ಮಡಿಕೆರಿ: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ದುಬಾರೆ ಪ್ರವಾಸಿದಾಮದಲ್ಲಿ ಪ್ರವಾಸಿಗರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ನಡುವೆ ಮಾರಾಮಾರಿ ನಡೆದಿದೆ.
ಆನೆ ಕ್ಯಾಂಪ್‍ಗೆ ಮೋಟಾರ್ ಬೋಟ್ ಮೂಲಕ ತೆರಳುವ ವಿಚಾರಕ್ಕೆ ಉಂಟಾದ ಮಾತಿನ ಚಕಮಕಿ ಕೈಕೈ ಮಿಲಾಯಿಸುವ ಹಂತ ತಲಪಿದೆ. ಮಂಗಳೂರಿನ ಪಡೀಲಿನಿಂದ ಒಂದು ಬಸ್‍ನಲ್ಲಿ ಆಗಮಿಸಿದ್ದ ಪ್ರವಾಸಿಗರು ಬೋಟಿಂಗ್ ತೆರಳಲು ಸರದಿಯಲ್ಲಿ ನಿಂತಿದ್ದರು. ಈ ಸಂದರ್ಭ ಸಮಯ ಮೀರಿ ಬೋಟಿಂಗ್ ಸ್ಥಗಿತಗೊಳಿಸಿದ ಕಾರಣ ಆಕ್ರೋಶಗೊಂಡ ಪ್ರವಾಸಿಗರ ಪೈಕಿ ಐವರು ಯುವಕರು ತಮ್ಮ ಮೇಲೆ ಹಲ್ಲೆ ನಡೆಸಿ ತಲೆ ಮತ್ತು ಮುಖಕ್ಕೆ ಘಾಸಿಗೊಳಿಸಿದ್ದಾರೆ ಎಂದು ಅರಣ್ಯ ಇಲಾಖೆಯ ದಿನಗೂಲಿ ನೌಕರರಾದ ರವಿ ತಮ್ಮಯ್ಯ, ರಮೇಶ್ ಆರೋಪಿಸಿದ್ದಾರೆ.
ಇತ್ತ ಪ್ರವಾಸಿಗರು ತಮ್ಮದೇನೂ ತಪ್ಪಿಲ್ಲ. ನಮ್ಮ ಮುಂದೆ ನಿಂತಿದ್ದ ಕೆಲವು ಪ್ರವಾಸಿಗರು ಈ ಮುಂಚಿತವಾಗಿ ಸಿಬ್ಬಂದಿಯೊಂದಿಗೆ ಜಗಳವಾಡುತ್ತಿದ್ದರು. ಇದನ್ನು ಮೊಬೈಲ್‍ನಲ್ಲಿ ಚಿತ್ರೀಕರಿಸಿದ ನಮ್ಮ ಕೆಲವು ಹುಡುಗರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.
ಈ ಪ್ರಕರಣ ಕುಶಾಲನಗರ ಗ್ರಾಮಾಂತರ ಪೋಲೀಸ್ ಠಾಣೆ ಮೆಟ್ಟಿಲೇರಿದ್ದು, ಪೋಲೀಸರು ಕ್ರಮಕೈಗೊಂಡಿದ್ದಾರೆ.