ಮಡಿಕೇರಿ: ಕುಡಿಯಲು ಹಣ ಕೊಡದಿದ್ದಕ್ಕೆ ಮಗನೇ ತಂದೆಯನ್ನೇ ಕೊಲೆ ಮಾಡಿರುವ ಅಮಾನವೀಯ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಗೋಣಿಮರೂರು ಗ್ರಾಮದಲ್ಲಿ ನಡೆದಿದೆ.
ಗೋಣಿ ಮರೂರು ಗ್ರಾಮದ ಜೇನುಕುರುಬರ ಕರಿಯಪ್ಪ (46) ಮೃತ ತಂದೆ. ಮಗ ಲೋಕೇಶ್ ತಂದೆಯನ್ನೇ ಕಳೆದ ರಾತ್ರಿ ಹತ್ಯೆ ಮಾಡಿದ್ದಾನೆ. ಈ ಘಟನೆಯಲ್ಲಿ ತಾಯಿ ಲೀಲಾ ಅವರಿಗೂ ಗಂಭೀರ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.
ತಡ ರಾತ್ರಿ ಲೋಕೇಶ್ ಕುಡಿದು ಬಂದು ತಂದೆ-ತಾಯಿ ಬಳಿ ಕುಡಿಯಲು ಹಣ ಕೇಳಿದ್ದಾನೆ. ಇದಕ್ಕೆ ಪೋಷಕರು ನಿರಾಕರಿಸಿದ್ದಾರೆ. ಇದರಿಂದ ಕೋಪಗೊಂಡ ಲೋಕೇಶ್ ತಂದೆ ತಾಯಿ ಇಬ್ಬರಿಗೂ ಮರದ ತುಂಡಿನಿಂದ ಗಂಭೀರವಾಗಿ ಥಳಿಸಿದ್ದಾನೆ. ಕುಡಿದ ಮತ್ತಿನಲ್ಲಿ ಇಬ್ಬರಿಗೂ ಥಳಿಸಿ ಮನೆಯಿಂದ ಹೊರಟು ಹೋಗಿದ್ದಾನೆ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ತಂದೆ ಕರಿಯಪ್ಪ ಸ್ಥಳದಲ್ಲೇ ಮೃತಪಟ್ಟರೆ, ತಾಯಿ ಆಸ್ಪತ್ರೆ ಸೇರಿದ್ದಾರೆ.
ಈ ಸಂಬಂಧ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಲೋಕೇಶ್‍ನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.