ಮಡಿಕೇರಿ: ಒಂದು ಊರಿನ ಅಭಿವೃದ್ಧಿಯನ್ನು ನೋಡಬೇಕಾದರೆ ಆ ಊರಿನ ದೇವಾಲಯಗಳನ್ನು ನೋಡಬೇಕು. ಇಲ್ಲವೇ ಶಾಲೆಗಳನ್ನು ನೋಡಬೇಕು ಎನ್ನುವುದು ಹಿರಿಯರ ಮಾತು. ಇದು ಕೊಡಗು ಜಿಲ್ಲೆ ಮಡಿಕೇರಿಯಲ್ಲಿ ಅಕ್ಷರಶಃ ಒಪ್ಪುವಂತಹ ಮಾತಾಗಿದೆ. ತಾವು ಕಲಿತ ಸರ್ಕಾರಿ ಶಾಲೆಗೆ ಹೊಸ ಸ್ಪರ್ಶ ನೀಡಿ ಮಾದರಿ ಶಾಲೆಯನ್ನಾಗಿಸಿ ಹಳೇ ವಿದ್ಯಾರ್ಥಿಗಳು ಮೆಚ್ಚುಗೆ ಪಡೆದುಕೊಂಡಿದ್ದಾರೆ.
ತಾವು ಕಲಿತ ಶಾಲೆಗೆ ಏನಾದರೂ ಕೊಡುಗೆ ನೀಡಬೇಕೆಂದು ಹಳೇ ವಿದ್ಯಾರ್ಥಿಗಳ ಸಂಘದ ಸದಸ್ಯರು ನಿರ್ಧರಿಸಿದ್ದರು. ಈ ನಿಟ್ಟಿನಲ್ಲಿ ಸುಮಾರು 40 ಸಾವಿರ ರೂ. ವೆಚ್ಚದಲ್ಲಿ ಶಾಲೆಗೆ ಬೆಂಚ್ ಹಾಗೂ ಡೆಸ್ಕ್ ನೀಡಿದ್ದಾರೆ.
ಮಡಿಕೇರಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ ನೂರಾರು ವರ್ಷಗಳ ಇತಿಹಾಸ ಹೊಂದಿದ್ದು, ಕೆಲವು ವರ್ಷಗಳ ಹಿಂದೆ ಕೊಡಗಿನ ಸುತ್ತಮುತ್ತಲಿನ ಗ್ರಾಮದ ವಿದ್ಯಾರ್ಥಿಗಳ ಪಾಲಿನ ಜ್ಞಾನ ದೇಗುಲವಾಗಿತ್ತು.
ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿರುವ ಅನೇಕ ವಿದ್ಯಾರ್ಥಿಗಳು ಬೇರೆ ಬೇರೆ ಪ್ರದೇಶದಲ್ಲಿ ಉನ್ನತ ಉದ್ಯೋಗದಲ್ಲಿದ್ದಾರೆ. ತಾವು ಕಲಿತ ಶಾಲೆಯಲ್ಲಿ ಮೂಲಸೌಲಭ್ಯ ಕೊರತೆ ಕಂಡಿದ್ದ ಅವರು ಏನಾದರೂ ವ್ಯವಸ್ಥೆ ಮಾಡಬೇಕು ಎನ್ನುವ ನಿರ್ಧಾರಕ್ಕೆ ಕೈ ಹಾಕಿದ್ದರು. ಇದಕ್ಕೆ ಸುಮಾರು 35ಕ್ಕೂ ಹೆಚ್ಚು ಹಳೇ ವಿದ್ಯಾರ್ಥಿಗಳು ಕೈ ಜೋಡಿಸಿದ್ದಾರೆ. ಮೊದಲ ಹಂತದಲ್ಲಿ ಈ ಸಂಘವು ಶಾಲೆಗೆ ಪೀಠೋಪಕರಣ ನೀಡುವ ಕೆಲಸ ಮಾಡಿದೆ.
ಸರ್ಕಾರಿ ಕನ್ನಡ ಶಾಲೆಗಳನ್ನು ಮುಂದಿನ ಪೀಳಿಗೆಗೆ ಉಳಿಸಿ, ಉತ್ತಮ ಶಿಕ್ಷಣ, ವಾತಾವರಣ ನೀಡುವ ಕೆಲಸವನ್ನು ಹಳೇ ವಿದ್ಯಾರ್ಥಿಗಳು ಮಾಡುತ್ತಿರುವುದು ಮೆಚ್ಚುಗೆಗೆ ಕಾರಣವಾಗಿದೆ. ಇತ್ತೀಚಿನ ದಿನಗಳಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘ ರಚನೆ ಮಾಡಿಕೊಂಡ ಸ್ನೇಹ ಮಿಲನ ಸವಿ ನೆನಪು ಎನ್ನುವ ಕಾರ್ಯಕ್ರಮ ಮಾಡಲಾಗುತ್ತಿದೆ. ಹೀಗೆ ಸಂಘಟನೆಯಾದ ವಿದ್ಯಾರ್ಥಿಗಳು ಶಾಲೆ/ಕಾಲೇಜುಗಳ ಅಭಿವೃದ್ಧಿಗೆ ಸಹಕರಿಸಿದರೆ ಓದುತ್ತಿರುವ ವಿದ್ಯಾರ್ಥಿಗಳಿಗೆ ಸಹಾಯವಾಗುತ್ತದೆ.
ಶಾಲೆಗೆ ಕೊಡುಗೆಯಾಗಿ ನೀಡಿದ ಬೆಂಚ್ ಹಾಗೂ ಡೆಸ್ಕ್ ಗಳನ್ನು ಇಂದು ಹಸ್ತಾಂತರಿಸಲಾಯಿತು. ಕಾರ್ಯಕ್ರಮದಲ್ಲಿ ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷೆ ಕುಶಾಲಿನಿ, ಸದಸ್ಯರಾದ ಪೀಟರ್, ದಯಾನಂದ, ಲೋಹಿತ್, ರಾಜೇಶ್, ಮಲ್ಲಿಕಾರ್ಜುನ್, ಪವಿತ್ರ, ಭಾಗೀರಥಿ, ಶ್ವೇತಾ ಹಾಗೂ ಶಾಲಾ ಶಿಕ್ಷಕರು ಹಾಜರಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv