ಮಡಿಕೇರಿ: ಕಾಡಿನಿಂದ ಆಹಾರ ಅರಸಿ ನಾಡಿಗೆ ಬಂದಿದ್ದ ಕಾಡಾನೆಯೊಂದು ನಿತ್ರಾಣಗೊಂಡು ಮೂರು ದಿನಗಳಿಂದ ಕಾಫಿ ತೋಟದಲ್ಲಿಯೇ ಜೀವನ್ಮರಣ ಸ್ಥಿತಿಯಲ್ಲಿ ಹೋರಾಡುತ್ತಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ.
ಕೊಡಗು ಜಿಲ್ಲೆಯ ವಾಲ್ನೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತ್ಯಾಗತ್ತೂರು ರವಿ ಪೊನ್ನಪ್ಪ ಅವರಿಗೆ ಸೇರಿದ ಕಾಫಿ ತೋಟದಲ್ಲಿ ಕಳೆದ ಮೂರು ದಿನಗಳ ಹಿಂದೆ ಕಾಡಾನೆ ಒಂದು ಅಸ್ವಸ್ಥಗೊಂಡಿತ್ತು. ಸಾವು ಬದುಕಿನ ನಡುವೆ ಕಾಡಾನೆ ಹೋರಾಟ ನಡೆಸುತ್ತಿತ್ತು. ಅರಣ್ಯ ಇಲಾಖೆಯಿಂದ ಚಿಕಿತ್ಸೆ ನೀಡುವ ಕಾರ್ಯ ಹಗಲು ಇರುಳು ಮುಂದುವರಿದಿತ್ತು.
Advertisement
Advertisement
ಅಸ್ವಸ್ಥಗೊಂಡು ಕುಸಿದು ಬಿದ್ದ ಹೆಣ್ಣಾನೆ, ಕುಸಿದು ಬಿದ್ದ ಸ್ಥಳದಿಂದ ಮೇಲೇಳಲು ಆಗದೆ ಸುಮಾರು 100 ಮೀಟರ್ ತೆವಳಿಕೊಂಡು ಸಾಗಿತ್ತು. ಈ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಅಧಿಕಾರಿಗಳು ಆನೆಯನ್ನು ಮೇಲೆತ್ತಲು ಶುಕ್ರವಾರ ದುಬಾರೆಯಿಂದ ನಾಲ್ಕು ಸಾಕಾನೆಗಳನ್ನು ತರಿಸಿದ್ದರು. ಅವುಗಳು ನಿತ್ರಾಣಗೊಂಡ ಆನೆಯನ್ನು ಮೇಲೇಳಿಸಲು ಸಾಧ್ಯವಾಗದೆ ಅಸಹಾಯಕ ಸ್ಥಿತಿ ನಿರ್ಮಾಣವಾಗಿತ್ತು.
Advertisement
ಆರ್‍ಎಫ್‍ಒ ಅನನ್ಯಕುಮಾರ್, ವೈದ್ಯಾಧಿಕಾರಿ ಮುಜೀಬ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ತಕ್ಷಣ ಚಿಕಿತ್ಸೆ ಮುಂದುವರಿಸಿದ್ದರು. ಅರಣ್ಯ ಇಲಾಖೆ ಸಿಬ್ಬಂದಿ ಬಾಳೆಹಣ್ಣು, ನೀರು, ಭತ್ತದ ಹುಲ್ಲು ಸೇರಿದಂತೆ ಆಹಾರ ಪದಾರ್ಥಗಳನ್ನು ನೀಡಿದರೂ ಚೇತರಿಸಿಕೊಳ್ಳದ ಕಾಡಾನೆಗೆ ಗ್ಲುಕೋಸ್ ನೀಡಿ ಚಿಕಿತ್ಸೆ ಮುಂದುವರಿಸಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಕಾಡಾನೆ ಇಂದು ಬೆಳಗ್ಗೆ ಮೃತಪಟ್ಟಿದೆ.