ಮಡಿಕೇರಿ: ಭಾರತದ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ (Delhi Air Pollution) ಜನರ ಉಸಿರುಗಟ್ಟಿಸುತ್ತಿದೆ. ಈಗಾಗಲೇ ಅಪಾಯ ಮಟ್ಟ ಮೀರಿರುವ ದೆಹಲಿಯಲ್ಲಿ ದಿನದಿಂದ ದಿನಕ್ಕೆ ಗುಣಮಟ್ಟ ಕಳಪೆಯಾಗುತ್ತಲೇ ಇದೆ. ಆದರೆ ಇತ್ತ ಕರ್ನಾಟಕ ಕಾಶ್ಮೀರ ಕೊಡಗು ಜಿಲ್ಲೆ ದೇಶದಲ್ಲೇ ಅತ್ಯಂತ ಶುದ್ಧ ಗಾಳಿ ಹೊಂದಿರುವ ಸ್ಥಳಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಗಿಟ್ಟಿಸಿಕೊಂಡಿದೆ. ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ (Pollution control Board) ಮಾಹಿತಿ ಪ್ರಕಾರ ಮಂಜಿನ ನಗರಿ ಮಡಿಕೇರಿ ಪ್ರಥಮ ಸ್ಥಾನದಲ್ಲಿದೆ. ಈ ವರದಿ ಸ್ಥಳೀಯ ನಿವಾಸಿಗಳಿಗೆ ಖುಷಿ ಕೊಟ್ಟಿದೆ.
ಹೌದು. ಈಗಾಗಲೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಿಷಪೂರಿತ ಗಾಳಿ ಸೇವನೆಯಿಂದ ಅಲ್ಲಿನ ನಿವಾಸಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಪ್ರಾಥಮಿಕ ಶಾಲಾ ಮಕ್ಕಳಿಗೆ ಆನ್‌ಲೈನ್ ತರಗತಿಗಳಿಗೆ (Online Class) ವರ್ಗಾಯಿಸಲಾಗಿದೆ. 3ನೇ ಹಂತದ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ. ಇತ್ತ ದೇಶದಲ್ಲೇ ಅತ್ಯಂತ ಶುದ್ಧ ಗಾಳಿ ಹೊಂದಿರುವ ಸ್ಥಳಗಳ ಪಟ್ಟಿಯಲ್ಲಿ ಮಂಜಿನ ನಗರಿ ಮಡಿಕೇರಿಗೆ ನಂ.1 ಸ್ಥಾನ ಸಿಕ್ಕಿದೆ. ಕೇಂದ್ರ ಪರಿಸರ ಮಾಲಿನ್ಯ ಮಂಡಳಿಯ ಮಾಹಿತಿ ಪ್ರಕಾರ ಮಂಜಿನ ನಗರಿ ಮಡಿಕೇರಿ (Madikeri) ಪ್ರಥಮ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ ರಾಜ್ಯದ ಗದಗ ಜಿಲ್ಲೆ ಕೂಡ ಸ್ಥಾನ ಪಡೆದುಕೊಂಡಿದ್ದು, 8ನೇ ಸ್ಥಾನ ಪಡೆದುಕೊಂಡಿದೆ. ಇದನ್ನೂ ಓದಿ: ದೆಹಲಿ ಮಾಲಿನ್ಯಕ್ಕೆ ಕೇಂದ್ರ ಸರ್ಕಾರವೇ ಹೊಣೆ – ರಾಜಕೀಯ ಬಿಟ್ಟು ಕ್ರಮ ತೆಗೆದುಕೊಳ್ಳಲಿ: ಅತಿಶಿ
ಕಳೆದ ವರ್ಷ ಇದೇ ಸಮಯದಲ್ಲಿ ಮಡಿಕೇರಿ 5ನೇ ಸ್ಥಾನದಲ್ಲಿತ್ತು. ಇದೀಗ ಕೊಡಗಿನ ಹಸಿರು ಪರಿಸರ, ಪರಿಶುದ್ಧ ಗಾಳಿ, ಝುಳು ಝುಳು ನೀರು ಪ್ರವಾಸಿಗರಿಗೆ ಅಚ್ಚುಮೆಚ್ಚಿನ ತಾಣವಾಗಿದೆ ಮಂಜಿನ ನಗರಿ ಮಡಿಕೇರಿ. ಅಲ್ಲದೇ ನಗರ ಪ್ರದೇಶ, ಪ್ರವಾಸಿತಾಣಗಳಲ್ಲಿ ದಿನಕಳೆದಂತೆ ಪರಿಸ್ಥಿತಿ ಬದಲಾಗುತ್ತಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ವಾಯು ಗುಣಮಟ್ಟ (AQI) ಸೂಚ್ಯಂಕ ಪ್ರಮಾಣ ಪ್ರಕಾರ ಕೊಡಗಿನಲ್ಲಿ ಗಾಳಿಯ ಗುಣಮಟ್ಟ ವರ್ಷದ ಬಹುತೇಕ ದಿನಗಳಲ್ಲಿ ಉತ್ತಮ ಎಂದೇ ದಾಖಲಾಗುತ್ತಿದೆ. ಇದೀಗ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಹಿತಿ ಪ್ರಕಾರ, ದೇಶದ 10 ಪರಿಶುದ್ಧ ಗಾಳಿ ಇರುವ ಪ್ರದೇಶದಲ್ಲಿ ಮಡಿಕೇರಿ ಮೊದಲ ಸ್ಥಾನ ಪಡೆದುಕೊಂಡಿರುವುದು ಸ್ಥಳೀಯರಿಗೆ ಖುಷಿ ಕೊಟ್ಟಿದೆ.
ಇನ್ನೂ ಶುದ್ಧಗಾಳಿ ಹೊಂದಿರುವ ದೇಶದ ಪ್ರಥಮ ಹತ್ತು ಸ್ಥಳಗಳಲ್ಲಿ ಮಡಿಕೇರಿ ಮೊದಲ ಸ್ಥಾನದಲ್ಲಿದ್ದರೆ, ನಂತರ ಸ್ಥಾನಗಳನ್ನು ಕ್ರಮವಾಗಿ ಪಾಲ್ಕಲೈಪೆರೂರ್, ಕರೂರು, ತಿರುನಲ್ವೇಲಿ, ತಿರುಪತಿ, ಊಟಿ, ವೆಲ್ಲೂರ್, ರಾಣಿಪೇಟ್, ಗದಗ, ತೂತುಕುಡಿ ಹಾಗೂ ಪುದುಚೆರಿ ಪಡೆದುಕೊಂಡಿವೆ. ಮಡಿಕೇರಿಯಲ್ಲಿ ಗಾಳಿಯ ಮಾಲಿನ್ಯದ ಪ್ರಮಾಣ ಎಕ್ಯೂಐ ಸೂಚ್ಯಂಕದ ಪ್ರಕಾರ 10 ಆಗಿದ್ದರೆ, ಪಾಲ್ಕಲೈಪೆರೂರ್ 17, ಕರೂರು 22, ತಿರುನಲ್ವೇಲಿ 23, ತಿರುಪತಿ 24, ಊಟಿ 26, ವೆಲ್ಲೂರ್ 26, ರಾಣಿಪೇಟ್ 26, ಗದಗ 32, ತೂತುಕುಡಿ 32 ಹಾಗೂ ಪುದುಚೆರಿಯಲ್ಲಿ 34 ಆಗಿದೆ. ಇದನ್ನೂ ಓದಿ: `ಏಕ್ ಹೈ ತೊ ಸೇಫ್ ಹೈ’ ಪ್ರಧಾನಿ ಘೋಷಣೆಗೆ ಟೀಕೆ – ಮೋದಿ, ಅದಾನಿ ಫೋಟೋ ತೋರಿಸಿ ರಾಗಾ ವ್ಯಂಗ್ಯ
ಅತಿ ಹೆಚ್ಚು ವಾಯು ಮಾಲಿನ್ಯದಿಂದ ಸಮಸ್ಯೆ ಎದುರಿಸುತ್ತಿರುವ ದೆಹಲಿಯಲ್ಲಿ ಎಕ್ಯೂಐ ಸೂಚ್ಯಂಕ ಭಾನುವಾರ 457 ದಾಟಿದೆ. ಹೀಗಾಗಿ ಮಡಿಕೇರಿ ಶಾಸಕ ಮಂಥರ್ ಗೌಡ ಪಬ್ಲಿಕ್ ಟಿವಿಯೊಂದಿಗೆ ಮಾತಾನಾಡಿ, ಕೊಡಗು ಜಿಲ್ಲೆಯ ಪರಿಸರವನ್ನು ರಕ್ಷಣೆ ಮಾಡಿರುವುದರಿಂದ ಈ ಜಿಲ್ಲೆಗೆ ಅಗ್ರಸ್ಥಾನ ದೊರಕಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪರಿಸರ ಪೂರಕವಾದ ಯೋಜನೆಗಳನ್ನು ಹಮ್ಮಿಕೊಂಡು ಮುಂದಿನ ಪೀಳಿಗೆಗೂ ಉತ್ತಮ ಗಾಳಿ ಸಿಕ್ಕುವಂತೆ ಮಾಡುವುದು ಎಲ್ಲರ ಕರ್ತವ್ಯ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಮಂಜಿನ ನಗರಿ ಮಡಿಕೇರಿ ಭೂಲೋಕದ ಸ್ವರ್ಗ ಎಂಬುದು ಈ ಮೂಲಕ ಸಾಬೀತಾದಂತಿದೆ. ಉತ್ತಮ ಆರೋಗ್ಯಕ್ಕೆ ಶುದ್ಧಗಾಳಿ, ಶುದ್ಧ ನೀರು, ನಿರ್ಮಲ ವಾತಾವರಣ ಎಂಬುದನ್ನು ಚಿಕ್ಕ ಜಿಲ್ಲೆ ಕೊಡಗು ತನ್ನದಾಗಿಸಿಕೊಂಡಿರುವುದು ನಿಜಕ್ಕೂ ಸಂತಸದ ವಿಚಾರವೇ ಸರಿ. ಇದನ್ನೂ ಓದಿ: ದೆಹಲಿಯಲ್ಲಿ ಮಾಲಿನ್ಯ ನಿಯಂತ್ರಣಕ್ಕೆ GRAP-III ಜಾರಿ – ನಿಯಮ ಉಲ್ಲಂಘಿಸಿದವರಿಂದ 5 ಕೋಟಿಗೂ ಅಧಿಕ ದಂಡ ವಸೂಲಿ