ಮಡಿಕೇರಿ: ತುರ್ತುಚಿಕಿತ್ಸೆಗೆ ರೋಗಿಯನ್ನು ಕರೆದೊಯ್ಯಲು ಅಂತ ಅಂಬುಲೆನ್ಸ್ ಗಳಿವೆ. ಎಂತಹದ್ದೇ ಪರಿಸ್ಥಿತಿ ಇದ್ರೂ ಅಂಬುಲೆನ್ಸ್ ಗಳ ಓಡಾಟಕ್ಕೆ ಎಲ್ಲರೂ ತಕ್ಷಣವೇ ಅನುವು ಮಾಡಿಕೊಡ್ತಾರೆ. ಆದರೆ ಇದನ್ನೇ ದುರ್ಬಳಕೆ ಮಾಡಿಕೊಂಡಿರುವ ಕಿಡಿಗೇಡಿಗಳು ರೋಗಿಗಳನ್ನು ಸಾಗಿಸುವ ನೆಪವೊಡ್ಡಿ ಲಾಕ್ ಡೌನ್ ನಡುವೆ ಜನರನ್ನು ಸಾಗಿಸುತ್ತಿದ್ದಾರೆ.
ಹೌದು. ಕೊರೊನಾ ಮಹಾಮಾರಿ ಹರಡದಂತೆ ಜನರು ಒಂದೆಡೆಯಿಂದ ಮತ್ತೊಂದೆಡೆ ಓಡಾಡಬಾರದೆಂಬ ಉದ್ದೇಶದಿಂದ ವಾಹನಗಳ ಸಂಚಾರವನ್ನೇ ನಿರ್ಬಂಧಿಸಲಾಗಿದೆ. ಆದರೂ ರೋಗಿ ನೆಪ ಹೇಳಿದ ಬೆಂಗಳೂರಿನ ಪಾದರಾಯನಪುರದ ಅಂಬುಲೆನ್ಸ್ ಡ್ರೈವರ್ ಆಸೀಫ್ ಬಾಷಾ ಎಂಬ ಕಿಡಿಗೇಡಿ ಕೊಡಗಿನ ಕೂಡಿಗೆಯಲ್ಲಿರುವ ಯುವಕನೊಬ್ಬನನ್ನು ಕರೆದೊಯ್ಯಲು ಬಂದು ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಹೊಸೂರಿನ ವೆಂಕಟೇಶ್ ಎಂಬ ವ್ಯಕ್ತಿಯ ಮಗ ಕೊಡಗಿನ ಕೂಡಿಗೆಯ ತನ್ನ ಸ್ನೇಹಿತನ ಮನೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದ. ಹೀಗಾಗಿ ಅವನನ್ನು ಕರೆದೊಯ್ಯಲು ಡ್ರೈವರ್ ಆಸೀಫ್ ಪ್ಲಾನ್ ರೂಪಿಸಿ ಬಂದಿದ್ದ. ಅಂಬ್ಯುಲೆನ್ಸ್‍ನಲ್ಲಿ ಆರೀಫ್ ಎಂಬ ಡಯಾಬಿಟೀಸ್ ರೋಗಿಯನ್ನು ಚಿಕಿತ್ಸೆಗಾಗಿ ಕರೆದೊಯ್ಯುತ್ತಿರುವುದಾಗಿ ಅಂಬುಲೆನ್ಸ್ ನಲ್ಲಿ ಕೂರಿಸಿಕೊಂಡು ಬಂದಿದ್ದ. ಈ ಪ್ಲಾನ್ ಎಲ್ಲೆಡೆ ವರ್ಕೌಟ್ ಆಗಿತ್ತು. ಆದರೆ ಕೊಡಗಿನ ಕುಶಾಲನಗರದ ಕೊಪ್ಪ ಚೆಕ್‍ಪೋಸ್ಟ್ ನಲ್ಲಿ ಕುಶಾಲನಗರ ಸಿಪಿಐ ಮಹೇಶ್ ದೇವ್ರು ಮತ್ತು ತಂಡ ತೀವ್ರ ತಪಾಸಣೆ ನಡೆಸಿದಾಗ ಸಿಕ್ಕಿಹಾಕಿಕೊಂಡಿದ್ದಾರೆ.
ಆಸಿಫ್ ಮತ್ತು ಆರೀಪ್ ಈ ಇಬ್ಬರು ಕೊಡಗಿನ ಬಂದು ಯುವಕನನ್ನು ಕರೆದೊಯ್ಯಲು 10 ಸಾವಿರ ವಸೂಲಿ ಮಾಡಿದ್ರಂತೆ. ಸದ್ಯ ಮೂವರ ವಿರುದ್ಧ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂವರನ್ನು ಕೊಡಗು ಜಿಲ್ಲಾಸ್ಪತ್ರೆಯ ಮಾಸ್ ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ.