ಮಡಿಕೇರಿ: ಕೊಡಗು ಜಿಲ್ಲೆಯ ಮೂರು ತಾಲೂಕುಗಳಲ್ಲಿ ಭತ್ತದ ಫಸಲು ಕೊಯ್ಲಿಗೆ ಬಂದಿದ್ದು ಕಟಾವು ಮಾಡಲು ಸಾಧ್ಯವಾಗದೆ ರೈತರು ಆಕಾಶ ನೋಡುವಂತಾಗಿದೆ.
ಜಿಲ್ಲೆಯ ಎಲ್ಲಾ ಭಾಗದ ಭತ್ತದ ಬೆಳೆ ಕಟಾವು ಮಾಡಲು ಬಂದಿದ್ದು, ಮಳೆಯ ಕಾರಣದಿಂದ ಉದುರಲು ಆರಂಭವಾಗಿದೆ. ಇತ್ತೀಚಿನ ದಿನಗಳಲ್ಲಿ 4 ತಿಂಗಳ ಬೆಳೆಗಳು ಹೈಬ್ರೀಡ್ ತಳಿಗಳು 4 ತಿಂಗಳೊಳಗೆ ಕಟಾವು ಮಾಡಲೇ ಬೇಕು. ಇಲ್ಲವಾದಲ್ಲಿ ಭತ್ತವೆಲ್ಲ ಮಣ್ಣು ಪಾಲಾಗುತ್ತದೆ. ಈ ಬಾರಿ ಹವಾಮಾನದ ವೈಪರೀತ್ಯದಿಂದಾಗಿ ಅಲ್ಲಲ್ಲಿ ಮಳೆ ಬಂದಿದೆ.
Advertisement
Advertisement
ಒಂದು ತಿಂಗಳ ಹಿಂದೆ ಸೋಮವಾರಪೇಟೆ ತಾಲೂಕಿನ ಗುಡ್ಡೆಹೊಸೂರು ಮತ್ತು ಈ ಭಾಗದ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದ ಮುಸುಕಿನ ಜೋಳ ಕಟಾವಿಗೆ ಬಂದ ಸಂದರ್ಭ ಮಳೆಯಿಂದಾಗಿ ಮೊಳಕೆಯೊಡೆಯಿತು. ರೈತರು ಜೋಳವನ್ನು ಕಾಳು ಮಾಡಿ ಅರ್ಧ ಬೆಲೆಗೆ ಮಾರಾಟ ಮಾಡಿದರು. ಅದರಂತೆಯೇ ಅರೇಬಿಕಾ ಕಾಫಿ ಹೆಚ್ಚು ಹಣ್ಣಾಗಿ ಮಣ್ಣು ಪಾಲಾಯಿತು. ಇದೀಗ ಭತ್ತದ ಸರದಿ. ಈ ಗೋಳನ್ನು ಕೇಳುವವರು ಯಾರು ಎಂಬುದೇ ಯಕ್ಷ ಪ್ರಶ್ನೆಯಾಗಿದೆ ಎಂದು ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ.
Advertisement
ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಚಳಿಯ ವಾತಾವರಣ ಹಾಗೂ ತುಂತುರು ಮಳೆ ಇರುವುದರಿಂದ ಸೂರ್ಯನ ಕಿರಣ ಭೂಮಿಗೆ ಬೀಳುವ ಲಕ್ಷಣ ಕಾಣುತ್ತಿಲ್ಲ. ಹೀಗಾಗಿ ಕಷ್ಟಪಟ್ಟು ಬೆಳೆದ ಭತ್ತದ ಬೆಳೆ ಕೈ ಸೇರುವುದೇ ಎಂಬ ಆತಂಕದಲ್ಲಿ ರೈತರು ಬಿಸಿಲಿಗಾಗಿ ಕಾಯುತ್ತಿದ್ದಾರೆ.