ಮಡಿಕೇರಿ: ರಷ್ಯಾದ ಆಕ್ರಮಣಕಾರಿ ದಾಳಿಯಿಂದ ಉಕ್ರೇನ್ ದೇಶ ನಲುಗಿ ಹೋಗುತ್ತಿದ್ದರೆ ಇತ್ತ ಕರ್ನಾಟಕದಿಂದ ಉನ್ನತ ವಿದ್ಯಾಭ್ಯಾಸಕ್ಕಾಗಿ ತೆರಳಿದ್ದ ವಿದ್ಯಾರ್ಥಿಗಳು ಸಿಲುಕಿ ನರಳುವಂತಾಗಿದೆ.
ರಷ್ಯಾ ಗಡಿಯಿಂದ ಕೇವಲ 30 ಕಿಲೋ ಮೀಟರ್ ದೂರದಲ್ಲಿ ಪಶ್ಚಿಮ ಉಕ್ರೇನ್‍ನಲ್ಲಿ ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಮಲ್ಲೇನಹಳ್ಳಿಯ ರಮೇಶ್ ಮತ್ತು ಸವಿತಾ ದಂಪತಿ ಮಗಳು ಅಕ್ಷಿತಾ ಅಕ್ಕಮ್ಮ ಸಿಲುಕಿದ್ದಾರೆ. ಅಕ್ಷಿತಾ ಉಕ್ರೇನ್‍ನ ಕಾರ್ಕಿವ್‍ನ ನ್ಯಾಷನಲ್ ಮೆಡಿಕಲ್ ಯುನಿವರ್ಸಿಟಿಯಲ್ಲಿ ಎರಡನೇ ವರ್ಷದ ಎಂಬಿಬಿಎಸ್ ಓದುತ್ತಿದ್ದರು. ಅಕ್ಷಿತಾ ಅಕ್ಕಮ್ಮ ವೀಡಿಯೋ ಮೂಲಕವಾಗಿ ವಾಪಾಸ್ ಭಾರತಕ್ಕೆ ಕರೆಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.
ವೀಡಿಯೋದಲ್ಲಿ ಏನಿದೆ?: ಪಶ್ಚಿಮ ಕಾರ್ಕಿವ್‍ನಿಂದ ರುಮೇನಿಯಾ ಗಡಿಗೆ 1500 ಕಿಲೋಮೀಟರ್ ಪ್ರಯಾಣಿಸಬೇಕಾಗಿದ್ದು, ಅಲ್ಲಿಗೆ ಯಾವುದೇ ಸಾರಿಗೆ ಸಂಪರ್ಕ ಇಲ್ಲದಿರುವುದು ಭಾರತಕ್ಕೆ ವಾಪಸ್ ಬರುವುದಕ್ಕೂ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಇದನ್ನೂ ಓದಿ: ರಷ್ಯಾದ ಇಬ್ಬರು ಸೈನಿಕರನ್ನು ಸೆರೆ ಹಿಡಿದ ಉಕ್ರೇನ್ ಸೇನೆ
ರಷ್ಯಾ ಸಿಡಿಸುತ್ತಿರುವ ಬಾಂಬ್ ಮತ್ತು ಮಿಸಲ್ ಸ್ಫೋಟಗಳ ಶಬ್ಧ ಹಗಲು ರಾತ್ರಿ ಎನ್ನದೇ ನಿರಂತರವಾಗಿ ಕೇಳುತ್ತಿದ್ದು, ಅಕ್ಷಿತಾ ತೀವ್ರ ಆತಂಕಕ್ಕೆ ಒಳಗಾಗಿದ್ದಾಳೆ. ಮಿಷಲ್‌ಗಳ ಶಬ್ಧ ಕೇಳುತ್ತಿದ್ದಂತೆ ಜೀವಭಯದಿಂದ ಗ್ರೌಂಡ್ ಫ್ಲೋರ್‌ಗಳಿಗೆ ಹೋಗಿ ರಕ್ಷಣೆ ಪಡೆಯುತ್ತಿದ್ದೇವೆ. ಹೊರಗಡೆ ಎಲ್ಲಿಯೂ ಹೋಗುವಂತಿಲ್ಲ, ಇನ್ನೊಂದೆರಡು ದಿನಗಳಿಗಷ್ಟೆ ಆಗುವಷ್ಟು ಆಹಾರ ಪದಾರ್ಥಗಳಿದ್ದು ಆ ಬಳಿಕ ಏನು ಎನ್ನುವ ಆತಂಕವಿದೆ. ದಯಮಾಡಿ ಭಾರತ ಸರ್ಕಾರ ನಮ್ಮನ್ನು ಆದಷ್ಟು ಬೇಗ ವಾಪಸ್ ಕರೆದುಕೊಂಡು ಹೋಗಲಿ ಎಂದು ಅಕ್ಷಿತಾ ಅಕ್ಕಮ್ಮ ಮನವಿ ಮಾಡಿದ್ದಾಳೆ. ಇದನ್ನೂ ಓದಿ: ನಿನ್ನೆ ಮದುವೆಯಾಗಿ ಇಂದು ದೇಶ ಸೇವೆಗೆ ಗನ್ ಹಿಡಿದ ದಂಪತಿ
ಮಗಳ ಮನವಿ ಮಾಡುತ್ತಿರುವ ಸ್ಥಿತಿಯನ್ನು ನೋಡಿದ ಅವರ ತಂದೆ ರಮೇಶ್ ಮತ್ತು ತಾಯಿ ಸವಿತಾ ಕಣ್ಣೀರು ಹಾಕಿದ್ದಾರೆ. ನಮ್ಮ ಮಗಳು ಇರುವ ಸ್ವಲ್ಪ ದೂರದಲ್ಲೇ ಬಾಂಬ್‌ಗಳು ಸಿಡಿಸುತ್ತಿರುವ ಶಬ್ಧ ಕೇಳುತ್ತಿದ್ದು, ನಮ್ಮ ಮಕ್ಕಳನ್ನು ವಾಪಸ್ ಕರೆತರುವುದು ತಡವಾದಷ್ಟು ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ದಯಮಾಡಿ ಆದಷ್ಟು ಬೇಗ ನಮ್ಮ ಮಗಳು ಸೇರಿದಂತೆ ಅಲ್ಲಿ ಸಿಲುಕಿರುವ ಭಾರತೀಯನ್ನು ರಕ್ಷಿಸಿ ಎಂದು ಮನವಿ ಮಾಡಿದ್ದಾರೆ.
ಫೆಬ್ರವರಿ 26 ರಂದು ಮಗಳು ದೇಶಕ್ಕೆ ವಾಪಸ್ ಬರುವುದಕ್ಕೆ ಫ್ಲೈಟ್ ಬುಕ್ ಆಗಿತ್ತು. ಆದರೆ ಕಾಲೇಜಿನಲ್ಲಿ ಸರಿಯಾದ ಮಾಹಿತಿ ನೀಡದೇ ಇದ್ದಿದ್ದರಿಂದ ಮಗಳು ಬರುವುದು ಕ್ಯಾನ್ಸಲ್ ಆಯಿತು. ಕಳೆದ 9 ತಿಂಗಳ ಹಿಂದೆ ಮಗಳು ಊರಿಗೆ ಬಂದಿದ್ದಳು ಎಂದು ತಂದೆತಾಯಿಗಳು ಕಣ್ಣೀರು ಹಾಕಿದ್ದಾರೆ. ಹೀಗೆ ಸಮಸ್ಯೆ ಆಗುತ್ತದೆ ಎಂದು ಗೊತ್ತಾಗಿದ್ದರೆ ಯಾವುದೇ ಕಾರಣಕ್ಕೂ ನಾವು ಅಲ್ಲಿ ಮೆಡಿಕಲ್ ಓದುವುದಕ್ಕೆ ಕಳುಹಿಸುತ್ತಿರಲಿಲ್ಲ ಎಂದಿದ್ದಾರೆ.