ಮಡಿಕೇರಿ: ಮಗನ ಸಾಲ ತೀರಿಸಲು ತನ್ನ ಪಿಂಚಣಿ ಹಣವನ್ನು ಡ್ರಾ ಮಾಡಿ ಬರುತ್ತಿದ್ದ ವೇಳೆ ಖತರ್ನಾಕ್ ಕಳ್ಳರು 3 ಲಕ್ಷ ರೂ. ಹಣವನ್ನು ಎಗರಿಸಿದ ಘಟನೆ ಕೊಡಗು ಜಿಲ್ಲೆ ಕುಶಾಲನಗರದಲ್ಲಿ ನಡೆದಿದೆ.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಮುತ್ತಿನಮಳ್ಳುಸೋಗೆ ಶಿವಕುಮಾರ್ ನಾಯಕ್ ಹಣ ಕಳೆದು ಕೊಂಡವರಾಗಿದ್ದಾರೆ. ಕಳ್ಳರು ಹಣ ಕದಿಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮಡಿಕೇರಿಯ ಉದ್ಯೋಗ ವಿನಿಮಯ ಕಚೇರಿ ನೌಕರನಾಗಿದ್ದು ಶಿವಕುಮಾರ್ ನಾಯಕ್ ಅವರು ನಾಲ್ಕು ತಿಂಗಳ ಹಿಂದೆಯಷ್ಟೇ ನಿವೃತ್ತಿ ಹೊಂದಿದ್ದರು. ಬಳಿಕ ಮಗನ ಮದುವೆ ಮಾಡಿದ್ದು, ಸಾಲ ಮಾಡಿದ್ದರು. ಈ ಸಾಲ ತೀರಿಸಲೆಂದು ಶಿವಕುಮಾರ್ ಅವರು ಕೊಡಗಿನ ಕುಶಾಲನಗರ ಎಸ್‍ಬಿಐ ಬ್ಯಾಂಕ್‍ನಿಂದ ತನ್ನ ಪಿಂಚಣಿ ಹಣವನ್ನು ಡ್ರಾ ಮಾಡಿದ್ದಾರೆ. ಈ ವೇಳೆ ಶಿವಕುಮಾರ್ ಅವರನ್ನು ಮೂವರು ಕಳ್ಳರು ಹಿಂಬಾಲಿಸಿದ್ದಾರೆ. ಅಲ್ಲದೆ ಕಳ್ಳರು ಬ್ಯಾಂಕ್ ಮುಂದೆ ನಿಲ್ಲಿಸಿದ್ದ ಶಿವಕುಮಾರ್ ಅವರ ಬೈಕ್ ಟಯರ್ ಗಾಳಿ ತೆಗೆದಿದ್ದಾರೆ.
ಇತ್ತ ಕಳ್ಳರು, ಹಣ ಡ್ರಾ ಮಾಡಿಕೊಂಡ ಬಂದ ಶಿವಕುಮಾರ್ ಅವರೊಂದಿಗೆ ನಿಮ್ಮ ಬೈಕ್ ಪಂಚರ್ ಆಗಿದೆ ಎಂದು ಹೇಳಿದ್ದಾರೆ. ಹೀಗಾಗಿ ಶಿವಕುಮಾರ್ ಪಂಚರ್ ಅಂಗಡಿಗೆ ಬೈಕ್ ತಳ್ಳಿಕೊಂಡು ಬಂದಿದ್ದಾರೆ. ಇದೇ ವೇಳೆ ಪಂಚರ್ ಅಂಗಡಿಯ ಮುಂದೆ ಶಿವಕುಮಾರ್ ಗಮನವನ್ನು ಬೇರೆಡೆ ಸೆಳೆದ ಕಳ್ಳರು ಹಣ ಎಗರಿಸಿದ್ದಾರೆ.
ಬೈಕ್ ಚೀಲದಲ್ಲಿ ಹಣ ಇಟ್ಟು ಅಂಗಡಿ ಒಳಗೆ ಹೋಗಿದ್ದ ಶಿವಕುಮಾರ್, ಹೊರಗೆ ಬರುವಷ್ಟರಲ್ಲಿ ಮೂರು ಲಕ್ಷ ಹಣ ನಾಪತ್ತೆಯಾಗಿದೆ. ಕೂಡಲೇ ಅವರು ಕುಶಾಲನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ಸ್ವೀಕರಿಸಿರುವ ಪೊಲೀಸರು, ಸಿಸಿಟಿವಿ ದೃಶ್ಯ ಆಧರಿಸಿ ತನಿಖೆ ನಡೆಸುತ್ತಿದ್ದಾರೆ.