Connect with us

Latest

ಕೆಮಿಕಲ್, ಸೋಪಿನ ಪುಡಿ ಸೇರಿಸಿ 20 ಸಾವಿರ ಲೀಟರ್ ಹಾಲು ಮಾರಾಟ

Published

on

– ಕೃತಕ ಹಾಲನ್ನು ತಯಾರಿಸುತ್ತಿದ್ದ ವಂಚಕ ಅರೆಸ್ಟ್
– ಡೈರಿ ಮೇಲೆ ಆಹಾರ ಇಲಾಖೆಯಿಂದ ದಾಳಿ
– ಮಧ್ಯಪ್ರದೇಶದಲ್ಲಿ ತಯಾರಿಸಿ ರಾಜಸ್ಥಾನಕ್ಕೆ ಮಾರಾಟ

ಭೋಪಾಲ್: ಮಧ್ಯಪ್ರದೇಶದ ಹಾಲಿನ ವ್ಯಾಪಾರಿಯೋರ್ವ ಕೆಮಿಕಲ್ ಹಾಗೂ ಸೋಪಿನ ಪುಡಿ ಸೇರಿಸಿ ಪ್ರತಿದಿನ ಬರೋಬ್ಬರಿ 15ರಿಂದ 20 ಸಾವಿರ ಲೀಟರ್ ಹಾಲನ್ನು ತಯಾರಿಸಿ, ಅದನ್ನು ತಾಜಾ ಹಾಲಿನ ಜೊತೆ ಸೇರಿಸಿ ಮಾರಾಟ ಮಾಡಿ ಗ್ರಾಹಕರಿಗೆ ಮೋಸ ಮಾಡುತ್ತಿದ್ದ ಪ್ರಕರಣ ಬಯಲಿಗೆ ಬಂದಿದೆ.

ಹಾಲಿನ ಡೈರಿ ನಡೆಸುತ್ತಿದ್ದ ರಾಜು ಗುರ್ಜರ್ ಕಲಬೆರಕೆ ಹಾಲನ್ನು ಮಾರಾಟ ಮಾಡುತ್ತಿದ್ದನು. ಈ ಕೆಮಿಕಲ್ ಮಿಶ್ರಿತ ಹಾಲನ್ನು ತನ್ನ ಸುತ್ತಮುತ್ತಲ ಪ್ರದೇಶಕ್ಕೆ ಮಾರಾಟ ಮಾಡದೇ ದೂರದ ರಾಜಸ್ಥಾನದ ಕೋಟಾ ಪ್ರದೇಶದಲ್ಲಿ ಮಾರಾಟ ಮಾಡಿ ರಾಜು ಹಣ ಮಾಡುತ್ತಿದ್ದನು. ಆರೋಗ್ಯಕ್ಕೆ ಮಾರಕವಾದ ಕೆಮಿಕಲ್ಸ್, ತಾಳೆ ಎಣ್ಣೆ, ಸೋಪಿನ ಪುಡಿ ಹೀಗೆ ಹಲವು ಸಾಮಾಗ್ರಿಗಳನ್ನು ಬಳಸಿ ರಾಜು ಕೃತಕ ಹಾಲನ್ನು ತಯಾರಿಸುತ್ತಿದ್ದನು. ಇದನ್ನೂ ಓದಿ: ಶಾಂಪೂ, ಯೂರಿಯಾದಿಂದ ತಯಾರಿಸ್ತಿದ್ರು ಹಾಲು – 7 ವರ್ಷದಲ್ಲಾದ್ರು 2 ಕೋಟಿಗೆ ಒಡೆಯರು!

ಈ ಬಗ್ಗೆ ಮಾಹಿತಿ ತಿಳಿದ ರಾಮ್ಪುರ ಜಿಲ್ಲಾಡಳಿತ ಹಾಗೂ ಆಹಾರ ಇಲಾಖೆ ರಾಜು ನಡೆಸುತ್ತಿದ್ದ ಡೈರಿ ಮೇಲೆ ಬುಧವಾರ ರೇಡ್ ನಡೆಸಿದ್ದು, ಈ ಅಕ್ರಮವನ್ನು ಬಯಲಿಗೆ ತಂದಿದೆ. ಪ್ರತಿದಿನ ರಾಜು ಸುತ್ತಮುತ್ತ ಹಳ್ಳಿಗಳಿಂದ ಸುಮಾರು 5 ಸಾವಿರ ಲೀಟರ್ ಹಾಲನ್ನು ಸಂಗ್ರಹಿಸುತ್ತಿದ್ದನು. ಬಳಿಕ ಕೆಮಿಕಲ್ಸ್, ತಾಳೆ ಎಣ್ಣೆ, ಸೋಪಿನ ಪುಡಿಗಳನ್ನು ಹಾಲಿಗೆ ಸೇರಿಸಿ 5 ಸಾವಿರ ಲೀಟರ್ ಇದ್ದ ಹಾಲನ್ನು 15ರಿಂದ 20 ಸಾವಿರ ಲೀಟರ್ ಕೃತಕ ಹಾಲಾಗಿ ತಯಾರು ಮಾಡುತ್ತಿದ್ದನು. ಅಲ್ಲದೆ ಈ ಹಾಲನ್ನು ಮಧ್ಯಪ್ರದೇಶದಲ್ಲಿ ಮಾರಾಟ ಮಾಡದೇ ದೂರದ ರಾಜಸ್ಥಾನದ ಕೋಟಾ ಸೇರಿದಂತೆ ಇತರೆ ಪ್ರದೇಶಕ್ಕೆ ಸರಬರಾಜು ಮಾಡುತ್ತಿದ್ದನು ಎಂಬ ವಿಚಾರ ಬಟಾಬಯಲಾಗಿದೆ. ಇದನ್ನೂ ಓದಿ: 3 ಹಾಲು ಉತ್ಪಾದಕ ಘಟಕಗಳ ಮೇಲೆ ದಾಳಿ – 10,000 ಲೀಟರ್ ಕೃತಕ ಹಾಲು ವಶ

ಸದ್ಯ ಅಧಿಕಾರಿಗಳು ಡೈರಿಯಲ್ಲಿದ್ದ ಕೆಮಿಕಲ್ಸ್, ತಾಳೆ ಎಣ್ಣೆ, ಸೋಪಿನ ಪುಡಿಗಳನ್ನು ವಶಕ್ಕೆ ಪಡೆದಿದ್ದು, ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಈ ಹಿಂದೆ ಮುಂಬೈನಲ್ಲಿ ಹಾಲಿನ ವ್ಯಾಪಾರಿಯೋರ್ವ ಹೆಚ್ಚಿನ ಪ್ರಮಾಣದಲ್ಲಿ ಹಾಲು ಉತ್ಪಾದನೆ ಮಾಡಲು ಹಸುಗಳಿಗೆ ಡ್ರಗ್ಸ್ ನೀಡುತ್ತಿದ್ದ ಪ್ರಕರಣ ಬಯಲಾಗಿತ್ತು. ಚುಚ್ಚುಮದ್ದಿನ ಮೂಲಕ ಹಸುಗಳಿಗೆ ವ್ಯಾಪಾರಿ ಡ್ರಗ್ಸ್ ನೀಡುತ್ತಿದ್ದನು. ದೇಶದಲ್ಲಿ ನಿಷೇಧವಾಗಿರುವ ಡ್ರಗ್ಸ್ ಗಳನ್ನು ವ್ಯಾಪಾರಿ ಅಕ್ರಮವಾಗಿ ತರಿಸಿಕೊಂಡು ಹಾಲು ಉತ್ಪಾದನೆ ಹೆಚ್ಚು ಮಾಡಿ, ಹಣ ಸಂಪಾದಿಸುತ್ತಿದ್ದನು.

Click to comment

Leave a Reply

Your email address will not be published. Required fields are marked *