದೇಶದ ನಾಳಿನ ಭವಿಷ್ಯ. ಈ ಆದೇಶವನ್ನು ಸಕಾರಾತ್ಮವಾಗಿ ಸ್ವೀಕರಿಸಿ ದೇಶದ ಪ್ರಜೆಗಳು ಇದನ್ನು ಪಾಲಿಸುತ್ತಾರೆಂದು ಈ ಕೋರ್ಟ್ ನಂಬಿರುತ್ತದೆ ಎಂದು ಆದೇಶದ ಕೊನೆಯಲ್ಲಿ ತಿಳಿಸಲಾಗಿದೆ.

Click to comment

Leave a Reply

Your email address will not be published. Required fields are marked *