ಮಡಿಕೇರಿ: ಐತಿಹಾಸಿಕ ಮಡಿಕೇರಿ ದಸರಾದ ದಶಮಂಟಪ ಮೆರವಣಿಗೆಗೆ ಕ್ಷಣಗಣನೆ ಆರಂಭಗೊಂಡಿದೆ. ಈ ಬಾರಿ ಅದ್ಧೂರಿ ದಸರಾ ಆಚರಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ನಗರದ 10 ಪ್ರಮುಖ ದೇವಾಲಯಗಳಿಂದ ಸಿದ್ಧಗೊಳ್ಳುತ್ತಿರುವ ದಶಮಂಟಪಗಳ ಪ್ರದರ್ಶನಕ್ಕಾಗಿ ಸಾವಿರಾರು ಜನರು ಕಾದು ಕುಳಿತಿದ್ದಾರೆ.
ಈ ಬಾರಿ ಪಂಚಮುಖಿ ಆಂಜನೇಯನ ದರ್ಶನ, ನರಸಿಂಹನಿಂದ ಹಿರಣ್ಯ ಕಶಿಪು ವಧೆ, ಮಹಿಷಾಸುರ ಮರ್ಧಿನಿ, ಸುಬ್ರಹ್ಮಣ್ಯನಿಂದ ತಾರಕಾಸುರ ವಧೆ, ಅರ್ಧನಾರೀಶ್ವರ ದರ್ಶನ, ತ್ರಿಪುರಾಸುರ ವಧೆ ಹೀಗೆ ನಾನಾ ಕಥಾ ಭಾಗಗಳನ್ನು ಬೃಹತ್ ಧ್ವನಿ ಬೆಳಕಿನ ಸಂಯೋಜನೆಗಳೊಂದಿಗೆ ಕೃತಕವಾಗಿ ತಯಾರಿಸಿದ, ಟ್ಯಾಬ್ಲೋಗಳ ಪ್ರದರ್ಶನ ಎಲ್ಲರನ್ನು ಬೆರಗುಗೊಳಿಸಲಿದೆ.
Advertisement
Advertisement
ರಾತ್ರಿ 11 ಗಂಟೆ ನಂತರ ಆರಂಭಗೊಳ್ಳುವ ದಶಮಂಟಪಗಳ ಪ್ರದರ್ಶನ ಮುಂಜಾನೆಯವರೆಗೂ ಸಂಚರಿಸಿ ಪ್ರದರ್ಶನ ನೀಡಲಿವೆ. ಲಕ್ಷಾಂತರ ರೂಪಾಯಿಗಳನ್ನು ಖರ್ಚುಮಾಡಿ ದಶಮಂಟಪಗಳನ್ನು ಸಿದ್ಧಗೊಳಿಸುವ ಕಾರ್ಯ ಈಗಾಗಲೇ ಮುಗಿದಿದ್ದು, ಅಂತಿಮ ತಯಾರಿ ನಡೆಯುತ್ತಿದೆ. ಹಗಲಿನಲ್ಲಿ ಮೈಸೂರು ದಸರಾ ರಾತ್ರಿ ಮಡಿಕೇರಿ ದಸರಾ ಎಂದೇ ಪ್ರಸಿದ್ಧಗೊಂಡಿರುವ ಮಂಜಿನ ನಗರಿ ಮಡಿಕೇರಿಯಲ್ಲಿ ರಾತ್ರಿ ವರ್ಣರಂಜಿತ ದಶಮಂಟಪ ಪ್ರದರ್ಶನಕ್ಕೆ ಕ್ಷಣಗಣನೆ ಆರಂಭಗೊಂಡಿದ್ದು ಜನರು ರಾತ್ರಿಯ ಅದ್ಭುತ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ.
Advertisement
Advertisement
ಪೌರಾಣಿಕ ಹಿನ್ನೆಲೆಯ ಕತೆಯನ್ನು ಪ್ರದರ್ಶನಮಾಡಲು ನಾಲ್ಕು ಶಕ್ತಿದೇವತೆಗಳ ದೇವಾಲಯ ಸಮಿತಿಗಳು ಸೇರಿದಂತೆ 10 ದೇವಾಲಯಗಳೂ ಕೂಡ ಒಂದೊಂದು ಕಥೆಯನ್ನು ಆಯ್ಕೆಮಾಡಿಕೊಂಡು ಪ್ರದರ್ಶನ ನೀಡಲು ಸಿದ್ಧವಾಗಿದ್ದು, ರಾಜ್ಯದ ವಿವಿಧೆಡೆಯಿಂದ ಆಗಮಿಸುವ ಲಕ್ಷಾಂತರ ಜನರು ದಶಮಂಟಪ ಪ್ರದರ್ಶನ ವೀಕ್ಷಣೆಗೆ ಕಾಯುತ್ತಿದ್ದಾರೆ.