– ವೈದ್ಯಕೀಯ ಸೇವೆಯ ಜೊತೆ ಸಮಾಜ ಸೇವೆ
ಮಡಿಕೇರಿ: ಕೊರೊನಾ ಮಹಾಮಾರಿಯನ್ನು ನಿಯಂತ್ರಿಸಲು ದೇಶವನ್ನು ಲಾಕ್‍ಡೌನ್ ಮಾಡಿ ತಿಂಗಳು ಕಳೆಯುತ್ತಿದೆ. ಈ ನಡುವೆ ದುಡಿಮೆಯೂ ಇಲ್ಲದೆ ಆಟೋ ಚಾಲಕರ ಸ್ಥಿತಿಯೂ ಶೋಚನೀಯವಾಗಿದೆ.
ಆಟೋಗಳನ್ನು ಬಾಡಿಗೆ ಪಡೆದು ದುಡಿಯುತ್ತಿದ್ದ ಚಾಲಕರ ಸ್ಥಿತಿಯಂತೂ ಇನ್ನೂ ಗಂಭೀರ. ಹೀಗಾಗಿಯೇ ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಆಟೋ ಓಡಿಸಿಕೊಂಡು ಬದುಕು ನಡೆಸುತ್ತಿದ್ದ, 40 ಕ್ಕೂ ಹೆಚ್ಚು ಆಟೋ ಚಾಲಕರಿಗೆ ಹೆಸರನ್ನು ಹೇಳದ ಮೂವರು ವೈದ್ಯರ ತಂಡವೊಂದು ಆರ್ಥಿಕ ನೆರವು ನೀಡಿದೆ.
ಪ್ರತೀ ಚಾಲಕರಿಗೆ 1 ಸಾವಿರ ರೂಪಾಯಿ ಧನಸಹಾಯ ನೀಡಿ ನೊಂದವರಿಗೆ ಸಮಾಧಾನ ಮಾಡಿದೆ. ಸೇವಾ ಭಾರತಿ ಸಂಸ್ಥೆಯ ಮೂಲಕ ಈ ಆಟೋ ಚಾಲಕರಿಗೆ ತಲಾ ಒಂದು ಸಾವಿರ ರೂಪಾಯಿ ಚೆಕ್ ವಿತರಣೆ ಮಾಡಿ ತಾತ್ಕಾಲಿಕ ವೆಚ್ಚಕ್ಕೆ ಸಹಾಯ ಮಾಡಿದ್ದಾರೆ. ಆ ಮೂಲಕ ವೈದ್ಯರು ಮಾನವೀಯತೆ ಮೆರೆದಿದ್ದಾರೆ. ವೈದ್ಯರ ಈ ಸಹಾಯಕ್ಕೆ ಆಟೋ ಚಾಲಕರು ಮತ್ತು ಮಾಲೀಕರ ಸಂಘ ಧನ್ಯವಾದ ಅರ್ಪಿಸಿದೆ.