ಕೊಡಗಿಗೆ ಸರ್ಕಾರದಿಂದಾಗಿರುವ ಅನ್ಯಾಯದ ವಿರುದ್ಧ ಗುಡುಗಿದ ಬಾಲಕ – ಸಿಎಂ ಎಚ್‍ಡಿಕೆ ಪ್ರತಿಕ್ರಿಯೆ ಏನು ಗೊತ್ತಾ?

Public TV
3 Min Read
cm kumara swamy kodagu

ಮಡಿಕೇರಿ: 7ನೇ ತರಗತಿ ಬಾಲಕನೊಬ್ಬ ಕೊಡಗಿಗೆ ಸರ್ಕಾರದಿಂದಾಗಿರುವ ಅನ್ಯಾಯದ ಬಗ್ಗೆ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸರ್ಕಾರದ ನಿರ್ಲಕ್ಷ್ಯ ಧೋರಣೆಯ ವಿರುದ್ಧ ವಿಡಿಯೋದಲ್ಲಿ ಬಾಲಕ ಕಿಡಿಕಾರಿದ್ದಾನೆ.

ಜಿಲ್ಲೆಯ ಮಡಿಕೇರಿ ತಾಲೂಕಿನ ನಾಪೋಕ್ಲು ಸಮೀಪದ ಎಮ್ಮೆಮಾಡು ಗ್ರಾಮದ ಉಮ್ಮರ್ ಎಂಬವರ ಪುತ್ರ ಫತಹ್ ಸರ್ಕಾರ ನೀತಿಯ ವಿರುದ್ಧ ಮಾತನಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆದ ಬಳಿಕ ಸದ್ಯ ಸಿಎಂ ಕುಮಾರಸ್ವಾಮಿ ಅವರು ಬಾಲಕನ ವಿಡಿಯೋ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ವಿಡಿಯೋದಲ್ಲಿ ನೇರ ಸಿಎಂ ಕುಮಾರಸ್ವಾಮಿ ಅವರನ್ನು ಪ್ರಶ್ನೆ ಮಾಡಿರುವ ಬಾಲಕ, ಸಿಎಂ ಸರ್ ಕೊಡಗನ್ನು ಯಾಕೆ ಆನಾಥ ಮಾಡಿದ್ದೀರಾ, ನಿಮಗೆ ಕೊಡಗಿನ ನೀರು ಬೇಕು ನಮಗೆ ಅಭಿವೃದ್ಧಿ ಬೇಡ್ವಾ, ವಿಪಕ್ಷ ನಾಯಕರೇ ನೀವು ಪ್ರಧಾನಿಗಳ ಗಮನಕ್ಕೆ ತರಬಹುದಲ್ಲ ಎಂದು ತನ್ನದೇ ಸ್ಟೈಲ್ ನಲ್ಲಿ ಜಿಲ್ಲೆಯ ಪ್ರಮುಖ ಸಮಸ್ಯೆಗಳ ಬಗ್ಗೆ ಗಮನ ಸೆಳೆದಿದ್ದಾನೆ.

kodagu boy

ಜಿಲ್ಲೆಯಿಂದ ಲಾಭ ಪಡೆದುಕೊಳ್ಳುವ ಸರ್ಕಾರ ಕೊಡಗನ್ನು ಮರೆತಿದೆ. ಕೊಡಗಿಲ್ಲಿ ನೂರಾರೂ ಸಮಸ್ಯೆಗಳಿವೆ ಇಡೀ ರಾಜ್ಯ ಸೇರಿದಂತೆ ನೆರೆ ರಾಜ್ಯಕ್ಕೆ ನೀರು ನೀಡುವುದು ಕೊಡಗು, ನಿಮಗೆ ನಮ್ಮ ನೀರು ಬೇಕು ನಮಗೆ ಅಭಿವೃದ್ಧಿ ಬೇಡ್ವಾ? ಅಲ್ಲದೇ ಜಿಲ್ಲೆಯ ರೈತರು ಬೆಳೆ ನಾಶದಿಂದ ಪರದಾಡುತ್ತಿದ್ದಾರೆ. ಮೊದಲು ಇಲ್ಲಿನ ರೈತರಿಗೆ ಪರಿಹಾರ ನೀಡಿ ಎಂದು ಆಗ್ರಹಿಸಿದ್ದಾನೆ. ಮಳೆಯಿಂದ ಕೊಡಗಿನ ಮಕ್ಕಳಿಗೆ ಕಷ್ಟವಾಗಿದೆ. ಶಾಲೆಗೆ ತೆರಳಲು ಸಮಸ್ಯೆಯಾಗಿದೆ. ಮಳೆಯ ಅಬ್ಬರಕ್ಕೆ ಬೆಳೆಗಳಿಗೆ ನಷ್ಟ ಉಂಟಾಗಿದೆ. ಮೊದಲು ರೈತಪರ ನಿಲುವು ಪ್ರದರ್ಶಿಸಿ ಎಂದು ಮನವಿ ಮಾಡಿದ್ದಾನೆ.

ವಿಡಿಯೋದಲ್ಲಿ ವಿಪಕ್ಷ ನಾಯಕರಿಗೂ ಸಲಹೆ ನೀಡಿರುವ ಬಾಲಕ, ಯಡಿಯೂರಪ್ಪ ಜೀ ನೀವು ಸದನದ ಹೊರಗೆ, ಒಳಗೆ ಕಿರುಚಾಡಿದರೆ ಯಾವುದೇ ಪ್ರಯೋಜನವಿಲ್ಲ, ಮೊದಲು ಪ್ರಧಾನಿ ಮೋದಿ ಅವರೊಂದಿಗೆ ಮಾತನಾಡಿ ಕೊಡಗಿನ ಬಗ್ಗೆ ಗಮನ ಸೆಳೆಯಿರಿ ಎಂದು ಹೇಳಿದ್ದಾನೆ.

ರಾಜ್ಯ ಸರ್ಕಾರದ ವಿರುದ್ದ ತನ್ನದೇ ಶೈಲಿಯಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಈ ಬಾಲಕ ಇದೀಗ ಕೊಡಗಿನ ಜನರ ಪ್ರಶಂಸೆಗೂ ಪಾತ್ರವಾಗಿದ್ದಾನೆ. ಸಾಮಾಜಿಕ ಜಾಲತಾಣವನ್ನು ಇಂದು ದುರ್ಬಳಕೆ ಮಾಡಿಕೊಳ್ಳುವರೇ ಹೆಚ್ಚು ಆದರೆ ಇದರ ನಡುವೆ ಈ ಬಾಲಕ ವಿಡಿಯೋದಲ್ಲಿ ಜಿಲ್ಲೆಯ ಸಮಸ್ಯೆಗಳನ್ನು ತಿಳಿಸಿ ರಾಜ್ಯದ ಮುಖ್ಯ ಮಂತ್ರಿಗಳ ಗಮನ ಸೆಳೆದಿದ್ದಾನೆ.

ಸಿಎಂ ಪ್ರತಿಕ್ರಿಯೆ: ಕೊಡಗು ಜಿಲ್ಲೆಯಲ್ಲಿ ದೊಡ್ಡ ಮಟ್ಟದಲ್ಲಿ ಮಳೆಯಾಗಿದ್ದು, ಸರ್ಕಾರ ಇದನ್ನು ನಿರ್ಲಕ್ಷ್ಯವಹಿಸಿದೆ ಎಂದು ಬಾಲಕ ಆರೋಪ ಮಾಡಿದ್ದಾನೆ. ಆದರೆ ಕಳೆದ ಎರಡು ದಿನಗಳ ಹಿಂದೆಯೇ ಸದನದಲ್ಲಿ ಕೊಡಗು ಜಿಲ್ಲೆಗೆ ಭೇಟಿ ನೀಡುವುದಾಗಿ ವಿರಾಜಪೇಟೆ ಶಾಸಕ ಬೋಪಯ್ಯ ಅವರಿಗೆ ತಿಳಿಸಿದ್ದೇನೆ. ಅಲ್ಲದೇ ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ತಾನು ಜಿಲ್ಲೆಯಲ್ಲಿ ಪ್ರವಾಸ ಮಾಡುವುದಾಗಿ ಆಶ್ವಾಸನೆ ನೀಡಿದ್ದೆ, ಈ ವೇಳೆ ಜನರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ನೀಡಲಾಗುತ್ತದೆ. ಆದರೆ ನನ್ನ ವಿರುದ್ಧ ಆರೋಪ ಮಾಡುವ ಮೊದಲು ಈ ಹಿಂದಿನ 70 ವರ್ಷ ಆಳ್ವಿಕೆ ನಡೆಸಿದ ಸರ್ಕಾರ ಸಮಸ್ಯೆ ಏನು ಪರಿಹಾರ ನೀಡಿವೆ. 70 ವರ್ಷಗಳ ಸಮಸ್ಯೆಗಳು 2 ತಿಂಗಳಲ್ಲಿ ಪ್ರಾರಂಭವಾಗಿದೆಯಾ? ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಜುಲೈ 19ಕ್ಕೆ ಕೊಡಗು ಭೇಟಿ: ಇದೇ ವೇಳೆ 19 ಕ್ಕೆ ಕೊಡಗಿಗೆ ಭೇಟಿ ನೀಡುವುದಾಗಿ ಖಚಿತ ಪಡಿಸಿದ ಸಿಎಂ, ವಿಡಿಯೋದಲ್ಲಿ ಮಾತನಾಡಿದ ಹುಡುಗನ ಮನೆಗೇ ಹೋಗುತ್ತೇನೆ. ಕೊಡಗಿನ ನೋವಿಗೆ ಸ್ಪಂದಿಸಿಲ್ಲ ಎಂದು ಆರೋಪ ಮಾಡಿದ್ದೀರಿ.  ಬಿಜೆಪಿ ಅವರು ಹುಡುಗನ ಕೈಯಲ್ಲಿ ವಿಡಿಯೋ ಮಾಡಿಸಿ ವೈರಲ್ ಆಗುವಂತೆ ಮಾಡಿದ್ದೀರಿ. ಇದೆಲ್ಲವೂ ಬೇಕು ಎಂದು ಮಾಡಿಸುತ್ತಿದ್ದಾರೆ. ರಾಜ್ಯದ ರೈತರು ಸೇರಿದಂತೆ ತಮಿಳುನಾಡಿನ ಜನ ನಾಲ್ಕು ವರ್ಷದಿಂದ ಕಷ್ಟ ಅನುಭವಿಸುತ್ತಿದ್ದಾರೆ. ತಾಯಿ ಚಾಮುಂಡೇಶ್ವರಿ ದಯೆಯಿಂದ ಕೆಆರ್ ಎಸ್ ತುಂಬಿದೆ. ಮಂಡ್ಯಗಳ ಕೆರೆ ತುಂಬಿಸಲು ಸೂಚನೆ ನೀಡಲಾಗಿದೆ. ಅಲ್ಲದೇ ತಮಿಳುನಾಡಿಗೆ ನೀರು ಬಿಡಲು ಹೇಳಿದ್ದೇನೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *