– 5 ವರ್ಷದ ಹಿಂದೆ ಸಿಕ್ಕ ಗಿಣಿ
– ಕೊಡಗು ವಾಲಗ ಸೌಂಡ್ ಕೇಳಿದ್ರೆ ಡ್ಯಾನ್ಸ್ ಮಾಡ್ತಾನೆ
ಮಡಿಕೇರಿ: ಪಕ್ಷಿಗಳಲ್ಲಿ ಬಹುತೇಕ ಜನರಿಗೆ ಅತೀ ಆಕರ್ಷಣೀಯವಾದುದು ಗಿಳಿ. ಅಂತದರಲ್ಲಿ ಮನೆಯಲ್ಲೊಂದು ಗಿಳಿಯಿದ್ದು, ಅದು ನಮ್ಮೊಂದಿಗೆ ಆತ್ಮೀಯ ಒಡನಾಟ ಬೆಳೆಸಿಕೊಂಡರೆ ಎಷ್ಟು ಚಂದ. ಇಲ್ಲೊಂದು ಮನೇಲಿ ಮುದ್ದಾದ ಗಿಣಿ ರಾಮ ಇದ್ದಾನೆ. ಮನೆಯವರೊಂದಿಗೆ ಆತ್ಮೀಯವಾಗಿರೋದರ ಜೊತೆಗೆ ಅವರ ಜೊತೆ ಮಾತೂ ಆಡ್ತಾನೆ.
Advertisement
ಹೌದು. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಬಳಿಯ ಬ್ಯಾಡಗೊಟ್ಟ ಗ್ರಾಮದ ಸತೀಶ್ ಎಂಬವರ ಮನೆಯಲ್ಲಿರುವ ಈ ಗಿಣಿ ಇದೀಗ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಸುಮಾರು ಐದು ವರ್ಷದ ಹಿಂದೆ ತಮಗೆ ಸಿಕ್ಕ ಗಿಣಿಯನ್ನು ಮನೆಗೆ ತಂದು ಪಂಜರದಲ್ಲಿಟ್ಟು ಸಾಕಿದರು. ಬಳಿಕ ರಾಮು ಅಂತ ಹೆಸ್ರನ್ನೂ ಇಟ್ಟಿದ್ದಾರೆ. ಮನೆಯವರು ಮಾತಾಡುವುದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ರಾಮು, ಬರಬರುತ್ತಾ ಮನೆಯವರ ಜೊತೆಗೆ ಮಾತು ಶುರು ಮಾಡಿದ. ಮನೆಗೆ ಯಾರಾದರೂ ಬಂದರೆ ತಕ್ಷಣ ಅಲರ್ಟ್ ಆಗುವ ರಾಮು, ಅದರ ಸಂದೇಶವನ್ನು ಕೊಡುತ್ತಾನೆ. ಬಂದವರನ್ನು ಊಟ ಆಯ್ತಾ, ಊಟ ಬೇಕಾ ಅಂತ ಕೇಳಿದ್ರೆ, ಸತೀಶ್ ಅವರ ಮಕ್ಕಳಾದ ಛಾಯ ಹಾಗೂ ಹರ್ಷಿತಾಳನ್ನು ಹೆಸರಿಟ್ಟು ಕರೆಯುತ್ತಾನೆ.
Advertisement
Advertisement
ಮನೆಗೆ ಬಂದ್ರವರು ವಾಪಸ್ ಹೊರಟರೆ ‘ಹೋಗಿ ಬರ್ತೀರಾ?’ ಎಂದು ಬೀಳ್ಕೊಡುತ್ತಾನೆ. ಯಾರಾದರೂ ಕಿರಿಕ್ ಮಾಡಿದರೆ ‘ಹೋಗೋ’ ಅಥವಾ ‘ಹೋಗೆ’ ಅಂತ ಬಯ್ಯೋದನ್ನು ಕೂಡ ಈತ ಕರಗತ ಮಾಡಿಕೊಂಡಿದ್ದಾನೆ. ಇವನಿಗೆ ಕೊಡವ ವಾಲಗ ಅಂದರೆ ಎಲ್ಲಿಲ್ಲಂದ ಖುಷಿ. ಮೊಬೈಲಲ್ಲಿ ವಾಲಗ ಪ್ಲೇ ಮಾಡಿದರೆ ಸಾಕು, ತಲೆ ಅಲ್ಲಾಡಿಸುತ್ತಾ ಡ್ಯಾನ್ಸ್ ಮಾಡೋದು ಕೂಡ ಗೊತ್ತು. ಅಪರಿಚಿತರು ಮನೆಗೆ ಬಂದರೆ ಮೊದಲಿಗೆ ಕೊಂಚ ಮುಜುಗರ ತೋರುವ ರಾಮು, ನಂತರ ಸುಧಾರಿಸಿಕೊಳ್ಳುತ್ತಾನೆ. ಮನೇಲಿ ನಾಯಿಗಳು ಕೂಡ ಇದ್ದು, ಅವುಗಳೊಂದಿಗೂ ಹೊಂದಿಕೊಂಡಿದ್ದಾನೆ. ಸಂಜೆಯಾದರೆ ಮನೆಯವರ ಜೊತೆ ಕೂತು ಟಿವಿ ನೋಡೋದು ಕೂಡ ರುಟೀನ್ ಆಗಿಬಿಟ್ಟಿದೆ. ರಾಮುವಿನ ಸ್ಪೆಷಾಲಿಟಿ ಬಗ್ಗೆ ಮಾಹಿತಿ ತಿಳಿದು ಪ್ರತಿ ದಿನ ಹತ್ತಾರು ಮಂದಿ ನೋಡೋಕೆ ಬರುತ್ತಾರೆ. ಅವರು ಕೊಡೋ ಚಾಕ್ಲೇಟನ್ನು ತಾನೇ ಸುಳಿದು ತಿನ್ನುತ್ತಾನೆ ಎಂದು ಸ್ಥಳೀಯರಾದ ಆಣ್ಣಯ್ಯ ತಿಳಿಸಿದ್ದಾರೆ.
Advertisement
ಸಾಮಾನ್ಯವಾಗಿ ಮನೇಲಿ ಸಾಕಿದ ಗಿಳಿಗಳು ಒಂದೆರಡು ಪದಗಳನ್ನು ಉಚ್ಛರಿಸೋದು ಇದ್ದಿದ್ದೇ. ಆದರೆ ಈ ರಾಮು ಮಾತ್ರ ಫುಲ್ ಡಿಫರೆಂಟಾಗಿ ಮಾತಾಡುವ ಜೊತೆಗೆ ಡ್ಯಾನ್ಸ್ ಕೂಡ ಮಾಡೋದು ಅಚ್ಚರಿಯ ಜೊತೆಗೆ ಮನೆಯವರ ಅಕ್ಕರೆಗೂ ಪಾತ್ರನಾಗಿದ್ದಾನೆ.