ಭೋಪಾಲ್: ಕೊಲೆಯಾಗಿದ್ದಾಳೆ ಎಂದು ಅಂತ್ಯಕ್ರಿಯೆ ಮಾಡಲಾಗಿದ್ದ ಮಹಿಳೆ (woman) ಒಂದೂವರೆ ವರ್ಷದ ಬಳಿಕ ಜೀವಂತವಾಗಿ ಮರಳಿ ಬಂದ ಘಟನೆ ಮಧ್ಯಪ್ರದೇಶದ (Madhya Pradesh) ಮಂದ್ಸೌರ್ ಜಿಲ್ಲೆಯಲ್ಲಿ ನಡೆದಿದೆ.
ಮಂದ್ಸೌರ್‌ನ ಗ್ರಾಮವೊಂದರ ಲಲಿತಾ ಬಾಯಿ 18 ತಿಂಗಳ ಹಿಂದೆ ನಾಪತ್ತೆಯಾಗಿದ್ದಳು. ಅದೇ ಸಮಯದಲ್ಲಿ ಗ್ರಾಮದ ಬಳಿ ಪತ್ತೆಯಾಗಿದ್ದ ಮಹಿಳೆಯ ಶವವನ್ನು ಆಕೆಯ ಕುಟುಂಬಸ್ಥರು ಲಲಿತಾಳದ್ದೇ ಎಂದು ಭಾವಿಸಿತ್ತು. ಮೃತದೇಹದ ಕೈ ಮೇಲಿದ್ದ ಹಚ್ಚೆ. ಕಾಲಿಗೆ ಕಟ್ಟಿದ್ದ ದಾರದಿಂದ ಆಕೆಯದ್ದೇ ಮೃತದೇಹ ಎಂದು ಲಲಿತಾಳ ತಂದೆ ರಮೇಶ್ ನನುರಾಮ್ ಬಂಛಾ ಹೇಳಿಕೊಂಡಿದ್ದರು. ಬಳಿಕ ಆ ಮೃತದೇಹವನ್ನು ಅಂತ್ಯಸಂಸ್ಕಾರ ಮಾಡಲಾಗಿತ್ತು.
ಮೃತದೇಹ ಪತ್ತೆಯಾದ ಬಳಿಕ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು, ಇಮ್ರಾನ್, ಶಾರುಖ್, ಸೋನು ಮತ್ತು ಎಜಾಜ್ ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಿ, ಜೈಲಿಗೆ ಹಾಕಿದ್ದರು. ಈಗ ಲಲಿತಾ ವಾಪಸ್ ಆಗಿದ್ದು ಚರ್ಚೆಗೆ ತೀವ್ರ ಗ್ರಾಸವಾಗಿದೆ.
5 ಲಕ್ಷಕ್ಕೆ ಮಾರಾಟವಾಗಿದ್ದ ಮಹಿಳೆ
ಲಲಿತಾ ತನ್ನ ಗ್ರಾಮಕ್ಕೆ ಮರಳಿದ ಬಳಿಕ ಆಕೆ ಜೀವಂತವಾಗಿರುವುದನ್ನು ನೋಡಿ ಆಘಾತಕ್ಕೊಳಗಾದ ಆಕೆಯ ತಂದೆ ತಕ್ಷಣವೇ ಆಕೆಯನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ನಾಪತ್ತೆಯಾಗಿದ್ದರ ಬಗ್ಗೆ ಮಹಿಳೆ ಪೊಲೀಸರಿಗೆ ಮಾಹಿತಿ ನೀಡಿದ್ದು, ತಾನು ಮನೆ ತೊರೆದು ಶಾರುಖ್ ಎಂಬವನೊಂದಿಗೆ ಭಾನುಪಾರಕ್ಕೆ ಹೋಗಿದ್ದೆ. ಎರಡು ದಿನಗಳ ಕಾಲ ಅಲ್ಲಿಯೇ ಉಳಿದಿದ್ದೆ. ಆತ ನನಗೆ ಅರಿವಿಲ್ಲದಂತೆ ನನ್ನನ್ನು ಇನ್ನೊಬ್ಬ ವ್ಯಕ್ತಿಗೆ 5 ಲಕ್ಷ ರೂ.ಗೆ ಮಾರಾಟ ಮಾಡಿದ್ದ. ನಾನು ಒಂದೂವರೆ ವರ್ಷಗಳ ಕಾಲ ಕೋಟಾದಲ್ಲಿ ಅವನೊಂದಿಗೆ ವಾಸವಾಗಿದ್ದೆ. ಈಗ ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದೇನೆ ಎಂದು ಹೇಳಿಕೊಂಡಿದ್ದಾಳೆ. ಅಲ್ಲದೇ ತನ್ನ ಬಳಿ ಮೊಬೈಲ್ ಇಲ್ಲದಿದ್ದರಿಂದ ಕುಟುಂಬದವರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿಕೊಂಡಿದ್ದಾಳೆ.
ತನ್ನ ಗುರುತನ್ನು ಖಚಿತಪಡಿಸಲು ಮಹಿಳೆ ಆಧಾರ್ ಮತ್ತು ಮತದಾರರ ಗುರುತಿನ ಚೀಟಿಯಂತಹ ದಾಖಲೆಗಳನ್ನು ಸಹ ನೀಡಿದ್ದಾಳೆ. ಲಲಿತಾ ಅವರಿಗೆ ಇಬ್ಬರು ಮಕ್ಕಳಿದ್ದು, ತಾಯಿ ಜೀವಂತವಾಗಿರುವುದನ್ನು ನೋಡಿ ಸಂತೋಷಪಟ್ಟಿದ್ದಾರೆ.
ಗಾಂಧಿ ಸಾಗರ್ ಪೊಲೀಸ್ ಠಾಣೆಯ ಉಸ್ತುವಾರಿ ತರುಣ್ ಭಾರದ್ವಾಜ್ ಅವರು ಮಹಿಳೆಯ ಗ್ರಾಮಕ್ಕೆ ಭೇಟಿ ನೀಡಿದ್ದು, ಗ್ರಾಮಸ್ಥರು ಹಾಗೂ ಕುಟುಂಬಸ್ಥರ ಬಳಿ ಮಾಹಿತಿ ಕಲೆ ಹಾಕಿ, ವಾಪಸ್ ಆಗಿರುವ ಮಹಿಳೆ ಲಲಿತಾ ಎಂದು ದೃಢಪಡಿಸಿದ್ದಾರೆ.
ನಾಲ್ವರು ಅರೆಸ್ಟ್ ಆಗಿದ್ದು ಹೇಗೆ?
ಸೆಪ್ಟೆಂಬರ್ 2023 ರಲ್ಲಿ ಗಾಂಧಿ ಸಾಗರ್ ಪ್ರದೇಶದಿಂದ ಲಲಿತಾ ಕಾಣೆಯಾಗಿದ್ದಳು. ಇದೇ ಸಮಯದಲ್ಲಿ ಆ ಪ್ರದೇಶದಲ್ಲಿ ಟ್ರಕ್ ಅಪಘಾತದ ವೀಡಿಯೊ ಒಂದು ವೈರಲ್ ಆಗಿತ್ತು. ವೀಡಿಯೋದಲ್ಲಿ ಮಹಿಳೆಯ ದೇಹವು ನಜ್ಜುಗುಜ್ಜಾಗಿತ್ತು. ಈ ವೀಡಿಯೊ ಗಮನಿಸಿದ್ದ ಲಲಿತಾಳ ತಂದೆ ಅದು ತಮ್ಮ ಮಗಳು ಎಂದು ಝಬುವಾ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿದ್ದರು. ಪ್ರಕರಣ ಸಂಬಂಧ ಟ್ರಕ್ ಚಾಲಕ ಹಾಗೂ ಆತನ ಸಹಚರರಾದ ನಾಲ್ವರನ್ನು ಪೊಲೀಸರು ಬಂಧಿಸಿದ್ದರು.