ಸಾಂದರ್ಭಿಕ ಚಿತ್ರ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಿಷನರಿಗಳು ಸರ್ಕಾರಿ ಶಾಲೆಗಳ ಮೂಲಕ ಮತಾಂತರದ ಹುನ್ನಾರ ನಡೆಸಿವೆ ಎಂದು ಜಿಲ್ಲಾ ಹಿಂದೂ ಪರ ಸಂಘಟನೆಗಳು ಆರೋಪ ಮಾಡಿವೆ.
ಜಿಲ್ಲೆಯ ಹಲವು ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಅಂಚೆಯ ಮೂಲಕ ಕೆಲವು ವಿವಾದಾತ್ಮಕ ಪುಸ್ತಕಗಳು ತಲುಪಿದ್ದು, ಜಿಲ್ಲೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹಿಂದೂ ಪರ ಸಂಘಟನೆಗಳ ಮುಖಂಡರು, ಕೊಡಗಿನಲ್ಲಿ ಧರ್ಮ ಪ್ರಚಾರ ಮಾಡಲು ಈ ರೀತಿ ಪುಸ್ತಕಗಳನ್ನು ಸರ್ಕಾರಿ ಶಾಲೆಗಳಿಗೆ ನೀಡಲಾಗಿದೆ. ಜಿಲ್ಲಾಡಳಿದ ಗಮನಕ್ಕೆ ಬಾರದೇ ಪುಸ್ತಕ ವಿತರಣೆ ಆಗಿದ್ದು, ಇದರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯ ನಾಲ್ಕೇರಿ, ಬಾಳೆಲೆ, ಬಿರುನಾಣಿ, ಶೆಟ್ಟಿಗೇರಿ, ಕುರ್ಚಿ, ಕಿರಗೂರು, ಬಾಡಗ, ಕಾನ್‍ಬೈಲ್, ಶ್ರೀಮಂಗಲ ಸೇರಿದಂತೆ ಜಿಲ್ಲೆಯ ಹಲವು ಸರ್ಕಾರಿ ಶಾಲೆಗಳಿಗೆ ಕನ್ನಡ ಭಾಷೆಯಲ್ಲಿ ಸತ್ಯಮೇವ ಜಯತೆ, ಯೋಹಾನನು ಬರೆದ ಸುವಾರ್ತೆ ಹಾಗೂ ಕೊಡವ ಭಾಷೆಯಲ್ಲಿ ತರ್ಜುಮೆಗೊಂಡಿರುವ ಬೈಬಲ್ ದೇವಡ ಪುದಿಯ ಒಪ್ಪಂದ ಪುಸ್ತಕಗಳನ್ನು ಅಂಚೆ ಮೂಲಕ ಶಿವಮೊಗ್ಗದಿಂದ ಸಂಸ್ಥೆಯೊಂದು ತಲುಪಿಸಿದೆ. ಈ ಹಿನ್ನಲೆಯಲ್ಲಿ ಹಿಂದೂ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ಸರ್ಕಾರದ ಆದೇಶವನ್ನು ದುರ್ಬಳಕ್ಕೆ ಮಾಡಿಕೊಂಡು ಕೇವಲ ಕ್ರಿಶ್ಚಿಯನ್ ಧರ್ಮಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಸರ್ಕಾರಿ ಶಾಲೆಗಳ ಗ್ರಂಥಾಲಯಗಳಿಗೆ ಆಂಚೆ ಮೂಲಕ ಕಳುಹಿಸಿಕೊಟ್ಟಿರುವುದರ ಹಿಂದೆ ವ್ಯವಸ್ಥಿತ ಮತಾಂತರಿಗಳ ಜಾಲವಿದೆ. ಈ ಕೊಡಲೇ ಪುಸ್ತಕಗಳನ್ನು ಹಿಂಪಡೆದು ಸೂಕ್ತ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಜರುಗಿಸಬೇಕು ಎಂದು ಹಿಂದೂಪರ ಸಂಘಟನೆಯ ಪ್ರಮುಖರು ಒತ್ತಾಯಿಸಿದ್ದಾರೆ.