– ಸರ್ಕಾರದ ನಿರ್ಧಾರಕ್ಕೆ ಪರ, ವಿರೋಧ ಅಭಿಪ್ರಾಯ
– 15 ಮಳಿಗೆ ನಿರ್ಮಾಣಕ್ಕೆ ಮುಂದಾದ ಪ್ರವಾಸೋದ್ಯಮ ಇಲಾಖೆ
ಮಡಿಕೇರಿ: ಪ್ರವಾಸಿಗರ ಹಾಟ್ ಸ್ಪಾಟ್ ಮಂಜಿನ ನಗರಿಯ ಪ್ರಸಿದ್ಧ ಪ್ರವಾಸಿ ತಾಣ ರಾಜಾಸೀಟ್ ಬಳಿ ಸರ್ಕಾರ ಕೂರ್ಗ್ ವಿಲೇಜ್ ಸ್ಥಾಪನೆಗೆ ಮುಂದಾಗಿದ್ದು ಇದೀಗ ಸ್ಥಳೀಯವಾಗಿ ಇದಕ್ಕೆ ಪರ-ವಿರೋಧ ಚರ್ಚೆಗಳು ಕೇಳಿಬಂದಿದೆ.
ಹೌದು. ನಗರದ ಹೃದಯ ಭಾಗದಲ್ಲಿ ಹೆಚ್ಚು ಪ್ರವಾಸಿಗರ ಭೇಟಿ ಕೊಡುವ ರಾಜಾಸೀಟ್ ಬಳಿ ಕುಂದೂರುಮೊಟ್ಟೆ ದೇವಸ್ಥಾನದ ಎದುರು ಇರುವ ತೋಟಗಾರಿಕೆ ಇಲಾಖೆ ಜಾಗದಲ್ಲಿ ಕೂರ್ಗ್ ವಿಲೇಜ್ ನಿರ್ಮಾಣ ಮಾಡಲಾಗುತ್ತಿದೆ. ಇದರ ಕೆಲಸವೂ ಭರದಿಂದ ಸಾಗುತ್ತಿದೆ. ರಸ್ತೆ ಬದಿಯಲ್ಲಿ ಚಿಕ್ಕದಾದ ಕೆರೆಯನ್ನು ಹೊಂದಿರುವ ತೋಟಗಾರಿಕೆ ಇಲಾಖೆ ಜಾಗವು ಇನ್ಮುಂದೆ ವಾಣಿಜ್ಯ ಉದ್ದೇಶಕ್ಕಾಗಿ ಬಳಕೆಯಾಗಲಿದೆ.
Advertisement
Advertisement
ಪ್ರವಾಸೋದ್ಯಮ ಇಲಾಖೆ 98 ಲಕ್ಷ ರೂ. ಅನುದಾನದಲ್ಲಿ ಅಂದಾಜು 15 ಮಳಿಗೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಇದೊಂದು ಲೂಟಿ ಹೊಡೆಯುವ ಹುನ್ನಾರ ಎಂಬುದು ಪರಿಸರ ಪ್ರಿಯರ ಆಕ್ರೋಶ. ಕೊಡಗಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುತ್ತೇವೆ ಅಂತ ನೈಜ ಪ್ರಾಕೃತಿಕ ಸೌಂದರ್ಯವನ್ನು ಹಾಳು ಮಾಡಿ ಕಟ್ಟಡ ನಿರ್ಮಿಸಲಾಗುತ್ತಿದೆ. ಇದರ ಹಿಂದೆ ಕೆಲವೇ ಜನರ ಹಿತಾಸಕ್ತಿ ಅಡಗಿದೆ. ಅಲ್ಲದೆ ರಾಜಾಸೀಟ್, ಪ್ರಾಚ್ಯವಸ್ತು ಇಲಾಖೆ ಅಡಿಯಲ್ಲಿದ್ದು ಇದರಿಂದ ನೂರು ಅಡಿ ಅಂತರದಲ್ಲಿ ಯಾವುದೇ ಕಟ್ಟಡಗಳ ಕಾಮಗಾರಿ ಮಾಡುವಂತಿಲ್ಲ. ಈ ಎಲ್ಲಾ ನಿಮಯವಗಳನ್ನು ಗಾಳಿಗೆ ತೂರಿ ವಿಲ್ಲಾಗಳನ್ನು ನಿರ್ಮಿಸುತ್ತಿರುವುದು ಯಾರ ಪುರುಷಾರ್ಥಕ್ಕಾಗಿ ಎಂಬ ಆಕ್ರೋಶಗಳು ವ್ಯಕ್ತವಾಗುತ್ತಿವೆ.
Advertisement
Advertisement
ಈ ಪ್ರದೇಶದಲ್ಲಿ ಮೂರು ಕಡೆ ಶಾಪಿಂಗ್ ಕಾಂಪ್ಲೆಕ್ಸ್ ತಲೆಯೆತ್ತಲಿದೆ. ಒಟ್ಟು 15 ಮಳಿಗೆಗಳು ನಿರ್ಮಾಣವಾಗುತ್ತಿವೆ. ಈ ಮಳಿಗೆಗಳಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಡಿ ವಿವಿಧ ಯೋಜನೆಗಳಲ್ಲಿ ತಯಾರಿಸಿದ ವಸ್ತುಗಳು, ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾದವರು ತಯಾರಿಸಿದ ಆಹಾರೋತ್ಪನ್ನಗಳು ಗ್ರಾಹಕರಿಗೆ ಲಭಿಸಲಿವೆ. ಜೊತೆಗೆ ಚಿಕ್ಕದಾದ ಕೆರೆಯಿದ್ದು ಅದನ್ನೂ ಅಭಿವೃದ್ಧಿಪಡಿಸಿ ಪ್ರವಾಸಿ ತಾಣವಾಗಿ ರೂಪಿಸುವ ಆಲೋಚನೆ ಇಲಾಖೆ ಮುಂದಿದೆ. ಇದರಿಂದ ಪ್ರವಾಸೋದ್ಯಮದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ. ಬದಲಾಗಿ ಎರಡು ವರ್ಷಗಳಿಂದ ಪ್ರವಾಹದಿಂದ ಬಿದ್ದು ಹೋಗಿರುವ ಪ್ರವಾಸೋದ್ಯಮಕ್ಕೆ ಮತ್ತಷ್ಟು ಉತ್ತೇಜನ ಸಿಗಲಿದೆ ಅಂತ ಪ್ರವಾಸೋದ್ಯಮಿಗಳು ಅಭಿಪ್ರಾಯಪಟ್ಟಿದ್ದಾರೆ.
ಒಟ್ಟಿನಲ್ಲಿ ತೋಟಗಾರಿಕೆ ಇಲಾಖೆ ಜಾಗದಲ್ಲಿ ಕಾಂಪ್ಲೆಕ್ಸ್ ಅಡಿಪಾಯ ಕಾಮಗಾರಿಯೂ ಆರಂಭವಾಗಿದೆ. ಮಳೆಗಾಲ ಆರಂಭಕ್ಕೂ ಮೊದಲೇ ಮಳಿಗೆಗಳನ್ನು ಪ್ರಾರಂಭಿಸಲು ಪ್ರವಾಸೋದ್ಯಮ ಇಲಾಖೆ ಮುಂದಾಗಿದ್ದರೆ, ಪರಿಸರ ಪ್ರೇಮಿಗಳಿಂದ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಜಿಲ್ಲೆಯಲ್ಲಿ ಇದುವರೆಗೂ ಆಗಿರುವ ಅನಾಹುತಗಳೇ ಕಣ್ಮುಂದೆ ಇರುವಾಗ ಇವೆಲ್ಲದರ ಅಗತ್ಯವಿದೆಯೇ ಎನ್ನುವ ಚರ್ಚೆಗಳಿಗೆ ಗ್ರಾಸವಾಗಿದೆ.