ಮೈಸೂರಿನಲ್ಲಿ ಅದ್ಧೂರಿಯಾಗಿ ದಸರಾ ಆಚರಣೆ ನಡೆಯುವಂತೆ ಕೊಡಗಿನ ಮಡಿಕೇರಿ ದಸರಾ ಆಚರಣೆಯೂ ಅಷ್ಟೇ ಪ್ರಸಿದ್ಧಿ. ಮೈಸೂರು ದಸರಾ ಬೆಳಗ್ಗೆ ಆರಂಭವಾಗಿ ಸಂಜೆ ಸೂರ್ಯಾಸ್ತದ ವೇಳೆಗೆ ಪೂರ್ಣಗೊಂಡರೆ ಮಡಿಕೇರಿ ದಸರಾ ಆರಂಭವಾಗುವುದೇ ರಾತ್ರಿಯ ವೇಳೆ. ಹಾಗಾಗಿ ದಸರಾ ಮೈಸೂರಿನಲ್ಲಿ ಆರಂಭವಾಗಿ ಮಡಿಕೇರಿಯಲ್ಲಿ ಮುಳುಗುತ್ತದೆ ಎಂಬ ಮಾತು ಚಾಲ್ತಿಯಲ್ಲಿದೆ. ಇತರ ಹಿನ್ನೆಲೆ ಕೂಡ ಅಷ್ಟೇ ವಿಸ್ಮಯ ಮತ್ತು ಕೌತುಕವಾಗಿದೆ. ಈ ಬಗ್ಗೆ ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ…
ರೂಢಿಗೆ ಬಂದಿದ್ದು ಹೇಗೆ?
ನೂರಾರು ವರ್ಷಗಳ ಹಿಂದೆ ಶಿವಮೊಗ್ಗದ ಇಕ್ಕೇರಿಯಿಂದ ಕೊಡಗಿನ ಹಾಲೇರಿಗೆ ಬಂದು ನೆಲೆಸಿದ ಹಾಲೇರಿ ವಂಶಸ್ಥರು ವಿಜಯದಶಮಿ ಆಚರಣೆ ಮಾಡುತ್ತಿದ್ದರು. ಕೊಡಗನ್ನು ಆಳಿದ ದೊಡ್ಡವೀರರಾಜೇಂದ್ರ ಮಹಾರಾಜರು ಸಹಾ ಆಯುಧಪೂಜೆ, ಶ್ರೀದೇವಿಯ ಆರಾಧನೆ ಸೇರಿದಂತೆ ನವರಾತ್ರಿ ಉತ್ಸವ ಆಚರಿಸುತ್ತಿದ್ದರು ಎಂಬುದಕ್ಕೆ ಅನೇಕ ಉಲ್ಲೇಖಗಳಿವೆ.
ಇನ್ನು ಜನಪದ ಉಲ್ಲೇಖದ ಪ್ರಕಾರ, ಸುಮಾರು 300 ವರ್ಷಗಳ ಹಿಂದೆ ಮಡಿಕೇರಿಯ ಸುತ್ತಮುತ್ತ ಭಾರೀ ಸಾಂಕ್ರಾಮಿಕ ರೋಗ ತಲೆದೋರಿ ನೂರಾರು ಮಂದಿ ಸಾವನ್ನಪ್ಪಿದ್ದರಂತೆ, ಆಗ ಊರಿನ ಜನರೆಲ್ಲಾ ಸೇರಿ ತಮ್ಮ ಊರಿನ ಶಕ್ತಿದೇವತೆಗಳ ಮೊರೆ ಹೋದರಂತೆ. ಊರ ಜನರ ಮೊರೆ ಆಲಿಸಿದ ಶಕ್ತಿದೇವತೆಗಳು ರೋಗ ದೂರ ಮಾಡಿದವಂತೆ. ಅಂದಿನಿಂದ ಪ್ರತಿವರ್ಷವೂ ನವರಾತ್ರಿಯ 9 ದಿನಗಳ ಕಾಲ ಈ ಶಕ್ತಿದೇವತೆಗಳ ಕರಗ ಉತ್ಸವ ಆಚರಿಸಲಾಗುತ್ತದೆ. ಆ 9 ದಿನಗಳ ಕಾಲ ನಗರ ಪ್ರದಕ್ಷಿಣೆ ಮಾಡಿ ಭಕ್ತರಿಗೆ ದೇವತೆಗಳು ಆಶೀರ್ವಾದ ಮಾಡುತ್ತವೆ ಅನ್ನೋದು ನಂಬಿಕೆ. ಅದಕ್ಕಾಗಿ ಇಲ್ಲಿ ಪ್ರತಿವರ್ಷವೂ ವಿಜಯದಶಮಿಯ ಮುನ್ನಾ ದಿನ ಶಕ್ತಿದೇವತೆಗಳ ಆರಾಧನೆ ಮಾಡಲಾಗುತ್ತದೆ.
ಪೌರಾಣಿಕ ಹಿನ್ನೆಲೆಯೂ ಉಂಟು
ಪೌರಾಣಿಕ ಹಿನ್ನೆಲೆಯ ಪ್ರಕಾರ, ಈ ಹಿಂದೆ ಪಾರ್ವತೀ ದೇವಿ ದುಷ್ಟ ಸಂಹಾರ ಮಾಡಲು ಹೊರಡುವ ಮುನ್ನ ಮಹಾವಿಷ್ಣುವನ್ನ ಭೇಟಿ ಮಾಡಿದಳಂತೆ. ಆಗ ಮಹಾವಿಷ್ಣು ತನ್ನ ಆಯುಧಗಳಾದ ಶಂಖ, ಚಕ್ರ, ಗಧೆ ಮತ್ತು ಪದ್ಮಗಳನ್ನು ಪಾರ್ವತಿದೇವಿಗೆ ಕೊಟ್ಟು ಕಳುಹಿಸಿದನಂತೆ. ಆಗ ಪಾರ್ವತೀ ದೇವಿ ವಿವಿಧ ದೇವತೆಗಳ ರೂಪ ತಾಳಿ, ಅದೇ ಆಯುಧಗಳಿಂದ ಆ ರಾಕ್ಷಸರನ್ನು ಸಂಹರಿಸಿದಳಂತೆ. ಹಾಗಾಗಿ ಅಂದಿನಿಂದ ಪ್ರತೀವರ್ಷವೂ ಆ ಊರಿನ ನಾಲ್ಕು ಶಕ್ತಿ ದೇವತೆಗಳಾದ ಕಂಚಿ ಕಾಮಾಕ್ಷಿ, ಕುಂದುರುಮೊಟ್ಟೆ ಚೌಟಿಮಾರಿಯಮ್ಮ, ದಂಡಿನ ಮಾರಿಯಮ್ಮ, ಕೋಟೆ ಮಾರಿಯಮ್ಮನ ಕರಗದ ಉತ್ಸವಗಳನ್ನು ಅಚರಿಸುವ ಪದ್ದತಿ ಆರಂಭವಾಯಿತು ಎನ್ನುವುದು ಸ್ಥಳೀಯರ ನಂಬಿಕೆಯಾಗಿದೆ.