ಮಡಿಕೇರಿ: ಸಂಬಂಧಿಕರ ಮನೆಗೆ ಬಂದಿದ್ದ ವ್ಯಕ್ತಿಯೊಬ್ಬ ಮೈ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪದ ಸಮೀಪದ ಉಲುಗುಲಿ ಗ್ರಾಮದಲ್ಲಿ ನಡೆದಿದೆ.
ಮೂಲತಃ ತಮಿಳುನಾಡಿನ ಮುತ್ತಯ್ಯ (50) ಕಾಫಿ ತೋಟವೊಂದರಲ್ಲಿ ಕೆಲಸ ಮಾಡುತ್ತಿದ್ದು, ಇತ್ತೀಚೆಗೆ ಸುಂಟಿಕೊಪ್ಪದ ಉಲುಗುಲಿ ತೋಟದಲ್ಲಿ ಕಾರ್ಮಿಕರಾಗಿರುವ ತನ್ನ ಸಂಬಂಧಿ ರಾಜು ಎಂಬವರ ಮನೆಗೆ ಬಂದಿದ್ದರು. ಇಂದು ಬೆಳಗ್ಗೆ 8.45ರ ಸಮಯದಲ್ಲಿ ಮನೆಯಲ್ಲಿ ಯಾರು ಇಲ್ಲದಿದ್ದಾಗ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ ಎನ್ನಲಾಗಿದೆ.
ವಿಷಯವರಿತ ಸುತ್ತಲಿನವರು ಬಂದು ನೋಡಿದಾಗ ಮುತ್ತಯ್ಯನವರ ದೇಹ ಸುಟ್ಟು ಕರಕಲಾಗಿರೋದು ಕಂಡುಬಂದಿದೆ. ಮೃತದೇಹವನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆಗೊಳಪಡಿಸಲಾಗಿದೆ. ಮೃತ ಮುತ್ತಯ್ಯರವರು ಪಾಶ್ರ್ವವಾಯು ಪೀಡಿತರಾಗಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಇದರಿಂದ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ.
ಈ ಸಂಬಂಧ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.