ಮಡಿಕೇರಿ: ದಕ್ಷಿಣದ ಕಾಶ್ಮೀರ ಎಂದು ಹೆಸರುವಾಸಿಯಾಗಿದ್ದ ಕೊಡಗು ಇದೀಗ ಅಕ್ಷರಶಃ ಪ್ರಕೃತಿ ವಿಕೋಪಕ್ಕೆ ನಲುಗಿ ಹೋಗಿದೆ. ಹಿಂದೆಂದೂ ಕಾಣದ ಜಲಪ್ರಳಯಕ್ಕೆ ಕೊಡಗು ತತ್ತರಿಸಿದೆ. ಆನೇಕರು ಮನೆ ಕಳೆದುಕೊಂಡು ಬೀದಿಪಾಲಾಗಿದ್ದಾರೆ. ಆದೇ ರೀತಿ ಆನೇಕ ವರ್ಷಗಳಿಂದ ವಿಜೃಂಭಣೆಯಿಂದ ನಡೆಸಿಕೊಂಡು ಬರುತ್ತಿದ್ದ ಮಡಿಕೇರಿ ದಸರಾ ಕೂಡ ಈ ಬಾರೀ ತನ್ನ ಅಂದ ಕಳೆದುಕೊಂಡು ನೋವಿನ ನಡುವೆ ನಾಡಹಬ್ಬ ಆಚರಿಸುವ ಪರಿಸ್ಥಿತಿಗೆ ತಲುಪಿದೆ.
ಮಡಿಕೇರಿಯ ದಸರಾ ರಾಜ್ಯದ ಗಮನ ಸೆಳೆದಿತ್ತು. ಅದೆಷ್ಟೋ ವರ್ಷದಿಂದ ದಸರಾ ತನ್ನ ವೈಶಿಷ್ಟ್ಯತೆಯನ್ನು ಉಳಿಸಿಕೊಂಡಿತ್ತು. ಮಡಿಕೇರಿಯ 10 ಶಕ್ತಿ ದೇವಾಲಯ ಸಮಿತಿಗಳ ದಶಮಂಟಪಗಳು ರಾಜಬೀದಿಯಲ್ಲಿ ಸಾಗಿ ಅಕರ್ಷಿಸುತ್ತಿತ್ತು. ಐತಿಹಾಸಿಕ ಪುರಾಣ ಕಥೆಗಳನ್ನು ಸಾರುವ ಮಂಟಪಗಳು ಎಲ್ಲರ ಗಮನ ಸೆಳೆಯುತ್ತಿತ್ತು. ದಶಮಂಟಪಗಳನ್ನು ನೋಡಲೆಂದೇ ದೂರದೂರಿನಿಂದ ಜನರು ಬರುತ್ತಿದ್ದರು. ಆದರೆ ಈ ಬಾರಿ ದಸರಾ ಹೇಗೆ ನಡೆಸುವುದು ಎಂಬ ಥಳಮಳ ಇದೀಗ ಸಮಿತಿಗಳಲ್ಲಿ ಪ್ರಾರಂಭಗೊಂಡಿದೆ.
ಇಂದಿನವರೆಗೂ ಜನರ ದೇಣಿಗೆಯ ಮೂಲಕವೇ ದಸರಾ ನಡೆಯುತ್ತಿತ್ತು. ಇದರ ಜೊತೆಗೆ ಸರ್ಕಾರ ನೀಡುವ ಹಣವನ್ನು ಬಳಕೆ ಮಾಡಿಕೊಳ್ಳಲಾಗುತ್ತಿತ್ತು. ಈ ಬಾರಿ ಜಲಪ್ರಳಯದಲ್ಲಿ ನೊಂದಿರುವ ಜನರ ಬಳಿ ಹೇಗೆ ಹಣ ಕೇಳುವುದು ಎಂಬ ನೋವು ಕೂಡ ಸಮಿತಿ ಮುಂದಿದೆ. ಆದರೆ ನೋವಿನ ನಡುವೆಯೇ ದಸರಾ ಆಚರಣೆಗೆ ಚಾಲನೆ ನೀಡಲಾಗಿದೆ.
ಮಡಿಕೇರಿಯ ಶ್ರೀರಾಮ ಮಂದಿರದಲ್ಲಿ ಸಕಲ ಪೂಜಾ ವಿಧಿವಿಧಾನದ ಮೂಲಕ ಇಂದು ದಶಮಂಟಪಗಳ ಕಾರ್ಯಚಟುವಟಿಕೆಗಳಿಗೆ ಚಾಲನೆ ನೀಡಲಾಯಿತು. 10 ಮಂಟಪಗಳ ಸಮಿತಿ ಅಧ್ಯಕ್ಷರು ದೇವರಿಗೆ ಪೂಜೆ ಸಲ್ಲಿಸಿದರು. ಇನ್ನೂ ನೋವಿನ ನಡುವೆ ನಡೆಯುತ್ತಿರುವ ದಸರೆಗೆ ಸರ್ಕಾರ ಅನುದಾನ ನೀಡಬೇಕು. ಜನರ ಬಳಿ ದೇಣಿಗೆ ಸಂಗ್ರಹ ಮಾಡಲು ಸಾಧ್ಯವಿಲ್ಲ. ಅದರಿಂದ ಜಿಲ್ಲೆಯ ಉಸ್ತುವಾರಿ ಸಚಿವ ಹಾಗೂ ಶಾಸಕರು ಸರ್ಕಾರದೊಂದಿಗೆ ಚರ್ಚಿಸಿ ಸಮಿತಿಯ ಜತೆಗೆ ಕೈಜೋಡಿಸಬೇಕು. ದಸರಾ ಆಚರಣೆಯ ವೇಳೆ ವಿಜೃಂಭಣೆಗೆ ಬ್ರೇಕ್ ಹಾಕಿ ಕೇವಲ ಧಾರ್ಮಿಕ ಕಾರ್ಯಗಳನ್ನು ನಡೆಸಲಾಗುತ್ತದೆ ಎಂದು ದಶಮಂಟಪ ಸಮಿತಿ ಅಧ್ಯಕ್ಷ ರವಿ ತಿಳಿಸಿದ್ದಾರೆ.
ಇದೇ ವೇಳೆ ಯಾವುದೇ ಕಾರಣಕ್ಕೂ ಆಚರಣೆ ಕೈಬಿಡಲು ಸಾಧ್ಯವಾಗುವುದಿಲ್ಲ 4 ಶಕ್ತಿ ದೇವತೆಗಳಾದ ಕುಂದುರು ಮೊಟ್ಟೆ ಚೌಟಿ ಮಾರಿಯಮ್ಮ, ಕಂಚಿ ಕಾಮಾಕ್ಷಿ, ದಂಡಿನ ಮಾರಿಯಮ್ಮ, ಕೋಟೆ ಮಾರಿಯಮ್ಮ ದೇವಾಲಯಗಳ ಕರಗ ಹೊರುವ ಮೂಲಕ ಆಚರಣೆಗೆ ಚಾಲನೆ ನೀಡಲಾಗಿದ್ದು, ದುಂದುವೆಚ್ಚಕ್ಕೆ ಕಡಿವಾಣ ಹಾಕಿ ಧಾರ್ಮಿಕ ಆಚರಣೆಗಳನ್ನು ಮಾತ್ರ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv