ಭೋಪಾಲ್: ಮಧ್ಯಪ್ರದೇಶದಲ್ಲಿ ಗುಜರಾತಿ, ಜೈನ್ ಮತ್ತು ಸಿಂಧಿ ಸಮುದಾಯದವರು ಪ್ರೀ ವೆಡ್ಡಿಂಗ್ ಫೋಟೋಶೂಟ್ ನಿಷೇಧ ಮಾಡಿದ್ದಾರೆ.
ಭೋಪಾಲ್ ನಲ್ಲಿ ಗುಜರಾತಿ, ಜೈನ ಮತ್ತು ಸಿಂಧಿ ಸಮುದಾಯದ ಮುಖಂಡರು ಮದುವೆಗೆ ಮುಂಚೆಯೇ ವಧು ಮತ್ತು ವರ ಜೊತೆಯಲ್ಲಿ ಫೋಟೋ ತೆಗೆಸಿಕೊಳ್ಳುವುದು ನಮ್ಮ ಸಂಸ್ಕೃತಿಯಲ್ಲ. ಆದ್ದರಿಂದ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿದವರನ್ನು ಸಮುದಾಯದಿಂದ ಹೊರಹಾಕುತ್ತೇವೆ ಎಂದು ಬೆದರಿಕೆ ಹಾಕಿವೆ.
Advertisement
Advertisement
ಸಮುದಾಯಗಳ ಈ ನಿರ್ಧಾರಕ್ಕೆ ಬೆಂಬಲ ಸೂಚಿಸಿರುವ ಮಧ್ಯಪ್ರದೇಶದ ಸಾರ್ವಜನಿಕ ಸಂಪರ್ಕ ಸಚಿವ ಪಿಸಿ ಶರ್ಮಾ, ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಎಂಬುದು ನಮ್ಮ ಸಂಸ್ಕೃತಿ ಅಲ್ಲ. ಇಲ್ಲಿನ ಜನರು ನಿಷೇಧಿಸಿರುವುದನ್ನು ಸಾಮಾಜಿಕ ದೃಷ್ಟಿಕೋನದಿಂದ ನಾನು ಒಳ್ಳೆಯದು ಎಂದು ನಂಬುತ್ತೇನೆ. ಜನರ ಹಿಂದಿನ ಸಂಸ್ಕೃತಿ ಮತ್ತು ಹಳೆಯ ಸಂಪ್ರದಾಯದ ಪ್ರಕಾರ ಮದುವೆಯಾದರೆ ವಿವಾಹ ಹೆಚ್ಚು ಯಶಸ್ವಿಯಾಗುತ್ತದೆ ಮತ್ತು ಸಂತೋಷದಾಯಕವಾಗಿ ಇರುತ್ತದೆ ಎಂದು ಹೇಳಿದ್ದಾರೆ.
Advertisement
ಸಮಾಜದ ಈ ನಿರ್ಧಾರವನ್ನು ಸಮರ್ಥನೆ ಮಾಡಿಕೊಂಡಿರುವ ಗುಜರಾತಿ ಸಮುದಾಯದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂಜಯ್ ಪಾಟೀಲ್, ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಎಂಬುದು ಒಂದು ತಪ್ಪು ಕಲ್ಪನೆ. ಎಷ್ಟೋ ವಿವಾಹಗಳು ನಿಶ್ಚಿತಾರ್ಥ ಆದ ನಂತರ ಮುರಿದು ಬೀಳುತ್ತವೆ. ಆದ್ದರಿಂದ ಈ ರೀತಿಯ ಸಂಪ್ರದಾಯವನ್ನು ನಾವು ತಡೆಯಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
Advertisement
ಈ ವಿಚಾರದ ಬಗ್ಗೆ ಭೋಪಾಲ್ ಜೈನ ಸಮಾಜದ ಅಧ್ಯಕ್ಷರಾದ ಪ್ರಮೋದ್ ಹಿಮಾಂಶು ಅವರು ಮಾತನಾಡಿ, ನಮ್ಮ ಸಮಾಜದ ಆಧ್ಯಾತ್ಮಿಕ ಗುರುಗಳು ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಅನ್ನು ಅಶ್ಲೀಲ ಎಂದು ಹೇಳಿದ ನಂತರ ನಾವು ನಮ್ಮ ಸಮಾಜದಲ್ಲಿ ಅದನ್ನು ನಿಷೇಧ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಫೋಟೋ ಶೂಟ್ ನಿಷೇಧಿಸಿದ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಸಿಂಧಿ ಸಮಾಜದ ಅಧ್ಯಕ್ಷ ಭಗವಾನ್ ದಾಸ್ ಇಸ್ರಾನಿ ಅವರು, ನಮ್ಮ ಸಮುದಾಯದಲ್ಲೂ ಕೂಡ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಅನ್ನು ನಿಷೇಧ ಮಾಡಿದ್ದೇವೆ. ಈ ನಿಯಮವನ್ನು ಪಾಲಿಸುವಂತೆ ನಮ್ಮ ಸಮುದಾಯದ ಸದಸ್ಯರಿಗೆ ಈಗಾಗಲೇ ತಿಳಿಸಿದ್ದೇವೆ ಎಂದು ಹೇಳಿದ್ದಾರೆ.
ಕಳೆದ ವರ್ಷ ಚತ್ತೀಸ್‍ಗಢದ ಸಿಂಧಿ ಮತ್ತು ಮಹೇಶ್ವರಿ ಸಮುದಾಯಗಳು ಇದೇ ರೀತಿಯಲ್ಲಿ ಮದುವೆಗೂ ಮುಂಚೆಯೇ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಬಾರದು ಎಂದು ನಿಷೇಧ ಮಾಡಿದ್ದವು.