ಮಡಿಕೇರಿ: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕುಶಾಲನಗರ ಪಟ್ಟಣದಲ್ಲಿ ಯಮಧರ್ಮ ಮತ್ತು ಚಿತ್ರಗುಪ್ತರು ಪ್ರತ್ಯಕ್ಷರಾಗಿ ಆಶ್ಚರ್ಯ ಮೂಡಿಸಿದರು. ಆದರೆ ಇವರು ದೇವಲೋಕದವರಲ್ಲ, ಭೂಲೋಕದವರೇ. ಕೈಯಲ್ಲಿ ಯಮಪಾಶ ಹಿಡಿದು ತನ್ನ ವಾಹನ ಸಹಿತ ಚಿತ್ರಗುಪ್ತನೊಂದಿಗೆ ಪಟ್ಟಣದಲ್ಲಿ ಸಂಚರಿಸಿದ ಯಮಧರ್ಮ, ಹೆಲ್ಮೆಟ್ ಮತ್ತು ಸೀಟ್ ಬೆಲ್ಟ್ ಧರಿಸದೆ ಸವಾರಿ ನಡಸುತ್ತಿದ್ದ ಚಾಲಕರು ಮತ್ತು ಸವಾರರಿಗೆ ಗುಲಾಬಿ ಮತ್ತು ಚಾಕ್ಲೇಟ್ ನೀಡಿ ಎಚ್ಚರಿಕೆ ಕೊಟ್ಟು ಕಳುಹಿಸುತ್ತಿದ್ದ ದೃಶ್ಯ ಕಂಡು ಬಂತು.
ಹೌದು. ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ 31ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಮತ್ತು ಸಂಚಾರಿ ನಿರ್ವಹಣೆ ಕಾರ್ಯಕ್ರಮದ ಅಂಗವಾಗಿ ಹೀಗೊಂದು ವಿಶೇಷ ಜಾಗೃತಿ ಕಾರ್ಯಕ್ರಮ ಕುಶಾಲನಗರದಲ್ಲಿ ನಡೆಯಿತು. ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯ ಆಶ್ರಯದಲ್ಲಿ ನಡೆದ ಕಾರ್ಯಕ್ರಮಕ್ಕೆ ಸೋಮವಾರಪೇಟೆ ಉಪವಿಭಾಗದ ಡಿವೈಎಸ್‍ಪಿ ಎಚ್.ಎಂ.ಶೈಲೇಂದ್ರ ಚಾಲನೆ ನೀಡಿದರು.
ವಾಹನ ಸವಾರರು ಕಡ್ಡಾಯವಾಗಿ ಸಂಚಾರ ನಿಮಯಗಳನ್ನು ಪಾಲಿಸಬೇಕಿದೆ. ಅಸುರಕ್ಷಿತ ವಾಹನ ಚಾಲನೆ ಮೂಲಕ ಪ್ರತಿನಿತ್ಯ ಹಲವರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವ ಮೂಲಕ ಸುರಕ್ಷತೆಗೆ ಆದ್ಯತೆ ನೀಡಬೇಕಿದೆ. ನೂತನ ಮೋಟಾರು ವಾಹನ ಕಾಯ್ದೆ ಪ್ರಕಾರ ದಂಡದ ಮೊತ್ತ ಹೆಚ್ಚಿಸಲಾಗಿದ್ದು, ಈ ಬಗ್ಗೆ ಸವಾರರು ಮತ್ತು ಚಾಲಕರು ಅರಿತುಕೊಳ್ಳಬೇಕಿದೆ ಎಂದು ಯಮ ಧರ್ಮ ಹಾಗೂ ಚಿತ್ರಗುಪ್ತನ ವೇಷಧಾರಿಗಳು ವಾಹನ ಸವಾರರಿಗೆ ಅರಿವು ಮೂಡಿಸಿದ್ದಾರೆ.