ಮಡಿಕೇರಿ: ಕಳೆದ ಬಾರಿಯ ಮಳೆಯಿಂದಾಗಿ ರಸ್ತೆಯಲ್ಲಿ ಭಾರೀ ಪ್ರಮಾಣದ ಗುಂಡಿ ಬಿದ್ದುದ್ದು, ಸಂಪೂರ್ಣವಾಗಿ ಹದಗೆಟ್ಟಿದೆ. ರಸ್ತೆ ದುರಸ್ತಿ ಮಾಡುವಂತೆ ಆಗ್ರಹಿಸಿ ತಾಲೂಕಿನ ಮೂರ್ನಾಡು ಕುಂಬಳದಾಳು ರಸ್ತೆಯಲ್ಲಿ ಬಾಳೆಗಿಡಗಳನ್ನು ನೆಟ್ಟು ಕುಂಬಳದಾಳು ನಿವಾಸಿಗಳು ಪ್ರತಿಭಟನೆ ನಡೆಸಿದರು.
ಮೂರ್ನಾಡು ಕುಂಬಳದಾಳು ರಸ್ತೆಯನ್ನು ಉತ್ತಮ ದರ್ಜೆಯ ರಸ್ತೆಯನ್ನಾಗಿಸಲು ಗುತ್ತಿಗೆದಾರರು ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದಾರೆ. ರಸ್ತೆಯ ಎರಡೂ ಬದಿಗಳನ್ನು ಜೆಸಿಬಿಯಿಂದ ಅಗೆದು ಇದ್ದ ಉತ್ತಮ ರಸ್ತೆಯನ್ನೂ ಹಾಳು ಮಾಡಿದ್ದಾರೆ. ಅಲ್ಲದೆ ಇದ್ದ ಚರಂಡಿಯನ್ನೂ ಮುಚ್ಚಿ ಹಾಕಿ, ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ಹೀಗಾಗಿ ಈ ರಸ್ತೆಯಲ್ಲಿ ಸಂಚರಿಸುತ್ತಿದ್ದ ಸರ್ಕಾರಿ ಬಸ್ ಸಹ ಕಳೆದ ಮಾರ್ಚ್ ತಿಂಗಳಿನಿಂದ ಸಂಚಾರ ಸ್ಥಗಿತಗೊಳಿಸಿದ್ದು, ಸಾರ್ವಜನಿಕರ ಹಾಗೂ ಶಾಲಾ ಮಕ್ಕಳಿಗೆ ಓಡಾಡಲು ತುಂಬಾ ತೊಂದರೆಯಾಗಿದೆ ಎಂದು ಆರೋಪಿಸಿದ್ದಾರೆ.
ರಸ್ತೆಯ ಇಕ್ಕೆಲಗಳಲ್ಲಿ ಚರಂಡಿಗಳು ಮುಚ್ಚಿಹೋಗಿರುವುದರಿಂದ ಮಳೆಗಾಲದಲ್ಲಿ ರಸ್ತೆಯಲ್ಲಿಯೆ ನೀರು ಹರಿದು ದೊಡ್ಡ ದೊಡ್ಡ ಗುಂಡಿಗಳಾಗಿದ್ದು, ಯಾವುದೇ ವಾಹನ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಹೆಚ್ಚು ಕೊಡುತ್ತೇವೆಯೆಂದರೂ ಆಟೋ ರಿಕ್ಷಾಗಳು ಬಾಡಿಗೆಗೆ ಬರುತ್ತಿಲ್ಲ ಎಂದು ಇಲ್ಲಿನ ನಿವಾಸಿಗಳು ದೂರಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದೆ ಸಂಸದ ಪ್ರತಾಪ್ ಸಿಂಹ ಮೂರ್ನಾಡು ಕುಂಬಳದಾಳು ಕೊಟ್ಟಂಮುಡಿ ರಸ್ತೆಯ ಡಾಂಬರೀಕರಣಕ್ಕೆ ಗುದ್ದಲಿ ಪೂಜೆ ನೆರವೇರಿದ್ದರು. ಆದರೆ ಈವರೆಗೆ ರಸ್ತೆ ಕಾಮಗಾರಿ ಪೂರ್ಣಗೊಂಡಿಲ್ಲ. ಇದೇ ರಸ್ತೆಯಲ್ಲಿರುವ ವಿದ್ಯಾಸಂಸ್ಥೆಯ ಶಾಲಾ ಬಸ್ಸುಗಳು ಸಂಚರಿಸುತ್ತಿದ್ದು, ಹದಗೆಟ್ಟಿರುವ ರಸ್ತೆಯ ಧೂಳಿನಿಂದ ವಿದ್ಯಾರ್ಥಿಗಳು ಉಸಿರಾಟದ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸಾರ್ವಜನಿಕರು ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.