ಮಡಿಕೇರಿ: ಕೊರೊನಾ ಮಹಾಮಾರಿಯನ್ನು ಕಟ್ಟಿಹಾಕಲು ದೇಶವನ್ನೇ ಲಾಕ್‍ಡೌನ್ ಮಾಡಲಾಗಿದೆ. ಆದರೆ ಇಲ್ಲೊಬ್ಬ ಬ್ರೆಜಿಲ್ ಪ್ರಜೆ ಕೊಡಗಿಗೆ ಎಂಟ್ರಿ ಕೊಟ್ಟು ಜನರಲ್ಲಿ ಆತಂಕ ಮೂಡುವಂತೆ ಮಾಡಿದ್ದಾನೆ.
ಹೌದು ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಒಣಚಲು ಬಸ್ ನಿಲ್ದಾಣದಲ್ಲಿ ಬ್ರೆಜಿಲ್ ದೇಶದ ಪ್ರಜೆಯೊಬ್ಬ ಕುಳಿತ್ತಿದ್ದ. ಇದನ್ನು ನೋಡಿದ ಜನರು ದಂಗಾಗಿ ಹೋಗಿದ್ದಾರೆ. ಕೊರೊನಾ ಮಹಾಮಾರಿ ಯಾರಿಂದ ಹೇಗೆ ಹೆಗಲೇರಿಬಿಡಬಹುದೋ ಎಂಬ ಆತಂಕ ಎಲ್ಲರಲ್ಲಿ ಮನೆಮಾಡಿದೆ. ಆದ್ದರಿಂದಲೇ ಒಣಚಲು ಗ್ರಾಮಕ್ಕೆ ಬೇರೆ ಊರುಗಳಿಂದ ಸಂಬಂಧಿಕರೂ ತಮ್ಮ ಮನೆಗಳಿಗೆ ಬಂದರೂ ಅವರ ಮಾಹಿತಿಯನ್ನು ನೀಡಲೇಬೇಕೆಂಬ ನಿಯಮ ಮಾಡಿಕೊಂಡಿದ್ದಾರೆ.
Advertisement
Advertisement
ಇದರ ಮಧ್ಯೆ ಪರದೇಶದ ವ್ಯಕ್ತಿಯೊಬ್ಬ ಊರಿನಲ್ಲಿ ಪ್ರತ್ಯಕ್ಷವಾಗಿರೋದು ಆತಂಕ ಮೂಡಿಸಿದೆ. ಹೀಗಾಗಿ ತಕ್ಷಣವೇ ಎಚ್ಚೆತ್ತುಕೊಂಡ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸ್ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಹೋಗಿ ನೋಡಿದಾಗ ಬ್ರೆಜಿಲ್ ಪ್ರಜೆಯು ಒಣಚಲು ಗ್ರಾಮದ ಬಸ್ ನಿಲ್ದಾಣದಲ್ಲಿ ಕುಳಿತಿದ್ದ. ಆತನನ್ನು ಪೊಲೀಸ್ ವಶಕ್ಕೆ ಪಡೆದು ಮಡಿಕೇರಿಯ ಕೊವಿಡ್ ಆಸ್ಪತ್ರೆಗೆ ಕರೆತಂದಿದ್ದಾರೆ. ನಂತರ ಆತನಿಗೆ ಕೊವಿಡ್ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮಾಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ವಾರ್ಡಿಗೆ ದಾಖಲಿಸಿಕೊಂಡಿದ್ದಾರೆ.
Advertisement
Advertisement
ವ್ಯಕ್ತಿಯು ತಾನು ಬ್ರೆಜಿಲ್ ದೇಶದವನಾಗಿದ್ದು, ವರ್ಷದ ಹಿಂದೆಯೇ ಭಾರತಕ್ಕೆ ಬಂದಿದ್ದೇನೆ. ಸದ್ಯ ಮೈಸೂರು ಜಿಲ್ಲೆಯ ಬೈಲುಕುಪ್ಪೆಯಲ್ಲಿರುವ ಟಿಬೆಟಿಯನ್ ಕ್ಯಾಂಪ್ ನಿಂದ ಬಂದಿದ್ದೇನೆ ಎಂದು ಮಾಹಿತಿ ನೀಡಿದ್ದಾನೆ. ಆದರೆ ಈ ವ್ಯಕ್ತಿಯು ಮೈಸೂರು ಜಿಲ್ಲೆಯಿಂದ ಎರಡು ಗಡಿಗಳನ್ನು ದಾಟಿ ಕೊಡಗು ಜಿಲ್ಲೆಗೆ ಬಂದಿದ್ದು ಹೇಗೆ ಎನ್ನೋ ಪ್ರಶ್ನೆ ಉದ್ಭವಿಸಿದೆ.