ಮಡಿಕೇರಿ: ಕೊರೊನಾ ವೈರಸ್ ಹರಡದಂತೆ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಜನರಿಗೆ ಅಗತ್ಯ ವಸ್ತುಗಳನ್ನು ತೆಗೆದುಕೊಳ್ಳಲು ಬಸ್ ನಿಲ್ದಾಣದಲ್ಲಿ ತರಕಾರಿ ಅಂಗಡಿಗಳನ್ನು ಓಪನ್ ಮಾಡಲಾಗಿತ್ತು. ಕಳೆದ ಎರಡು ದಿನಗಳಿಂದ ಮನೆಯಲ್ಲಿ ಇದ್ದ ಸಾರ್ವಜನಿಕರು ಇಂದು ಬೆಳಗ್ಗೆ ಅಂಗಡಿ ಮುಗ್ಗಟ್ಟುಗಳ ಮುಂದೆ ಎಂದಿನಂತೆ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ.
ಜನಸಾಮಾನ್ಯರಿಗೆ ಸಮಸ್ಯೆ ಅಗಬಾರದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ವಾರದ ಮೂರು ದಿನ ಸೋಮವಾರ, ಬುಧವಾರ ಹಾಗೂ ಶುಕ್ರವಾರ ಬೆಳಗ್ಗೆ 6 ಗಂಟೆಯಿಂದ 12 ಗಂಟೆಯವರೆಗೆ ಅಗತ್ಯ ವಸ್ತುಗಳನ್ನು ತೆಗೆದುಕೊಳ್ಳಬಹುದು ಎಂದು ತಿಳಿಸಿದ್ದರು.
ನಿಯಮಗಳನ್ನು ಜನರು ಪಾಲನೆ ಮಾಡಬೇಕು ಎಂದು ಮನವಿ ಮಾಡಿದರು. ಆದರೆ ಜನಸಾಮಾನ್ಯರು ಮಾತ್ರ ನಿಯಮಗಳನ್ನು ಗಾಳಿಗೆ ತೂರಿ ಎಂದಿನಂತೆ ಅಗತ್ಯ ವಸ್ತುಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಜಿಲ್ಲಾಡಳಿತ ಅಂಗಡಿ ಮುಂಗಟ್ಟುಗಳ ಮುಂದೆ ಜನರು ಅಂತರವನ್ನು ಕಾಯ್ದುಕೊಳ್ಳಲು ಸರ್ಕಲ್ ಹಾಕಿದ್ರು. ಆದರೂ ಜನರು ಒಬ್ಬರ ಮೇಲೆ ಒಬ್ಬರಂತೆ ಮುಗಿಬಿದ್ದು ವಸ್ತುಗಳನ್ನು ಕೊಂಡುಕೊಳ್ತಾ ಇದ್ದಾರೆ.
ಮಡಿಕೇರಿ ಮಾತ್ರವಲ್ಲದೆ ಕೊಡಗು ಜಿಲ್ಲೆಯ ಸೋಮವಾರಪೇಟೆ, ವಿರಾಜಪೇಟೆ, ಗೋಣಿಕೊಪ್ಪ ಹಾಗೂ ಶಾನಿವಾರಸಂತೆ ಭಾಗದಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ. ಪಕ್ಕದ ಮಂಗಳೂರು, ಕಾಸರಗೋಡಿನಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಗಡಿಭಾಗಗಳಲ್ಲಿ ಬಂದ್ ಮಾಡಿ ಕೊಡಗಿನ ಜನರು ಸೇಫ್ ಇರಬೇಕು ಎಂದು ಜಿಲ್ಲಾಡಳಿತ ಪೊಲೀಸ್ ಇಲಾಖೆ ಹಗಲು ಇರುಳು ಕೆಲಸ ಮಾಡುತ್ತಿದೆ. ಅದರೆ ಜನರು ಮಾತ್ರ ಯಾವುದೇ ನಿಯಮ ಇದ್ದರೂ ಕ್ಯಾರೇ ಮಾಡದೆ ಎಂದಿನಂತೆ ಜನಜೀವನ ನಡೆಸುತ್ತಿದ್ದಾರೆ.