ಮಡಿಕೇರಿ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಪತ್ತೆ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಲ್ಲೂ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.
ಮಂಗಳೂರು ಸಮೀಪವಿರುವ ಕೊಡಗು ಜಿಲ್ಲೆಯಲ್ಲಿ ಎಸ್‍ಪಿ ಡಾ.ಸುಮಾನ್.ಡಿ.ಪನ್ನೇಕರ್ ಅವರ ಮಾರ್ಗದರ್ಶನದಲ್ಲಿ ಜಿಲ್ಲಾ ಪೋಲಿಸರು ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಗುಪ್ತ ದಳ, ಆಂತರಿಕ ಭದ್ರತಾ ವಿಭಾಗ ಹಾಗೂ ವಿಶೇಷ ದಳ ಕೂಡ ಜಿಲ್ಲೆಯ ಮೇಲೆ ನಿಗಾ ಇಟ್ಟಿವೆ. ಜಿಲ್ಲೆಯಲ್ಲಿನ ಜನ ಜಂಗುಳಿ ಪ್ರದೇಶ, ಪ್ರಮುಖ ಪ್ರವಾಸಿ ತಾಣ ರಾಜಾಸೀಟ್, ಬಸ್ ನಿಲ್ದಾಣ, ಜಿಲ್ಲಾಡಳಿತ ಭವನ, ಮಾರುಕಟ್ಟೆ ಆವರಣ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಬಾಂಬ್ ನಿಷ್ಕ್ರಿಯದಳ ಮತ್ತು ಶ್ವಾನದಳದಿಂದ ತಪಾಸಣೆ ನಡೆಸುತ್ತಿದೆ ಎಂದು ಕೊಡಗು ಎಸ್‍ಪಿ ಸುಮಾನ್.ಡಿ.ಪನ್ನೇಕರ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.
ಭದ್ರತೆ ಕೈಗೊಂಡಿರುವ ಕುರಿತು ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸಲಾಗುತ್ತಿದೆ. ಜಿಲ್ಲೆಯ ಪ್ರಮುಖ ಜಲಾಶಯವಾದ ಹಾರಂಗಿಯಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸುವುವ ಮೂಲಕ ಜಲಾಶಯಯಕ್ಕೆ ಭದ್ರತೆ ನೀಡಲಾಗುತ್ತಿದೆ. ಅಲ್ಲದೆ ಜಿಲ್ಲೆಗೆ ಬರುವ ಮತ್ತು ಹೊರ ಹೋಗುವ ವಾಹನಗಳನ್ನು ಜಿಲ್ಲೆಯ ಗಡಿಗಳಲ್ಲಿನ ತಪಾಸಣಾ ಕೇಂದ್ರಗಳಲ್ಲಿ ತಪಾಸಣೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.