ಕೊಡಗು: ನೆರೆ ಸಂಸತ್ರಸ್ತರಿಗೆ ಜಿಲ್ಲಾಡಳಿತದಿಂದ ಜಾಗ ಗುರುತಿಸಿದ ಹಿನ್ನೆಲೆಯಲ್ಲಿ 68 ಕುಟುಂಬಗಳು ಸಂತ್ರಸ್ತರ ನಿರಾಶ್ರಿತ ಕೇಂದ್ರದಿಂದ ತಮ್ಮ ತಮ್ಮ ಮನೆಗಳಿಗೆ ತೆರಳಿದ್ದಾರೆ.
ಮಡಿಕೇರಿ ತಾಲೂಕಿನ ನೆಲ್ಯಹುದಿಕೇರಿ ಸರ್ಕಾರಿ ಶಾಲೆಯಲ್ಲಿ ಕಳೆದ ನಾಲ್ಕು ತಿಂಗಳಿಂದ ಮನೆ ಮಠ ಕಳೆದುಕೊಂಡವರಿಗೆ ಸಂತ್ರಸ್ತರ ಕೇಂದ್ರ ತೆರೆದು ಆಶ್ರಯ ನೀಡಿತ್ತು. ಪ್ರವಾಹ ಇಳಿದ ಮೇಲೆ ಅವರನ್ನು ಪುನಃ ತಮ್ಮ ಗ್ರಾಮಗಳಿಗೆ ತೆರಳುವಂತೆ ಜಿಲ್ಲಾಡಳಿತ ಸೂಚಿಸಿತ್ತು.
Advertisement
ಆದರೆ ಸಂತ್ರಸ್ತರು ಮಾತ್ರ ತಮಗೆ ಶಾಶ್ವತ ಪರಿಹಾರ ನೀಡದ ಹೊರತ್ತು ಇಲ್ಲಿಂದ ಹೋಗುವುದಿಲ್ಲ ಎಂದು ಪಟ್ಟುಹಿಡಿದಿದ್ದರು. ನಿವೇಶನ ನೀಡುವಂತೆ ಆಗ್ರಹಿಸಿ ಬರೋಬ್ಬರಿ ನಾಲ್ಕು ತಿಂಗಳಿಂದ ನಿರಂತರ ಹೋರಾಟ ನಡೆಸುತ್ತಿದ್ದರು. ಇಡೀ ಜಿಲ್ಲೆಯಲ್ಲಿ ಇದೊಂದೇ ನಿರಾಶ್ರಿತ ಕೇಂದ್ರದಲ್ಲಿ 176 ಜನರು ಇದುವರೆಗೆ ಇದ್ದರು. ಇದೀಗ ಜಿಲ್ಲಾಡಳಿತ ಮಡಿಕೇರಿ ತಾಲೂಕಿನ ಅಭ್ಯಂತಮಂಗಲದಲ್ಲಿ ಒತ್ತುವರಿಯಾಗಿದ್ದ ಜಾಗವನ್ನು ತೆರವು ಮಾಡಿ ಸಂತ್ರಸ್ತರಿಗಾಗಿ ಜಾಗ ಗುರುತಿಸುತ್ತಿದೆ.
Advertisement
Advertisement
ಜಾಗವನ್ನು ಸಮತಟ್ಟು ಮಾಡುತ್ತಿದ್ದು, ನಿವೇಶನವಾಗಿ ಪರಿವರ್ತಿಸಿ ಕೊಡುವುದಕ್ಕೆ ಸಿದ್ಧತೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತರು ನಾಲ್ಕು ತಿಂಗಳ ಹೋರಾಟವನ್ನು ಕೊನೆಗೂ ಅಂತ್ಯಗೊಳಿಸಿ ತಮ್ಮ ತಮ್ಮ ಊರುಗಳಿಗೆ ಖುಷಿಯಿಂದ ತೆರಳುತ್ತಿದ್ದಾರೆ. ಒಟ್ಟಿನಲ್ಲಿ 4 ತಿಂಗಳಿಂದ ಶಾಶ್ವತ ಪರಿಹಾರಕ್ಕಾಗಿ ಹೋರಾಡುತ್ತಿದ್ದ ಜನರಿಗೆ ನಿವೇಶನ ಸಿಗುತ್ತಿರುವುದು ಸಂತಸ ತಂದಿದೆ.