Connect with us

Latest

ನಾಳೆ ಬೆಳಗ್ಗೆಯೇ ಬಹುಮತ ಸಾಬೀತುಪಡಿಸಿ- ಕೈ ಸರ್ಕಾರಕ್ಕೆ ಎಂಪಿ ರಾಜ್ಯಪಾಲ ಆದೇಶ

Published

on

– ರಾಜ್ಯಪಾಲರ ಭಾಷಣದ ಬಳಿಕ ವಿಶ್ವಾಸ ಮತಯಾಚನೆ
– ಮುಂದೂಡುವುದು, ವಿಳಂಬ, ಅಮಾನತು ಸಾಧ್ಯವಿಲ್ಲ
– ಆರು ಸಚಿವರ ರಾಜೀನಾಮೆ ಅಂಗೀಕಾರ

ಭೋಪಾಲ್: ಮಧ್ಯಪ್ರದೇಶ ರಾಜಕೀಯ ಹೈ ಡ್ರಾಮಾ ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಿದ್ದು, ಕಾಂಗ್ರೆಸ್ಸಿನ 22 ಶಾಸಕರ ರಾಜೀನಾಮೆ ಪೈಕಿ ಇದೀಗ ಆರು ಸಚಿವರ ರಾಜೀನಾಮೆಯನ್ನು ಸ್ಪೀಕರ್ ಅಂಗೀಕರಿಸಿದ್ದು, ಮತ್ತೊಂದೆಡೆ ನಾಳೆಯೇ ಬಹುಮತ ಸಾಬೀತು ಪಡಿಸುವಂತೆ ಕಮಲ್‍ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಮಧ್ಯಪ್ರದೇಶದ ರಾಜ್ಯಪಾಲ ಲಾಲ್‍ಜೀ ಟಂಡನ್ ನಿರ್ದೇಶಿಸಿದ್ದಾರೆ.

ಈ ಮೂಲಕ ಕಾಂಗ್ರೆಸ್ ಸರ್ಕಾರ ರಚನೆಯಾಗಿ ಕೇವಲ 15 ತಿಂಗಳಿಗೆ ಬೀಳುವ ಹಂತಕ್ಕೆ ತಲುಪಿದೆ. ಮಾರ್ಚ್ 16ರಂದು ಬೆಳಗ್ಗೆ 11ಕ್ಕೆ ನನ್ನ ಭಾಷಣದ ಮೂಲಕ ಅಧಿವೇಶನ ಆರಂಭವಾಗಲಿದೆ. ಇದಾದ ಬಳಿಕ ಮೊದಲ ಕೆಲಸವೇ ವಿಶ್ವಾಸ ಮತಯಾಚನೆ ಮಾಡುವುದಾಗಿದೆ ಎಂದು ರಾಜ್ಯಪಾಲರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ಬಟನ್ ಒತ್ತುವ ಮೂಲಕ ವಿಶ್ವಾಸ ಮತಯಾಚನೆ ಪ್ರಕ್ರಿಯೆ ನಡೆಯಲಿದೆ. ಇನ್ನಾವುದೇ ಮತದಾನ ಪ್ರಕ್ರಿಯೆ ಸ್ವೀಕಾರಾರ್ಹವಲ್ಲ. ಅಲ್ಲದೆ ಮಾರ್ಚ್ 16ರಂದೇ ವಿಶ್ವಾಸ ಮತಯಾಚನೆ ಪ್ರಕ್ರಿಯೆ ಪೂರ್ಣಗೊಳ್ಳಬೇಕು. ಈ ಪ್ರಕ್ರಿಯೆಯನ್ನು ಮುಂದೂಡುವುದು, ವಿಳಂಬ ಮಾಡುವುದು ಅಥವಾ ಅಮಾನತುಗೊಳಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

ಸಚಿವರ ರಾಜೀನಾಮೆ ಅಂಗೀಕಾರ:
ಆರು ಬಂಡಾಯ ಮಂತ್ರಿಗಳ ರಾಜೀನಾಮೆಯನ್ನು ಮಧ್ಯಪ್ರದೇಶದ ವಿಧಾನಸಭಾ ಸ್ಪೀಕರ್ ನರ್ಮದಾ ಪ್ರಸಾದ್ ಪ್ರಜಾಪತಿ ಅವರು ಶನಿವಾರ ಅಂಗೀಕರಿಸಿದ್ದಾರೆ. ಗೋವಿಂದ್ ಸಿಂಗ್ ರಜಪೂತ್, ಮಹೇಂದ್ರ ಸಿಂಗ್ ಸಿಸೋಡಿಯಾ, ಪ್ರಭುರಾಮ್ ಚೌಧರಿ, ಪ್ರದುಮನ್ ತೋಮರ್, ತುಳಸಿರಾಮ್ ಸಿಲಾವತ್ ಹಾಗೂ ಇಮಾರ್ತಿ ದೇವಿ ಅವರನ್ನು ಕಾಂಗ್ರೆಸ್ ಸರ್ಕಾರದ ಸಮ್ಮುಖದಲ್ಲಿ ರಾಜ್ಯಪಾಲರು ಸಚಿವ ಸಂಪುಟದದಿಂದ ವಜಾ ಮಾಡಿದ್ದಾರೆ.

ಇತ್ತೀಚೆಗಷ್ಟೇ ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್ ಪಕ್ಷಕ್ಕೆ ಗುಡ್‍ಬೈ ಹೇಳಿದ್ದರು. ಅವರೊಂದಿಗೆ ಸಿಂಧಿಯಾ ಆಪ್ತರಾಗಿದ್ದ 22 ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ್ದರು. ನಂತರ ಜ್ಯೋತಿರಾದಿತ್ಯ ಸಿಂದಿಯಾ ಬಿಜೆಪಿ ಸೇರಿದ್ದರು. ಒಟ್ಟು 22 ಶಾಸಕರ ರಾಜೀನಾಮೆಯಿಂದ ಕಮಲನಾಥ್ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. 230 ಬಲದ ಮಧ್ಯಪ್ರದೇಶ ವಿಧಾನಸಭೆಯಲ್ಲಿ ಇಬ್ಬರು ಶಾಸಕರ ನಿಧನದಿಂದ ಸದ್ಯ 228 ಶಾಸಕರಿದ್ದಾರೆ. ಸದ್ಯ 22 ಮಂದಿ ಕಾಂಗ್ರೆಸ್ ಶಾಸಕರ ರಾಜೀನಾಮೆಯಿಂದ ಸಿಎಂ ಕಮಲನಾಥ್ ಸರ್ಕಾರ ಅಲ್ಪ ಮತಕ್ಕೆ ಕುಸಿದಿದೆ. ಈಗ ಸದನದಲ್ಲಿ 206 ಶಾಸಕರಿದ್ದು ಬಹುಮತ ಸಾಧಿಸಲು 104 ಶಾಸಕರ ಬೆಂಬಲ ಬೇಕಿದೆ. ಬಿಜೆಪಿ ಬಳಿ 107 ಶಾಸಕರಿದ್ದರೆ, ಕಾಂಗ್ರೆಸ್ ಬಳಿ 92 ಶಾಸಕರಿದ್ದಾರೆ.

ಒಟ್ಟು 230 ವಿಧಾನಸಭಾ ಕ್ಷೇತ್ರಗಳಿರುವ ಮಧ್ಯಪ್ರದೇಶದಲ್ಲಿ 2018ರ ಚುನಾವಣೆಯಲ್ಲಿ ಕಾಂಗ್ರೆಸ್ 114, ಬಿಜೆಪಿ 109, ಪಕ್ಷೇತರ 1, ಬಿಎಸ್‍ಪಿ 2, ಎಸ್‍ಪಿ 2 ಕ್ಷೇತ್ರದಲ್ಲಿ ಜಯಗಳಿಸಿತ್ತು. 2019ರ ಲೋಕಸಭಾ ಚುನಾವಣೆಯ ಒಟ್ಟು 29 ಕ್ಷೇತ್ರಗಳ ಪೈಕಿ ಬಿಜೆಪಿ 28 ರಲ್ಲಿ ಗೆದ್ದಿದ್ದರೆ 1 ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಗಳಿಸಿತ್ತು.

Click to comment

Leave a Reply

Your email address will not be published. Required fields are marked *