ಭೋಪಾಲ್: ವಿವಾದವೊಂದಕ್ಕೆ ಸಂಬಂಧಿಸಿದಂತೆ ಸಹೋದ್ಯೋಗಿಗಳು ವ್ಯಕ್ತಿಯ ಗುದನಾಳದಿಂದ ಗಾಳಿ ಪಂಪ್ ಮಾಡಿದ ಪರಿಣಾಮ ಆತ ದಾರುಣವಾಗಿ ಮೃತಪಟ್ಟ ಘಟನೆ ಮಧ್ಯಪ್ರದೇಶದ ಶಿವಪುರಿಯಲ್ಲಿ ನಡೆದಿದೆ.
ಈ ಘಟನೆ 45 ದಿನಗಳ ಹಿಂದೆ ನಡೆದಿದ್ದು, ಶನಿವಾರ ವ್ಯಕ್ತಿ ಮೃತಪಟ್ಟ ಬಳಿಕ ಸಾವಿನ ರಹಸ್ಯ ಬಯಲಾಗಿದೆ ಎಂದು ಶಿವಪುರಿ ಎಸ್‍ಪಿ ರಾಜೇಂದ್ರ ಸಿಂಗ್ ಚಂಡೆಲ್ ತಿಳಿಸಿದ್ದಾರೆ.
ಘಟನೆಯ ಕುರಿತು ನಮಗೆ ತಿಳಿದಾಗ ಯಾವುದೇ ದೂರು ನೀಡಿರಲಿಲ್ಲ. ಹೀಗಾಗಿ ಪ್ರಕರಣ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗೆ ಸೂಚನೆ ನೀಡಿದ್ದೇನೆ ಎಂದು ಎಸ್‍ಪಿ ಹೇಳಿದ್ದಾರೆ. ಈ ದುರ್ಘಟನೆ ನವೆಂಬರ್ 8ರಂದು ನಡೆದಿರುವುದಾಗಿ ಮೃತ ವ್ಯಕ್ತಿಯ ಸಹೋದರ ಧನಿರಾಮ್ ಧಕಾಡ್ ತಿಳಿಸಿದ್ದಾರೆ.
ಘಟನೆ ನಡೆದ ದಿನ ಸಹೋದರ ಎಂದಿನಂತೆ ಬೆಳಗ್ಗೆ ಆಫೀಸಿಗೆ ತೆರಳಿದ್ದನು. ಆದರೆ ಮಧ್ಯಾಹ್ನದ ಬಳಿಕ ಸಹೋದರ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿರುವುದಾಗಿ ವ್ಯಕ್ತಿಯೊಬ್ಬರು ಮಾಹಿತಿ ನೀಡಿದರು. ಕೂಡಲೇ ನಾನು ಸಹೋದರನ ಬಳಿ ತೆರಳಿದೆ. ಆಗ ಆತ, ನನಗೆ ಗ್ಯಾಸ್ಟ್ರಿಕ್ ನೋವು ಅಲ್ಲ, ಸಹೋದ್ಯೋಗಿಗಳು ನನ್ನ ಗುದನಾಳದಿಂದ ಕಂಪ್ರೆಸ್ಸರ್ ಮೂಲಕ ಗಾಳಿ ಪಂಪ್ ಮಾಡಿದ್ದಾರೆ ಎಂದು ಬಾಯ್ಬಿಟ್ಟಿದ್ದಾನೆ. ಘಟನೆಯ ತೀವ್ರತೆ ಅರಿತ ಕೂಡಲೇ ಆತನನ್ನು ಅನೇಕ ಆಸ್ಪತ್ರೆಗೆ ಕರೆದೊಯ್ದೆ. ಆದರೆ ಆತ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಸಾವನ್ನಪ್ಪಿದನು ಎಂದು ಧಕಾಡ್ ವಿವರಿಸಿದರು.