ಮಡಿಕೇರಿ: ಇಯರ್ ಎಂಡ್, ಕ್ರಿಸ್‍ಮಸ್, ನ್ಯೂ ಇಯರ್ ಬಂದಿದೆ. ಹಾಗಾಗಿ ಎಲ್ಲಾ ಕಡೆ ಸ್ವೀಟ್ಸ್, ಕೇಕ್, ಚಾಕ್ಲೇಟ್‍ಗೆ ಫುಲ್ ಡಿಮಾಂಡ್. ಇದನ್ನೇ ಎನ್‍ಕ್ಯಾಶ್ ಮಾಡಿಕೊಳ್ಳುವುದಕ್ಕೆ ಕೆಲ ಕಿಡಿಗೇಡಿಗಳು ಮುಂದಾಗಿದ್ದಾರೆ. ಹೋಮ್ ಮೇಡ್ ಚಾಕ್ಲೇಟ್ ಅಂತ ನಕಲಿ ಚಾಕ್ಲೇಟ್‍ಗಳನ್ನು ಮಾರ್ಕೆಟ್‍ಗೆ ಬಿಡುತ್ತಿದ್ದಾರೆ. ಅದರಲ್ಲೂ ದೇಶಭಕ್ತಿ, ಪ್ರಾಮಾಣಿಕತೆಗೆ ಹೆಸರಾಗಿರೋ ಕೊಡಗಿನಲ್ಲಿ ಹೋಮ್ ಮೇಡ್ ಅಂತ ದಂಧೆ ಮಾಡುತ್ತಿರುವುದು ಪಬ್ಲಿಕ್ ಟಿವಿ ಸ್ಟಿಂಗ್ ವೇಳೆ ಬಯಲಾಗಿದೆ.
Advertisement
ಕೊಡಗಿನ ಹೋಂ ಮೇಡ್ ಚಾಕ್ಲೇಟ್‍ಗೆ ವಿಶೇಷ ಸ್ಥಾನಮಾನ ಇದೆ. ರಾಜ್ಯದ ಹಾಗೂ ಹೊರರಾಜ್ಯದಿಂದ ಬರುವ ಪ್ರವಾಸಿಗರು ಅಪಾರ ಪ್ರಮಾಣದಲ್ಲಿ ಚಾಕ್ಲೇಟ್ ಕೊಳ್ಳುತ್ತಾರೆ. ಇದನ್ನೇ ಎನ್‍ಕ್ಯಾಶ್ ಮಾಡಿಕೊಂಡ ದಂಧೆಕೋರರು ಹೋಂಮೇಡ್ ಹೆಸರಲ್ಲಿ ಜನರ ಹೊಟ್ಟೆಗೆ ವಿಷ ತುಂಬುತ್ತಿದ್ದಾರೆ. ಹೊರರಾಜ್ಯದಿಂದ ಚಾಕ್ಲೇಟ್ ಸ್ಲ್ಯಾಬ್‍ಗಳನ್ನು ತಂದು ಅವುಗಳನ್ನೇ ಕರಗಿಸಿ ಬೇಕಾದ ಶೇಪ್‍ಗಳಿಗೆ ಬದಲಾಯಿಸಿ ಮಾರಾಟ ಮಾಡುತ್ತಿದ್ದಾರೆ. ಯಾವುದೇ ಸುರಕ್ಷತಾ ಕ್ರಮಗಳನ್ನು ಅನುಸರಿಸದೇ ಚಾಕ್ಲೇಟ್ ತಯಾರಿಸುತ್ತಿದ್ದಾರೆ. ಈ ಚಾಕ್ಲೇಟ್ ಮೇಲೆ ತಯಾರಿಕಾ ದಿನ ಆಗಲಿ, ಎಕ್ಸ್ ಪೈರಿ ಡೇಟ್ ಆಗ್ಲಿ ಯಾವುದೂ ಇಲ್ಲ. ಅಷ್ಟೇ ಏಕೆ ಆಹಾರ ಸುರಕ್ಷಾ ಇಲಾಖೆ ನೀಡುವ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‍ಎಸ್‍ಎಸ್‍ಎಐ) ಕೋಡ್ ಕೂಡ ಇಲ್ಲ.
Advertisement
Advertisement
ಪಬ್ಲಿಕ್ ಟಿವಿ ಪ್ರತಿನಿಧಿ: ನಾವು 4 ಮಂದಿ ಫ್ರೆಂಡ್ಸ್ ಇದ್ದೀವಿ, 4 ಶಾಪ್‍ಗಳಿವೆ
ಅಂಗಡಿಯವನು: ನಿಮ್ಮ ನಂಬರ್ ಕೊಡಿ
ಪ್ರತಿನಿಧಿ: ಅದಕ್ಕೆ ನಿಮ್ಮ ಓನರ್ ಯಾರು ಅಂತ ಕೇಳಿದ್ದು
ಅಂಗಡಿಯವನು: ಸ್ಲ್ಯಾಬ್‍ನ 150ರಿಂದ 200ರೂ.ವರೆಗೆ ಮಾರಾಟ ಮಾಡಬಹುದು
ಪ್ರತಿನಿಧಿ: ಸ್ಲ್ಯಾಬ್ ಎಲ್ಲಿಂದ ಬರುತ್ತೆ
ಅಂಗಡಿಯವನು: ಹೈದ್ರಾಬಾದ್‍ನಿಂದ ಬರುತ್ತೆ
ಪ್ರತಿನಿಧಿ: ಈ ಪೇಸ್ಟ್ ಎಲ್ಲಿಂದ ಬರುತ್ತೆ
ಅಂಗಡಿಯವನು: ಪುತ್ತೂರಿಂದ ಪೇಸ್ಟ್ ಬರುತ್ತೆ
ಪ್ರತಿನಿಧಿ: ಈ ಸ್ಲ್ಯಾಬ್ ಎಷ್ಟು ರೂ.ಗೆ ಕೊಡ್ತೀರಾ ಹೇಳಿ
Advertisement
ಅಂಗಡಿಯವನು: 100 ರೂ.ಗೆ ಹಾಕಿಕೊಡ್ತೀನಿ ನೋಡಿ
ಪ್ರತಿನಿಧಿ: ದರಲ್ಲಿ ಎಕ್ಸ್‍ಪೈರಿ ಡೇಟ್ ಏನೂ ಬರಲ್ವಾ
ಅಂಗಡಿಯವನು: ಇಲ್ಲ ಸರ್. ಎಕ್ಸ್‍ಪೈರಿ ಇರಲ್ಲ, ಮನೆಯಲ್ಲೇ ಮಾಡೋದು ಅಂತ ಹೇಳಿ, ಫ್ರೆಶ್ ಐಟಂ ಎರಡ್ಮೂರು ದಿನದಲ್ಲಿ ಖಾಲಿಯಾಗುತ್ತೆ ಅಂತ ಹೇಳಿ
ಪ್ರತಿನಿಧಿ: ರೇಟ್ ಸ್ವಲ್ಪ ನೋಡಿ ಅಣ್ಣ
ಅಂಗಡಿಯವನು: ಸರ್ ಚಾಕ್ಲೇಟ್ ಬಗ್ಗೆ ಏನೂ ಮಾತಾಡಂಗೇ ಇಲ್ಲ, ನಾವೆಲ್ಲಾ ತಿನ್ನಲ್ವಾ, ಏನಾದ್ರೂ ಪ್ರಾಬ್ಲಂ ಆದ್ರೆ ಫೋನ್ ಮಾಡಿ ಸರ್
ಪ್ರತಿನಿಧಿ: ಇದೆಲ್ಲಾ ನೀವೇ ಮಾಡೋದಾ…?
ಅಂಗಡಿಯವನು: ಇಲ್ಲೇ ನಮ್ಮ ಗೋಡೌನ್ ಇದೆ ಅಲ್ಲೇ ಮಾಡೋದು, ನೀವು ಹೇಳಿದ ಜಾಗಕ್ಕೆ ಕಳಿಸಿಕೊಡುತ್ತೇವೆ
ಇಂತಹ ಚಾಕ್ಲೇಟ್ ತಿಂದು ಸಾಕಷ್ಟು ಪ್ರವಾಸಿಗರು ಸಮಸ್ಯೆ ಅನುಭವಿಸಿದ ಉದಾಹರಣೆಗಳಿವೆ. ಹೀಗಾಗಿ ಈ ಚಾಕ್ಲೇಟ್ ಧಂದೆ ಮೇಲೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ತೆಗೆದುಕೊಳ್ಳೋದೇ ಇರೋದು ನಿಜಕ್ಕೂ ಆಶ್ಚರ್ಯಕರ ಎಂದು ಸ್ಥಳೀಯಾದ ಚಂದ್ರಮೋಹನ್ ತಿಳಿಸಿದ್ದಾರೆ.
ಹೋಂ ಮೇಡ್ ಚಾಕ್ಲೇಟ್ ಮಾಡೋದು ತುಂಬಾ ಕಷ್ಟ. ಹೋಂಮೇಡ್ ಚಾಕ್ಲೇಟ್ ತಯಾರಿಕೆಗೂ ಎಫ್‍ಎಸ್‍ಎಸ್‍ಎಐ ಕೋಡ್ ಕೂಡ ಇರುತ್ತೆ. ಆದರೆ ಕೊಡಗಿನ ನಿಸರ್ಗಧಾಮ, ರಾಜಾಸೀಟ್ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಲ್ಲಿ ಮಾರಾಟ ಮಾಡುತ್ತಿರುವ ಕೆಲವು ಚಾಕ್ಲೇಟ್ ಮೇಲೆ ಯಾವುದೇ ಅಂಕಿ ಅಂಶವಿಲ್ಲ. ಈ ಚಾಕ್ಲೇಟ್ ಮಾರೋದಾದ್ರೂ ಹೇಗೆ ಅಂತ ಅಂಗಡಿಯವನ ಕೇಳಿದರೆ, ಸರ್ ನಿನ್ನೆಯಷ್ಟೇ ತಂದಿದ್ದು. ಇದರ ಮೇಲೆ 260 ರೂಪಾಯಿ ಬೆಲೆ ಇದೆ ನಾನು ನಿಮಗೆ 90 ರೂಪಾಯಿಗೆ ಕೊಡುತ್ತೇನೆ. ನೀವು 150 ರೂಪಾಯಿಗೆ ಮಾರಿ ಸಾರ್. ಎಲ್ಲರೂ ಹೊರಗಿನವರು ತಾನೇ ಬರೋದು ಅಂತ ಹೇಳುತ್ತಾನೆ.
ಈ ಚಾಕ್ಲೇಟ್ ಇಲ್ಲೇ ತಯಾರಿಸೋದು, ನಿಮಗೆ ಯಾವ ಶೇಪ್ ಬೇಕು ಹೇಳಿ ಸರ್. ಸ್ಟಿಕ್ಕರ್ ಕೂಡ ಮಾಡಿ ಕೊಡುತ್ತೇವೆ. ಯಾವ ರೀತಿಯ ಕವರ್ ಬೇಕು ಅದನ್ನು ಮಾಡಿಕೊಡುತ್ತೇವೆ ಅನ್ನೋದನ್ನೂ ಹೇಳುತ್ತಾನೆ. ಇವನ ಮಾತು ಕೇಳಿದ ಕೂಡಲೇ ಗೋಡೌನ್ ಹುಡುಕಿ ಹೊರಟ ನಮಗೆ ಆಶ್ಚರ್ಯ ಕಾದಿತ್ತು. ಯಾಕಂದ್ರೆ ಕುಶಾಲನಗರ ಸುತ್ತಮುತ್ತ ನಾಲ್ಕೈದು ಗೋಡೌನ್‍ಗಳಲ್ಲಿ ಬರೋಬ್ಬರಿ 300 ಕ್ವಿಂಟಾಲ್ ಇಂತಹ ಚಾಕ್ಲೇಟ್ ಶೇಖರಣೆ ಆಗಿದೆಯಂತೆ. ಇಂತಹ ಚಾಕ್ಲೇಟ್ ದಂಧೆಯಿಂದ ಕೊಡಗಿನಲ್ಲಿ ಎಲ್ಲಾ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ತಯಾರಿಸುತ್ತಿರುವ ಹೋಂ ಮೇಡ್ ಚಾಕ್ಲೇಟ್‍ಗಳಿಗೂ ಇದರಿಂದ ಕೆಟ್ಟ ಹೆಸರು ಬರುವಂತಾಗಿದೆ. ಒಟ್ಟಿನಲ್ಲಿ ಕೊಡಗಿನಲ್ಲಿ ನಡೀತಿರೋ ನಕಲಿ ಚಾಕ್ಲೇಟ್ ದಂಧೆಗೆ ಈಗಲಾದ್ರೂ ಸಂಬಂಧಪಟ್ಟವರು ಬ್ರೇಕ್ ಹಾಕ್ತಾರಾ ಕಾದು ನೋಡಬೇಕಿದೆ.