– ಬಡಿಗೆಯಿಂದ ಹೊಡೆದು ಕೊಂದು ಬಾವಿಗೆ ಹಾಕ್ದ
ಮಡಿಕೇರಿ: ಹೆಂಡತಿ ಎಂದು ಹೇಳಿಕೊಂಡು ಅಕ್ರಮ ಸಂಸಾರ ಮಾಡುತ್ತಿದ್ದ ಮಹಿಳೆ ಮತ್ತು ಆಕೆಯ ಮಗಳನ್ನು ಕೊಲೆ ಮಾಡಿದ್ದ ಆರೋಪಿಯನ್ನು ಕೊಡಗು ಪೊಲೀಸರು ಪ್ರಕರಣ ಬೆಳಕಿಗೆ ಬಂದ 24 ಗಂಟೆಯಲ್ಲೇ ಬಂಧಿಸಿದ್ದಾರೆ.
ಅಸ್ಸಾಂ ರಾಜ್ಯದ ದರಾಂಗ್ ಜಿಲ್ಲೆಯವನಾದ ಆಲಿ ಅದೇ ಜಿಲ್ಲೆಯ ಮುರ್ಷಿದಾ ಕತೂನ್ ಮತ್ತು ಆಕೆಯ ಮಗಳೊಂದಿಗೆ ಕೆಲಸ ಅರಸಿ ಕೊಡಗಿಗೆ ಬಂದಿದ್ದ. ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಬೈತೋಡಿನ ದೇವಯ್ಯ ಎಂಬವರ ಕಾಫಿತೋಟದಲ್ಲಿ ಕಳೆದ 10 ದಿನಗಳಿಂದ ಕೆಲಸಕ್ಕೆ ಸೇರಿದ್ದ.
ನಾಲ್ಕು ದಿನಗಳ ಹಿಂದೆ ಆಲಿ ಮಹಿಳೆಯ ಬಳಿ ಇದ್ದ 13 ಸಾವಿರ ಹಣಕ್ಕಾಗಿ ಮುರ್ಷಿದಾ ಕತೂನ್ ಮತ್ತು ಆಕೆಯ 14 ವರ್ಷದ ಮಗಳನ್ನು ಬಡಿಗೆಯಿಂದ ಹೊಡೆದು ಕೊಲೆ ಮಾಡಿದ್ದ. ಬಳಿಕ ಪಕ್ಕದಲ್ಲಿಯೇ ಇದ್ದ ಬಾವಿಗೆ ಇಬ್ಬರ ಶವಗಳನ್ನು ಎಸೆದಿದ್ದ. ಗುರುವಾರ ಎರಡು ಶವಗಳು ಬಾವಿಯಲ್ಲಿ ತೇಲಿದಾಗ ಘಟನೆ ಬೆಳಕಿಗೆ ಬಂದಿತ್ತು. ಕೊಲೆ ಮಾಡಿದ್ದ ಆರೋಪಿ ಆಲಿ ಹೆಂಡತಿ ಮತ್ತು ಮಗಳು ಇಬ್ಬರು ಎಲ್ಲಿಯೋ ಹೋಗಿದ್ದಾರೆ ಎಂದು ಹೇಳಿ, ಹುಡುಕಿ ಬರುವುದಾಗಿ ಹೋದವನು ಮೂಡಿಗೆರೆಯಲ್ಲಿ ತಲೆಮರೆಸಿಕೊಂಡಿದ್ದ.
ಗುರುವಾರ ಶವಗಳನ್ನು ಬಾವಿಯಿಂದ ಹೊರತೆಗೆದಿದ್ದ ಪೊಲೀಸರು, ಆಲಿಗಾಗಿ ಹುಡುಕಾಟ ನಡೆಸಿದ್ದರು. ನಂತರ ಆಲಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ತಾನೇ ಹಣಕ್ಕಾಗಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಪ್ರಕರಣ ಬೆಳಕಿಗೆ ಬಂದ 24 ಗಂಟೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.