ಮಡಿಕೇರಿ: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕರಡಿಗೋಡು ಗ್ರಾಮದಲ್ಲಿ ಕಾಡಾನೆ ದಾಳಿ ನಡೆಸಿ ಕಾರ್ಮಿಕರ ಲೈನ್ ಮನೆಯ ಸಮೀಪದ ಶೌಚಾಲಯವನ್ನು ಧ್ವಂಸ ಮಾಡಿವೆ.
ಕರಡಿಗೋಡು ಗ್ರಾಮದ ಜೋಜಿ ಥಾಮಸ್ ಎಂಬವರಿಗೆ ಸೇರಿದ ಕಾಫಿ ತೋಟದಲ್ಲಿ ಕಾಡಾನೆಗಳು ಬೀಡುಬಿಟ್ಟಿದ್ದವು. ಕಾಫಿ ತೋಟದ ಲೈನ್ ಮನೆ ಸಮೀಪಕ್ಕೆ ಆಗಮಿಸಿದ ಕಾಡಾನೆ, ಲೈನ್ ಮನೆಯ ಸಮೀಪದ ಕಾರ್ಮಿಕರ ಶೌಚಾಲಯವನ್ನು ಧ್ವಂಸಗೊಳಿಸಿದೆ. ರೋಷಗೊಂಡ ಕಾಡಾನೆ ಘೀಳಿಡುತ್ತಾ, ಶೌಚಾಲಯದ ಗೋಡೆಯನ್ನು ದೂಡಿ, ಬೀಳಿಸಿದೆ. ಸಮೀಪದಲ್ಲೇ ಇದ್ದ ಕಾರ್ಮಿಕರು ಕೂಡ ಭಯಭೀತರಾಗಿದ್ದಾರೆ. ಕಾಡಾನೆ ಮಾತ್ರವಲ್ಲದೇ ಕಾಡು ಕೋಣಗಳು ಕೂಡ ಕಾಫಿ ತೋಟದಲ್ಲಿ ಬೀಡು ಬಿಟ್ಟಿದ್ದು, ರೈತರು ಕಂಗಾಲಾಗಿದ್ದಾರೆ.
Advertisement
Advertisement
ತಿತಿಮತಿ ವಲಯ ವ್ಯಾಪ್ತಿಗೆ ಒಳಪಡುವ ಮಾಲ್ದಾರೆಯ ಗುಡ್ಲೂರು ವ್ಯಾಪ್ತಿಯ ಕಾಫಿ ತೋಟದಲ್ಲಿ ಮರಿ ಆನೆಗಳು ಸೇರಿದಂತೆ ಒಟ್ಟು 30ಕ್ಕೂ ಅಧಿಕ ಕಾಡಾನೆಗಳ ಹಿಂಡು ಕಾಫಿ ತೋಟದಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಿರುವುದಾಗಿ ಮಾಲ್ದಾರೆಯ ಕಾಫಿ ಬೆಳೆಗಾರ ಪೂಣಚ್ಚ ತಿಳಿಸಿದ್ದಾರೆ. ಕಾಫಿ ತೋಟದಲ್ಲಿ ಈಗಾಗಲೇ ಫಸಲು ಕಡಿಮೆ ಇದ್ದು, ಕಾಡಾನೆಗಳ ದಾಳಿಯಿಂದಾಗಿ ಇರುವ ಫಸಲು ಕೂಡ ನಾಶವಾಗುತ್ತಿದೆ. ಕೂಡಲೇ ಅರಣ್ಯ ಇಲಾಖೆ ಕಾಫಿ ತೋಟದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ಕಾಡಿಗಟ್ಟಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.