– ಊರನ್ನೇ ತೊರೆದ ಕುಟುಂಬ
ಮಡಿಕೇರಿ: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ತೊರೆನೂರು ಗ್ರಾಮದಲ್ಲಿ ನೆಲೆಸಿರುವ ಕುಟುಂಬಗಳು ಕೂಲಿ ಕಾರ್ಮಿಕರು, ರೈತರು. ಅಂದು ದುಡಿದ್ರೆ ಮಾತ್ರವೇ ಆ ಹೊತ್ತಿನ ಬದುಕು ಅನ್ನೋ ಸ್ಥಿತಿಯಲ್ಲಿರುವ ಜನ, ಇದೀಗ ದುಡಿಯೋದನ್ನ ಬಿಟ್ಟು ಮನೆ ಬಾಗಿಲು ಮುಚ್ಚಿ ಎಲ್ಲರೂ ಆಸ್ಪತ್ರೆ ಸೇರಿದ್ದಾರೆ. ನಿಗೂಢ ಕಾಯಿಲೆಗೆ ಬಳಲಿ, ಹೆದರಿ ಎಷ್ಟೋ ಕುಟುಂಬಗಳು ಊರನ್ನೇ ತೊರೆದಿವೆ.
Advertisement
ಗ್ರಾಮದ ಜನರ ಈ ಸ್ಥಿತಿಗೆ ಕಾರಣ ಕಳೆದ 15 ದಿನಗಳಿಂದ ಕಾಡುತ್ತಿರುವ ವಿಚಿತ್ರ ಜ್ವರ ಮತ್ತು ಕಾಯಿಲೆ ಅನ್ನೋದು ಆಶ್ಚರ್ಯದ ವಿಷಯ. 300ಕ್ಕೂ ಹೆಚ್ಚು ಕುಟುಂಬಗಳಿರುವ ಗ್ರಾಮದಲ್ಲಿ ಈಗ 200ಕ್ಕೂ ಹೆಚ್ಚು ಜನರು ವಿಚಿತ್ರ ಜ್ವರ ಮತ್ತು ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಕುರಿತು ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಲಾಗಿದ್ದು, ಇಲಾಖೆ ಸಿಬ್ಬಂದಿ ಬಂದು ಜ್ವರದಿಂದ ಬಳಲುತ್ತಿರುವವರ ರಕ್ತದ ಮಾದರಿಯನ್ನು ಸಂಗ್ರಹಿಸಿದ್ದಾರೆ. ಆದರೆ ಇದೂವರೆಗೆ ಕಾಯಿಲೆ ಬಗ್ಗೆ ಜನರಿಗೆ ಯಾವುದೇ ಮಾಹಿತಿ ನೀಡದಿರುವುದು ವಿಪರ್ಯಾಸ ಎಂದು ಗ್ರಾಮಸ್ಥ ಕೃಷ್ಣೇಗೌಡ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
Advertisement
Advertisement
ಗ್ರಾಮದಲ್ಲಿ ಮುಖ್ಯವಾಗಿ ಸ್ವಚ್ಛತೆ ಹಾಗೂ ಮೂಲಭೂತ ಸೌಲಭ್ಯ ಇಲ್ಲದಿರೋದೇ ಈ ಸಮಸ್ಯೆಗೆ ಮೂಲ ಕಾರಣ ಎನ್ನಲಾಗುತ್ತಿದೆ. ಯಾವ ಚರಂಡಿಯೂ ಕೂಡ ಸ್ವಚ್ಛತೆಯಿಂದ ಕೂಡಿಲ್ಲ. ಕುಡಿಯುವ ನೀರಿನಲ್ಲಿ ಹುಳಗಳು ಕಂಡುಬಂದಿದ್ದು, ಈ ನೀರನ್ನು ಕುಡಿಯುತ್ತಿರುವುದರಿಂದಲೇ ಜನರಿಗೆ ವಿಚಿತ್ರ ಜ್ವರ ಮತ್ತು ಕೈ ಕಾಲುಗಳು ಊತವಾಗುವುದಕ್ಕೆ ಕಾರಣ ಎನ್ನಲಾಗುತ್ತಿದೆ. ಇಷ್ಟೆಲ್ಲ ಆದ ಮೇಲೆ ಗ್ರಾಮಕ್ಕೆ ಬಂದ ಜಿಲ್ಲಾ ಆರೋಗ್ಯ ಸರ್ವೇಕ್ಷಣಾಧಿಕಾರಿಯನ್ನು ಗ್ರಾಮಸ್ಥರು ತೀವ್ರ ತರಾಟೆಗೆ ತೆಗೆದುಕೊಂಡರು. ಜನರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರೂ ಸರಿಯಾದ ಚಿಕಿತ್ಸೆ ನೀಡುತ್ತಿಲ್ಲ. ಕೊನೆ ಪಕ್ಷ ಯಾವ ಕಾಯಿಲೆ ಅನ್ನೋದನ್ನು ಯಾಕೆ ಹೇಳುತ್ತಿಲ್ಲ ಎಂದು ಪ್ರಶ್ನಿಸುವ ಮೂಲಕ ಅಧಿಕಾರ ಎದುರು ಕಿಡಿಕಾರಿದ್ದಾರೆ.
Advertisement
ಒಟ್ಟಿನಲ್ಲಿ ಮೇಲ್ನೋಟಕ್ಕೆ ಗ್ರಾಮದಲ್ಲಿ ಸ್ವಚ್ಛತೆ ಇಲ್ಲದೆ ಇರೋದೇ ಜನರು ವಿಚಿತ್ರ ಮತ್ತು ಕೈಕಾಲು ಊತದಂತಹ ಸಮಸ್ಯೆಯಿಂದ ಬಳಲೋದಕ್ಕೆ ಕಾರಣ ಎಂದು ಕಂಡು ಬರುತ್ತಿದೆ. ಆದರೆ ಜಿಲ್ಲಾ ಆರೋಗ್ಯ ಇಲಾಖೆ ಮಾತ್ರ ರೋಗಕ್ಕೆ ನೈಜ ಕಾರಣ ಏನು ಎಂದು ಪರಿಶೀಲನೆ ಮಾಡದೆ, ಸರಿಯಾದ ಚಿಕಿತ್ಸೆ ನೀಡದೇ ಇರೋದು ಜನರನ್ನು ಮತ್ತಷ್ಟು ಆತಂಕಕ್ಕೆ ಒಳಗಾಗಿಸಿದೆ.