ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಸುರಿದ ಮಹಾಮಳೆ, ಈ ಎರಡು ವರ್ಷವೂ ಅನಾಹುತಗಳನ್ನೇ ಸೃಷ್ಟಿಸಿತ್ತು. ಆದರೆ ಮಳೆ ನಿಂತರೂ ಮಳೆಹನಿ ಮಾತ್ರ ನಿಲ್ಲಲ್ಲ ಅನ್ನೋ ಹಾಗೆ, ಮಳೆಗಾಲ ಮುಗಿದು ಮೂರು ತಿಂಗಳಾದ್ರೂ ಮಳೆಯಿಂದ ಆಗುತ್ತಿರುವ ಅನಾಹುತಗಳು ಮಾತ್ರ ಮುಂದುವರಿಯುತ್ತಲೇ ಇವೆ.
ಹೌದು. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಮಲ್ಲೇನಹಳ್ಳಿಯ ಉಣುಗಲು ಬೆಟ್ಟದಲ್ಲಿರುವ ಭಾರೀ ಗಾತ್ರದ ಮೂರು ಬಂಡೆಗಳು ಉರುಳಿ ಬೀಳುವ ಸ್ಥಿತಿಯಲ್ಲಿವೆ. ಸುಮಾರು 100 ಅಡಿಯಷ್ಟು ಎತ್ತರವಿರುವ ಈ ಬೆಟ್ಟದ ಮೇಲೆ ಸಾಕಷ್ಟು ಬಂಡೆಕಲ್ಲುಗಳಿದ್ದು, ಅವುಗಳ ಪೈಕಿ ಮೂರು ಬಂಡೆಗಳು ಕೆಳಕ್ಕೆ ಉರುಳುವ ಸ್ಥಿತಿಯಲ್ಲಿವೆ.
Advertisement
Advertisement
ಕಳೆದ ಆಗಸ್ಟ್ ತಿಂಗಳಲ್ಲಿ ಸುರಿದ ಭಾರೀ ಮಳೆಗೆ ಬೃಹತ್ ಗಾತ್ರದ ಈ ಬಂಡೆಗಳು ಒಂದೆಡೆಗೆ ಬಾಗಿವೆ. ಅದರಲ್ಲೂ ಒಂದು ಬಂಡೆ ಸುಮಾರು ಎರಡು ಅಡಿಯಷ್ಟು ಬಾಗಿದ್ದು ಈ ಬಂಡೆ ಉರುಳಿದ್ದಲ್ಲಿ ಉಳಿದ ಎರಡೂ ಬಂಡೆಗಳು ಉರುಳುತ್ತವೆ. ಒಂದು ವೇಳೆ ಬಂಡೆಗಳು ಹೀಗೆ ಉರುಳಿದ್ದೇ ಆದಲ್ಲಿ ಬೆಟ್ಟದ ತಪ್ಪಲಿನಲ್ಲೇ ಇರುವ 80 ಮನೆಗಳ ಪೈಕಿ 60 ಮನೆಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ ಜನರು ಜೀವ ಕೈಯಲ್ಲಿ ಹಿಡಿದು ಆತಂಕದಲ್ಲಿ ಬದುಕುತ್ತಿದ್ದಾರೆ. ಮಲ್ಲೇನಹಳ್ಳಿಯಲ್ಲಿ 80 ಮನೆಗಳಿದ್ದು ಬಂಡೆಗಳು ಉರುಳಿಬಿದ್ದಲ್ಲಿ, ಕನಿಷ್ಠ 60 ಮನೆಗಳು ನಾಶವಾಗಿಬಿಡುತ್ತವೆ.
Advertisement
ಅನಾದಿಕಾಲದಿಂದ ಈ ಬೆಟ್ಟದ ಮೇಲೆ ಬಂಡೆಗಳಿದ್ದರು ಇದೂವರೆಗೆ ಯಾವುದೇ ಸಮಸ್ಯೆಯಾಗಿರಲಿಲ್ಲ. ಆದರೆ ಕಳೆದ ಎರಡು ವರ್ಷಗಳಿಂದ ಸುರಿದ ಮಳೆಗೆ ಬಂಡೆಕಲ್ಲುಗಳು ಒಂದೆಡೆಗೆ ಜಾರಿವೆ. ಕಳೆದ 15 ದಿನಗಳ ಹಿಂದೆ ಗ್ರಾಮದ ಗುರು ಬಸಪ್ಪ ಎಂಬವರು ಬೆಟ್ಟದ ಮೇಲೆ ಹೋದಾಗ ಬಂಡೆಗಳು ಒಂದೆಡೆಗೆ ಬಾಗಿರುವುದನ್ನು ಕಂಡಿದ್ದಾರೆ. ಕೂಡಲೇ ಗ್ರಾಮಕ್ಕೆ ಬಂದು ವಿಷಯ ಮುಟ್ಟಿಸಿದ್ದಾರೆ. ಹೀಗಾಗಿ ಗ್ರಾಮದ ಜನರು ಹಗಲು ರಾತ್ರಿ ಎನ್ನದೇ ಬಂಡೆಗಳು ಯಾವಾಗ ಉರುಳಿ ಬೀಳುತ್ತವೆಯೋ ಎಂಬ ಭಯದಲ್ಲಿ ಬದುಕುತ್ತಿದ್ದಾರೆ.
Advertisement
ಈ ಗ್ರಾಮದಲ್ಲಿ ಎಲ್ಲರೂ ಕೂಲಿ ಕೆಲಸ ಮಾಡುವವರಾಗಿದ್ದು, ಮನೆಯಲ್ಲಿ ಮಕ್ಕಳು, ವೃದ್ಧರು ಇದ್ದಾರೆ. ಒಂದು ವೇಳೆ ಬಂಡೆಗಳು ಉರುಳಿದಲ್ಲಿ ದೊಡ್ಡ ಅನಾಹುತವೇ ಸಂಭವಿಸಿ ಬಿಡುತ್ತದೆ. ಹೀಗಾಗಿ ರಾತ್ರಿ ನೆಮ್ಮದಿಯಿಂದ ನಿದ್ದೆಯನ್ನೂ ಮಾಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಬಂಡೆಯನ್ನು ತೆರವು ಮಾಡಬೇಕು ಎನ್ನೋದು ಜನರ ಒತ್ತಾಯವಾಗಿದೆ.