ಸ್ವಾತಂತ್ರ್ಯದ ಬಳಿಕ ಮಡಿಕೇರಿ ದಸರಾ ಸಾಗಿ ಬಂದ ಹಾದಿ

Public TV
4 Min Read
Madikeri Dasara 3 2

ಮೈಸೂರು ದಸರಾಗೆ (Mysuru Dasara) ತೆರೆ ಬೀಳುತ್ತಿದ್ದಂತೆ ಇತ್ತ ಮಡಿಕೇರಿ ದಸರಾ (Madikeri Dasara) ಆರಂಭವಾಗುತ್ತದೆ. ಮೈಸೂರು ದಸರಾ ಸಂಜೆ ಮುಕ್ತಾಯಗೊಂಡರೆ ಮಡಿಕೇರಿ ದಸರಾ ಮೆರವಣಿಗೆ ಆರಂಭವಾಗುವುದೇ ರಾತ್ರಿ. ಮೈಸೂರು ದಸರಾದಂತೆ ಮಡಿಕೇರಿ ದಸರಾ ಕೂಡ ಜನರ ಕಣ್ಮನ ಸೆಳೆಯುತ್ತದೆ. ದಶಮಂಟಪಗಳ ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲು ಜನರು ದೂರದ ಊರುಗಳಿಂದ ಆಗಮಿಸುತ್ತಾರೆ. ಸ್ವಾತಂತ್ರ್ಯ ದೊರೆತ ಬಳಿಕ ಮಡಿಕೇರಿ ದಸರಾ ಸಾಗಿ ಬಂದ ಹಾದಿ ಹೇಗಿತ್ತು ಎಂಬ ಬಗ್ಗೆ ಕಿರು ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ರಾಜರ ಕಾಲದಲ್ಲಿ ನವರಾತ್ರಿ ಉತ್ಸವ ಮಡಿಕೇರಿ ನಗರದ ಅರಮನೆಯ ಆವರಣದಲ್ಲಿ ನಡೆಯುತ್ತಿತ್ತು .ನಂತರ 1947ರ ಸ್ವಾತಂತ್ರ್ಯಾನಂತರ ಮಡಿಕೇರಿ ದಸರಾವು ಯಾವುದೇ ಅಡೆ ತಡೆಯಿಲ್ಲದೆ ನಡೆದುಕೊಂಡು ಬಂತು. ಜನಮನ ಸೆಳೆದಿರುವ ಮಡಿಕೇರಿಯ ದಸರಾ ಉತ್ಸವದ ರೂವಾರಿ ರಾಜಸ್ಥಾನದ ಮೂಲದ ಭೀಮ್ ಸಿಂಗ್. 1950 ರ ವರ್ಷಗಳಲ್ಲಿ ನವರಾತ್ರಿಯ ಕೊನೆಯ ದಿನ ವಿಜಯದಶಮಿಯಂದು ಭೀಮ್ ಸಿಂಗ್‌ ಅವರು ತಮ್ಮ ತಲೆಯ ಮೇಲೆ ದೇವರ ಮೂರ್ತಿಯನ್ನು ಇಟ್ಟುಕೊಂಡು ಮನೆ ಮನೆಗೆ ತೆರಳಿ ದೇವರಿಗೆ ಪೂಜೆಯನ್ನು ಮಾಡಿಸಿಕೊಳ್ಳುತಿದ್ದರು. ನಂತರ ದೇವರ ಮೂರ್ತಿ ಪಲ್ಲಕ್ಕಿಯ ಮೇಲೆ ಹೋಗುವಂತಾಯಿತು. 

Madikeri Dasara 4 1

1958ರಲ್ಲಿ ಪ್ರಥಮ ಬಾರಿಗೆ ಮೈಸೂರಿನಿಂದ ಶಿಲ್ಪಕಲಾವಿದರಿಂದ ಮಾಡಿಸಿ ತರಿಸಿದ ಚಾಮುಂಡೇಶ್ವರಿ ಮೂರ್ತಿಯನ್ನು ಟ್ರಾಕ್ಟರ್ ಮೇಲೆ ಇರಿಸಿ ಹೂವಿನಿಂದ ಅಲಂಕಾರ ಮಾಡಿದ ಮಂಟಪ ಮೆರವಣಿಗೆ ವಾದ್ಯಗಳೊಂದಿಗೆ ಮಡಿಕೇರಿ ನಗರದ ಪ್ರಮುಖ ಬೀದಿಗಳಲ್ಲಿ ನಡೆದು ದಸರಾ ಉತ್ಸವಕ್ಕೆ ಚಾಲನೆ ನೀಡಲಾಯಿತು. ನಂತರದ ದಿನಗಳಲ್ಲಿ ಮಡಿಕೇರಿಯಲ್ಲಿರುವ ದೇವಾಲಯಗಳ ಪೈಕಿ, ಪೇಟೆ ಶ್ರೀರಾಮ ಮಂದಿರ, ದೇಚೂರು ಶ್ರೀ ರಾಮ ಮಂದಿರ, ಬಾಲಕ ಶ್ರೀ ರಾಮ ಮಂದಿರ ಮತ್ತು ಭೀಮ್ ಸಿಂಗ್ ರವರ ರಘುರಾಮ ಮಂದಿರಗಳ ನಾಲ್ಕು ಮಂಟಪಗಳು ಅಂದಿನ ಮಡಿಕೇರಿಯ ದಸರಾದ ಆಕರ್ಷಕ ಮಂಟಪಗಳಾಗಿದ್ದವು. 

ದಸರಾ ಮಂಟಪಗಳಲ್ಲಿ ಐತಿಹಾಸಿಕವಾಗಿ ಶಿವಾಜಿ ಖಡ್ಗವನ್ನು ದೇವಿ ಅಂಬಾ ಭಾವಾನಿಯಿಂದ ಪಡೆಯುವ ಮೂರ್ತಿ, ಭಾರತ ಮಾತೆಯ ಪದತಲದಲ್ಲಿ ಮಹಾತ್ಮ ಗಾಂಧಿ ಚರಕದಲ್ಲಿ ನೂಲು ತೆಗೆಯುತ್ತಿರುವ ಮೂರ್ತಿ, ಪೌರಾಣಿಕವಾಗಿ ಶ್ರೀ ರಾಮ ಪಟ್ಟಾಭಿಷೇಕ, ಗಣಪತಿಯಿಂದ ಚೌತಿ ಚಂದ್ರನ ಗರ್ವ ಭಂಗ, ಮತ್ತ್ವ ಅವತಾರ, ಗಜೇಂದ್ರ ಮೋಕ್ಷ, ಮಹಿಷಾಸುರ ಮರ್ಧಿನಿ, ನರಸಿಂಹ ಅವತಾರ ಇತ್ಯಾದಿ ಹಲವಾರು ಪುರಾಣ ಕಥೆಗಳನ್ನು ಅಳವಡಿಸಿಕೊಂಡು ದಸರಾ ಆಚರಿಸಲಾಗುತಿತ್ತು. 

Madikeri Dasara 7

1967ರಲ್ಲಿ ಭಾರತ- ಚೀನಾ ಯುದ್ಧದ ಸಂದರ್ಭದಲ್ಲಿಯೂ ಮಡಿಕೇರಿ ದಸರಾ ಮುಂದುವರೆದುಕೊಂಡು ಬಂತು. 1970 ರ ದಶಕಗಳಲ್ಲಿ ಇನ್ನೂ ಹಲವು ದೇವಾಲಯದ ಮಂಟಪಗಳು ಸೇರ್ಪಡೆಯಾಗಿ ಹತ್ತು ಮಂಟಪಗಳೊಂದಿಗೆ ದಸರಾ ಉತ್ಸವ ಹೆಚ್ಚು ಹೆಚ್ಚು ಆಕರ್ಷಣೀಯವಾಯಿತು. ಮಡಿಕೇರಿಯ ದಸರಾ ನಡೆಯುತ್ತಿರುವುದು ಜನರು ಭಕ್ತಿ ಪ್ರೀತಿಯಿಂದ ನೀಡುತ್ತಿರುವ ವಂತಿಗೆಯ ಹಣದಿಂದ. ಕರ್ನಾಟಕದ ಮುಖ್ಯ ಮಂತ್ರಿಯಾಗಿದ್ದ ಮಾನ್ಯ ಆರ್. ಗುಂಡೂರಾವ್ ರವರು ಮಡಿಕೇರಿ ದಸರ ಉತ್ಸವಕ್ಕೆ 1980 ರಲ್ಲಿ ಕರ್ನಾಟಕ ಸರ್ಕಾರದಿಂದ ಲಕ್ಷ ರೂಪಾಯಿಗಳನ್ನು ಕೊಡುಗೆಯಾಗಿ ನೀಡುವಂತೆ ವ್ಯವಸ್ಥೆ ಮಾಡಿದರು. ನಂತರ ಪ್ರತಿವರ್ಷ ಸಹಾಯಧನವನ್ನು ಹೆಚ್ಚಿಸುತ್ತಾ ಬಂದು ಇಂದಿನ ವರ್ಷಗಳಲ್ಲಿ ಒಂದು ಕೋಟಿ ರೂ. ನೀಡಲಾಗುತ್ತಿದೆ. ಪ್ರತಿಯೊಂದು ಮಂಟಪಗಳಿಗೆ 2,50,000 ರೂ. ಸಹಾಯಧನ ನೀಡಲಾಗುತ್ತದೆ. ಇಂದಿನ ದಿನಗಳಲ್ಲಿ ಪ್ರತಿಯೊಂದು ಮಂಟಪಕ್ಕೆ ಸುಮಾರು 4 ರಿಂದ 24 ಲಕ್ಷದವರೆಗೆ ಖರ್ಚು ತಗಲುತ್ತದೆ.

Madikeri Dasara 5 1

ತಾಂತ್ರಿಕವಾಗಿ ಚಲನವಲನಗಳನ್ನು ನೀಡಿ ಧ್ವನಿ ಬೆಳಕಿನ ವ್ಯವಸ್ಥೆಯೊಂದಿಗೆ, ಕೃತಕ ಮೋಡಗಳು, ಮಿಂಚು, ಧೂಮ ಸೃಷ್ಟಿಗಳು ಒಂದಕಿಂತ ಒಂದು ಮೀರಿಸುವಂತಿರುತ್ತದೆ. ವಿದ್ಯುತ್ ದೀಪಾಲಂಕಾರದ ಬೃಹತ್ ಸೆಟ್ಟಿಂಗ್ಸ್‌ಗಳು ಬೆಂಗಳೂರು, ಮಂಗಳೂರು, ತಮಿಳುನಾಡಿನ ದಿಂಡಿಗಲ್, ಚೆನ್ನೈನ ಸಿನೆಮಾ ಸ್ಟುಡಿಯೋಗಳಿಂದ ಬರುತ್ತದೆ. ಒಂದು ಮಂಟಪ ನಿರ್ಮಾಣ ಮಾಡಲು 2 -3 ತಿಂಗಳಿನಿಂದ ಪೂರ್ವ ತಯಾರಿ ನಡೆಯುತ್ತದೆ. ವಿವಿಧ ವಿನ್ಯಾಸದ ಮಂಟಪಗಳಲ್ಲಿ ವಿವಿಧ ಭಂಗಿಗಳಲ್ಲಿ ವಿವಿಧ ಕಥಾ ಪ್ರಸಂಗಗಳ ದೇವತಾ ಮೂರ್ತಿಗಳು 8 ರಿಂದ 15 ಅಡಿಗಳವರೆಗೆ ಇರುತ್ತದೆ. ಮಂಟಪಗಳ ಮುಂದೆ ಮೈಸೂರು ಪ್ಯಾಲೆಸ್ ಬ್ಯಾಂಡ್, ಕೇರಳದ ತ್ರಿಶೂರಿನಿಂದ ಬೆಂಕಿಯೊಂದಿಗೆ ಸರಸವಾಡುತ್ತ ನುಡಿಸುವ ಗರಡಿ ಬ್ಯಾಂಡ್‌ಗಳು ಉತ್ಸವದಲ್ಲಿ ಭಾಗಿಯಾಗಿರುವ ಸಾವಿರಾರು ಯುವಕರು ರಾತ್ರಿಯಿಂದ ಬೆಳಗಿನವರೆಗೆ ಮೆರವಣಿಗೆಯ ಜೊತೆಗೆ ಕುಣಿದು ಕುಪ್ಪಳಿಸಿ ಆನಂದಿಸುತ್ತಾರೆ.

ಮಡಿಕೇರಿ ದಸರಾ ವೀಕ್ಷಿಸಲು ಬೇರೆ ಬೇರೆ ಊರುಗಳಿಂದ ಲಕ್ಷಾಂತರ ಮಂದಿ ಬರುತ್ತಾರೆ. ವಿಶ್ವ ವಿಖ್ಯಾತ ಮೈಸೂರಿನ ದಸರಾ ಉತ್ಸವದ ಜಂಬೂ ಸವಾರಿಯ ಮೆರವಣಿಗೆಯನ್ನು ನೋಡಿದ ನಂತರ ಜನ ಪ್ರವಾಹದಂತೆ ಮೈಸೂರಿನಿಂದ 120 ಕಿ.ಮಿ. ದೂರದಲ್ಲಿರುವ ಮಡಿಕೇರಿ ದಸರಾ ವೀಕ್ಷಿಸಲು ಬರುತ್ತಾರೆ.  ಜಾತ್ರಾ ವಿಶೇಷವಾಗಿ ಹೆಚ್ಚಿನ ಸರ್ಕಾರಿ ಬಸ್‌ ವ್ಯವಸ್ಥೆ ಮಾಡಲಾಗುತ್ತದೆ.

ಮಡಿಕೇರಿ ನಗರದ ಪೌರಾಣಿಕ ಕಥಾ ಸಾರಾಂಶವುಳ್ಳ ಮಂಟಪಗಳು:
*ದೇಚೂರು ಶ್ರೀರಾಮ ಮಂದಿರ
*ದಂಡಿನ ಮಾರಿಯಮ್ಮ ದೇವಾಲಯ
*ಚೌಡೇಶ್ವರಿ ದೇವಾಲಯ
*ಕಂಚಿ ಕಾಮಾಕ್ಷಿ ದೇವಾಲಯ
*ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ  ದೇವಾಲಯ
*ಕೋಟೆ ಮಾರಿಯಮ್ಮ ದೇವಾಲಯ
*ಕೋಟೆ ಗಣಪತಿ ದೇವಾಲಯ
*ಕೋದಂಡರಾಮ ಮಂದಿರ ದೇವಾಲಯ
*ಕರವಾಲೆ ಭಗವತಿ ದೇವಾಸ್ಥಾನ

Madikeri Dasara 6 1

ಮಂಟಪಗಳು ತಮ್ಮ ತಮ್ಮ ಕಲಾ ಕೌಶಲ್ಯಗಳನ್ನು ಪ್ರದರ್ಶಿಸುತ್ತಾ ನಗರ ಬೀದಿಗಳಲ್ಲಿ ಸಾಗಿ ಎಲ್ಲಾ ಮನೆಗಳಿಂದ ಪೂಜೆಯನ್ನು ಸ್ವೀಕರಿಸಿ ಬೆಳಗಿನ ನಂತರ ರಾಜರ ಗದ್ದುಗೆಯ ಬಳಿ ಇರುವ ಬನ್ನಿ ಮಂಟಪದಲ್ಲಿ ನಾಲ್ಕು ಕರಗಗಳ ಸಮೇತ ಬನ್ನಿ ಕಡಿದು ಪೂಜೆ ಸಲ್ಲಿಸಿ ತಮ್ಮ ತಮ್ಮ ದೇವಾಲಯಗಳಿಗೆ ಹಿಂದಿರುಗುತ್ತದೆ. ಜಾತಿ, ಮತ, ಭೇದವಿಲ್ಲದೆ ದಸರಾ ಹಬ್ಬವು ಶಾಂತಿಪ್ರಿಯ ಮಡಿಕೇರಿಯಲ್ಲಿ ಶತಮಾನದಿಂದ ಸೌಹಾರ್ದತೆಯನ್ನು ಎತ್ತಿ ಹಿಡಿದು ವೈಭವಯುತವಾಗಿ ನಡೆದುಕೊಂಡು ಬರುತ್ತಿದೆ.

Share This Article