ಮಡಿಕೇರಿ: ನವೆಂಬರ್ ಮಾಹೆಯಲ್ಲಿ ಮಡಿಕೇರಿ (Madikeri) ಪ್ರಾದೇಶಿಕ ಸಾರಿಗೆ ಕಚೇರಿ ಸಾರಿಗೆ ಇಲಾಖೆಗೆ (Regional Transport Department) 1.59 ಕೋಟಿ ರೂ. ರಾಜಸ್ವ ಸಂಗ್ರಹಿಸಲಾಗಿದೆ ಎಂದು ಸಾರಿಗೆ ಅಧಿಕಾರಿ ಎಸ್.ಟಿ.ಸತೀಶ್ ತಿಳಿಸಿದ್ದಾರೆ.
ನವೆಂಬರ್ -2025 ರ ಮಾಹೆಯಲ್ಲಿ ಮಡಿಕೇರಿ ಪ್ರಾದೇಶಿಕ ಸಾರಿಗೆ ಕಚೇರಿ ವತಿಯಿಂದ ಓಂಕಾರೇಶ್ವರಿ, ಅಪರ ಸಾರಿಗೆ ಆಯುಕ್ತರು (ಪ್ರವರ್ತನ) ಬೆಂಗಳೂರು ಮತ್ತು ವಸಂತ್ ಈಶ್ವರ್ ಚೌಹಾಣ್, ಜಂಟಿ ಸಾರಿಗೆ ಆಯುಕ್ತರು, ಮೈಸೂರು ವಿಭಾಗ, ಮೈಸೂರು, ಇವರ ಮಾರ್ಗದರ್ಶನ ಮತ್ತು ಸೂಚನೆ ಮೇರೆಗೆ ನವೆಂಬರ್ ಮಾಹೆಯಲ್ಲಿ ಕೊಡಗು ಜಿಲ್ಲೆಯಾದ್ಯಂತ ನಿರಂತರ ತಪಾಸಣೆ ಕೈಗೊಳ್ಳಲಾಗುತ್ತಿದೆ. ಹೊರ ರಾಜ್ಯದಿಂದ ಬರುವ ಪ್ರವಾಸಿ ವಾಹನಗಳು ಸೇರಿದಂತೆ ಎಲ್ಲಾ ರೀತಿಯ ವಾಹನಗಳನ್ನು ತಪಾಸಣೆ ನಡೆಸಿ, ಒಟ್ಟು 1,140 ವಾಹನಗಳಿಂದ, ಪಾರ್ಟ್ ಬಿ ತೆರಿಗೆ 1,57,21,024 ರೂ. ಪಾರ್ಟ್ ಎ ತೆರಿಗೆ 29,357 ರೂ. ಮತ್ತು ದಂಡ ಮೊತ್ತ 2,27,800 ರೂ. ಸಂಗ್ರಹಿಸಲಾಗಿದೆ.
ಒಟ್ಟು 1,59,78,181 ರೂ. ರಾಜಸ್ವವನ್ನು ನವೆಂಬರ್ ಮಾಹೆಯಲ್ಲಿ ಸಂಗ್ರಹಿಸಲಾಗಿದ್ದು, ಗುರಿ ಮೀರಿದ ಸಾಧನೆಯಾಗಿರುತ್ತದೆ. ಕೊಡಗು ಜಿಲ್ಲೆಯಾದ್ಯಂತ ನಿರಂತರ ವ್ಯಾಪಕ ತಪಾಸಣಾ ಕ್ರಮ ನಡೆಸಲಾಗುತ್ತಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಎಸ್.ಟಿ.ಸತೀಶ್ ಅವರು ತಿಳಿಸಿದ್ದಾರೆ. ನವೆಂಬರ್, 01 ರಿಂದ 30 ರವರೆಗೆ ವಾಯುಮಾಲಿನ್ಯ ನಿಯಂತ್ರಣ ಜಾಗೃತಿ ಮಾಸಾಚರಣೆ ಕಾರ್ಯಕ್ರಮವು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಸಹಯೋಗದೊಂದಿಗೆ ಕೊಡಗು ಜಿಲ್ಲೆಯಾದ್ಯಂತ ನಡೆಯಿತು.

