ಮಡಿಕೇರಿ: ಜೀವನದಿ ಕಾವೇರಿಯ ಉಗಮ ಸ್ಥಾನ ತಲಕಾವೇರಿಗೆ ತೆರಳಲು ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ಸ್ಥಳೀಯ ಗ್ರಾಮಸ್ಥರು ಹಾಗೂ ಭಕ್ತರು ಒತ್ತಾಯಿಸಿದ್ದಾರೆ.
ಭಕ್ತಿಯ ಕ್ಷೇತ್ರವಾಗಿರುವ ತಲಕಾವೇರಿಗೆ ರಾಜ್ಯ ಮತ್ತು ಹೊರ ರಾಜ್ಯದಿಂದ ಪ್ರತಿದಿನ ಸಾವಿರಾರು ಭಕ್ತರು ಬಂದು ಹೋಗುತ್ತಾರೆ. ಆದರೆ ಭಕ್ತರ ಅನುಕೂಲಕ್ಕಾಗಿ ಯಾವುದೇ ಬಸ್ ವ್ಯವಸ್ಥೆಗಳಿಲ್ಲ. ಬೆಳಗ್ಗೆ 7.30 ರಿಂದ 8.30 ರ ಅವಧಿಯಲ್ಲಿ ಒಂದು ಖಾಸಗಿ ಮತ್ತು ಒಂದು ಕೆ.ಎಸ್.ಆರ್.ಟಿ.ಸಿ ಬಸ್ ಮಾತ್ರ ತಲಕಾವೇರಿಗೆ ತೆರಳುತ್ತದೆ. ಆ ನಂತರ ಯಾವುದೇ ಬಸ್‍ಗಳ ಸಂಚಾರ ಇರುವುದಿಲ್ಲ.
Advertisement
ಇದರಿಂದ ಭಕ್ತರು ಮಾತ್ರವಲ್ಲದೆ ಸ್ಥಳೀಯ ಗ್ರಾಮಸ್ಥರಿಗೂ ಅನಾನುಕೂಲವಾಗಿದೆ. ಭಾಗಮಂಡಲದಿಂದ ತಲಕಾವೇರಿಗೆ ಅಥವಾ ತಲಕಾವೇರಿಯಿಂದ ಭಾಗಮಂಡಲಕ್ಕೆ ತೆರಳುವ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಬಸ್ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದಾರೆ. ಕಳೆದ ಮಳೆಗಾಲದಲ್ಲಿ ಸಂಚಾರ ಅಸ್ತವ್ಯಸ್ಥಗೊಂಡ ಕಾರಣದಿಂದ ಸ್ಥಗಿತಗೊಂಡಿದ್ದ ಬಸ್ ಸಂಚಾರ ಇಲ್ಲಿಯವರೆಗೆ ಆರಂಭಗೊಂಡಿಲ್ಲ. ಖಾಸಗಿ ಬಸ್ ಮಾಲೀಕರು ನಷ್ಟದ ಕಾರಣ ನೀಡುತ್ತಾರೆ. ಆದರೆ ಕೆ.ಎಸ್.ಆರ್.ಟಿ.ಸಿ ಆಡಳಿತ ಮಂಡಳಿ ಯಾವುದೇ ಕಾರಣ ನೀಡದೆ ಬಸ್‍ಗಳ ಕೊರತೆಯನ್ನು ಸೃಷ್ಟಿಸಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
Advertisement
Advertisement
ರಾಜ್ಯದ ಎಲ್ಲಾ ಪುಣ್ಯಕ್ಷೇತ್ರಗಳಿಗೂ ಅಗತ್ಯವಿರುವಷ್ಟು ಬಸ್‍ಗಳ ವ್ಯವಸ್ಥೆಯನ್ನು ಕೆ.ಎಸ್.ಆರ್.ಟಿ.ಸಿ ಮಾಡಿದೆ. ಆದರೆ ಕನ್ನಡ ನಾಡಿನ ಕೋಟ್ಯಾಂತರ ಜನರಿಗೆ ಕುಡಿಯುವ ನೀರು ಒದಗಿಸುವ ಜೀವನದಿ ಕಾವೇರಿಯ ಕ್ಷೇತ್ರಕ್ಕೆ ಬಸ್‍ಗಳನ್ನೇ ನಿಯೋಜಿಸದೆ ಅನ್ಯಾಯ ಮಾಡಲಾಗಿದೆ ಎಂದು ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆ.ಎಸ್.ಆರ್.ಟಿ.ಸಿ ವ್ಯವಸ್ಥೆ ಸಾರ್ವಜನಿಕರ ಸೇವೆಗಾಗಿ ಇದೆಯೇ ಹೊರತು ಲಾಭ ಮಾಡುವುದಕ್ಕಾಗಿ ಅಲ್ಲ. ಆದ್ದರಿಂದ ತಕ್ಷಣ ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ಭಕ್ತರು ಒತ್ತಾಯಿಸಿದ್ದಾರೆ.